ಆಟೋಗೆ ಬೈಕ್ ಟಚ್ ಆಗಿದ್ದಕ್ಕೆ ನಡೆದೇ ಹೋಯಿತು ಭೀಕರ ಕೊಲೆ | ತಲೆಮರೆಸಿಕೊಂಡಿದ್ದ ಆರೋಪಿಗಳು ತಿರುಪತಿಗೆ ಹೋಗಿ ಮುಡಿಕೊಟ್ಟು ಪೊಲೀಸರಿಗೆ ಶರಣು

ಬೆಂಗಳೂರು: ಆಟೋಗೆ ಬೈಕ್ ಟಚ್ ಆಗಿದ್ದಕ್ಕೆ ಯುವಕನನ್ನು ಅಪಹರಿಸಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಗಳ ತಂಡ ಎಲೆಕ್ಟ್ರಾನಿಕ್ ಸಿಟಿ ಠಾಣೆಗೆ ಬಂದು ಶರಣಾಗಿರುವ ಘಟನೆ ನಡೆದಿದೆ.

ಬೇಗೂರಿನ ಲಕ್ಷ್ಮಿಪುರದ ನಿವಾಸಿ ಸುಹಾಸ್ ಅಲಿಯಾಸ್ ಅಮೂಲ್ (20) ಕೊಲೆಯಾದ ಯುವಕ.


Ad Widget

Ad Widget

Ad Widget

ಘಟನೆಯ ವಿವರ:
ಏ.9 ರಂದು ಬೊಮ್ಮನಹಳ್ಳಿ ಠಾಣೆಯಲ್ಲಿ ಸುಹಾಸ್ ಕಿಡ್ನಾಪ್ ಆಗಿದ್ದಾನೆಂದು ದೂರು ನೀಡಲಾಗಿತ್ತು.ಯುಗಾದಿ ಹಬ್ಬದ ದಿನ ಆರೋಪಿ ಕಾಂತನ ಆಟೋಗೆ ಸುಹಾಸ್ ಬೈಕ್ ಟಚ್ ಮಾಡಿದ್ದ‌‌. ಈ ವಿಚಾರಕ್ಕೆ ಅಂದು ಸುಹಾಸ್​ ಮತ್ತು ಕಾಂತ ನಡುವೆ ಮಾತುಕತೆ ನಡೆದಿತ್ತು. ಅಲ್ಲದೆ, ಅಂದೇ ಸುಹಾಸ್ ಮೇಲೆ ತನ್ನ ಗ್ಯಾಂಗ್​ನಿಂದ ಕಾಂತ ಹಲ್ಲೆ ನಡೆಸಿದ್ದ.

ಆದರೆ ಅಂದು ಗಲಾಟೆ ವಿಚಾರ ಠಾಣೆವರೆಗೂ ಹೋಗಿದ್ದಾಗ, ಇಬ್ಬರಿಗೂ ಪೊಲೀಸರು ಬುದ್ದಿ ಹೇಳಿ ಕಳುಹಿಸಿದ್ದರು. ಬಳಿಕ ಮೇ 9 ರಂದು ರಾತ್ರಿ ಸುಹಾಸ್ ತನ್ನ ಸ್ನೇಹಿತನ ಜೊತೆ ಬೊಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಗಾರ್ವೆಬಾವಿಪಾಳ್ಯದ ಬಳಿ ವೈನ್ ತೆಗೆದುಕೊಳ್ಳಲು ಬಂದಿದ್ದಾಗ, ಆರೋಪಿಗಳು ಹೊಂಚು ಹಾಕಿ ಆಟೋದಲ್ಲಿ ಸುಹಾಸ್‍ನನ್ನು ಅಪಹರಿಸಿಕೊಂಡು ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯ ಬಸವನಪುರ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಆರೋಪಿಗಳು ಅಲ್ಲಿ ಸುಹಾಸ್ ಜೊತೆ ಜಗಳವಾಡಿ ಚಾಕುವಿನಿಂದ ಮನಬಂದಂತೆ ಮೂರ್ನಾಲ್ಕು ಕಡೆ ಇರಿದು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ನೀಲಗಿರಿ ತೋಪಿನ ಬಳಿ ಶವ ಎಸೆದು ಪರಾರಿಯಾಗಿದ್ದರು. ಇತ್ತ ಸ್ನೇಹಿತನ ಜೊತೆ ಹೋದ ಸುಹಾಸ್ ಮನೆಗೆ ಬಾರದ ಕಾರಣ ಆತನ ತಂದೆ ಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ತನ್ನ ಮಗನ ಅಪಹರಣವಾಗಿದೆ ಎಂದು ದೂರು ನೀಡಿದ್ದರು.

ಅಪಹರಣ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳ ಪತ್ತೆಗೆ ಮೂರು ತಂಡಗಳು ಕಾರ್ಯಾಚರಣೆ ಕೈಗೊಂಡು ವಿವಿಧ ಆಯಾಮಗಳಲ್ಲಿ ಮಾಹಿತಿ ಸಂಗ್ರಹಿಸಿದಾಗ ಅಪಹರಣವಾಗಿರುವ ಯುವಕ ಕೊಲೆ ಆಗಿರುವುದು ಗೊತ್ತಾಗಿದೆ.

ಅಷ್ಟೇ ಅಲ್ಲದೆ, ಆರೋಪಿಗಳು ಕೊಲೆ ಮಾಡಿದ ಬಳಿಕ ತಿರುಪತಿಗೆ ತೆರಳಿ ವೆಂಕಟೇಶ್ವರ ದೇವಸ್ಥಾನದಲ್ಲಿ ಆರೋಪಿಗಳು ಮುಡಿ ಕೊಟ್ಟಿರುವ ವಿಷಯ ಬಹಿರಂಗವಾಗಿದೆ. ಬಳಿಕ ಅದೇನಾಯಿತೋ ಏನು, ಆರೋಪಿಗಳು ದೇವಸ್ಥಾನದಿಂದ ಬಂದವರೇ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿಯನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದಾಗ ಹಳೆಯ ದ್ವೇಷದಿಂದ ಕೊಲೆ ಮಾಡಿರುವುದು ಗೊತ್ತಾಗಿದ್ದು, ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

Leave a Reply

error: Content is protected !!
Scroll to Top
%d bloggers like this: