ಚಂಡಮಾರುತದಿಂದ ಕರಾವಳಿಯಲ್ಲಿ ಮಳೆಯ ಆರ್ಭಟ !! | ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ – ನಿರಾಶೆಯಿಂದ ವಾಪಸ್ಸಾಗುತ್ತಿದ್ದಾರೆ ಪ್ರವಾಸಿಗರು

ಕರಾವಳಿಯಲ್ಲಿ ಕಳೆದೆರಡು ದಿನಗಳಿಂದ ಜಿಟಿಜಿಟಿ ಮಳೆಯಾಗುತ್ತಿದೆ. ಬಂದರು ನಗರಿ ಮಂಗಳೂರಿನಲ್ಲಿ ತಣ್ಣನೆಯ ಗಾಳಿ ಬೀಸುತ್ತಿದ್ದು, ಉಡುಪಿಯಲ್ಲಿ ಅಕಾಲಿಕ ಮಳೆ ಶುರುವಾಗಿದೆ. ಬಿರು ಬೇಸಿಗೆಯಿಂದ ಬೆಂದಿದ್ದ ಉಭಯ ಜಿಲ್ಲೆಗಳಲ್ಲಿ ಮಳೆಗಾಲದ ವಾತಾವರಣವೇ ಸೃಷ್ಟಿಯಾಗಿದೆ. ಆದರೆ ಅಸನಿ ಚಂಡಮಾರುತ ದೂರದೂರಿನ ಪ್ರವಾಸಿಗರಿಗೆ ಮಾತ್ರ ತುಂಬಾನೇ ಕಿರಿಕ್ ಕೊಟ್ಟಿದೆ.

ಬಂಗಾಳ ಕೊಲ್ಲಿಯಲ್ಲಿ ಉಂಟಾದ ಚಂಡಮಾರುತದ ಪರಿಣಾಮ ರಾಜ್ಯದ ಕರಾವಳಿ ಭಾಗದಲ್ಲಿ ಭಾರೀ ಮಳೆ ಆಗುತ್ತಿದೆ. ಗಾಳಿಯೂ ತುಂಬಾ ವೇಗವಾಗಿ ಬೀಸುತ್ತಿದೆ. ಸಾಲು ಸಾಲು ರಜೆಗಳ ನಡುವೆ ಮಂಗಳೂರಿಗೆ ಹೊರಟಿದ್ದ ಪ್ರವಾಸಿಗರಿಗೆ ನಿರಾಶೆಯಾಗಿದೆ. ಬೀಚ್ ಮತ್ತು ದೇವಸ್ಥಾನದ ಟೂರ್ ಪ್ಲಾನ್ ಮಾಡಿ ಬಂದವರು ದೇವರ ದರ್ಶನ ಮಾಡಿ ವಾಪಸ್ಸಾಗುತ್ತಿದ್ದಾರೆ.

ಜೋರು ಅಲೆಗಳಿರುವ ಕಾರಣ ವಾಟರ್ ಸ್ಟೋರ್ಸ್, ಸೈಂಟ್ ಮೇರಿಸ್ ಐಲ್ಯಾಂಡ್ ಹೋಗುವುದು ನಿಷೇಧ ಮಾಡಲಾಗಿದೆ. ಸಮುದ್ರದ ದೂರಕ್ಕೆ ಹೋಗಿ ಸ್ನಾನ ಮಾಡುವುದಕ್ಕೂ ನಿಷೇಧ ಮಾಡಲಾಗಿದೆ. ನಿಷೇಧ ಮಾಹಿತಿ ಇಲ್ಲದೇ ದೂರದ ಊರುಗಳಿಂದ ಪ್ರವಾಸಕ್ಕೆಂದು ರಜೆ ಹಾಕಿ ಮಲ್ಪೆ ಸಮುದ್ರ ತೀರಕ್ಕೆ ಬಂದವರು ನಿರಾಶೆ ವ್ಯಕ್ತಪಡಿಸುತ್ತಿದ್ದಾರೆ. ಹೋಟೆಲ್ ಬುಕ್ಕಿಂಗ್ ಕೂಡ ಕ್ಯಾನ್ಸಲ್ ಮಾಡುತ್ತಿದ್ದಾರೆ. ಹೆಚ್ಚು ದಿನ ಇದ್ದು ಎಂಜಾಯ್ ಮಾಡಬೇಕು ಅಂದುಕೊಂಡ ಪ್ರವಾಸಿಗರು, ತಮ್ಮ ಪ್ಲಾನ್ ಡ್ರಾಪ್ ಮಾಡಿ ತಮ್ಮ ಊರಿಗೆ ಹಿಂದಿರುಗುತ್ತಿದ್ದಾರೆ.

ಕಳೆದ ಕೆಲವು ದಿನದಿಂದಲೂ ಕೆಂಡದಂತಿದ್ದ ಕರಾವಳಿ ಭಾಗದಲ್ಲಿ ಮಳೆ ತಂಪಾಗಿಸಿದೆ. ಅರಬ್ಬಿ ಸಮುದ್ರದಲ್ಲಿ ಆಳೆತ್ತರದ ಅಲೆಗಳು ಏಳುತ್ತಿದ್ದು, ಆಳ ಸಮುದ್ರದ ಮೀನುಗಾರಿಕೆಯನ್ನು ಬಂದ್ ಮಾಡಲಾಗಿದೆ.

Leave A Reply

Your email address will not be published.