ಹೆತ್ತ ತಾಯಿಯನ್ನು ಕೊಂದ ವಾಹನದ ಮೇಲೆ ಸೇಡು ತೀರಿಸಲು ಟೋಲ್ ಗೇಟ್ ನಲ್ಲೇ ಕಾಯುತ್ತಿದೆ ಈ ನಾಯಿ | ತಾಯಿ ಕಳೆದುಕೊಂಡ ಮರಿ ನಾಯಿಯ ಕರುಳ ಬಾಧೆ!

ಹಾವಿನ ದ್ವೇಷ ನೂರು ವರ್ಷ ಅಂತ ಕೇಳಿದ್ದೀವಿ. ಆದರೆ ಒಂದು ನಾಯಿ ಮರಿಯ ದ್ವೇಷ ಎಲ್ಲಿಯವರೆಗೆ ಎಂದು ಗೊತ್ತೇ? ಹೌದು..ಇಲ್ಲೊಂದು ನಾಯಿ ಮರಿ ತನ್ನ ಹೆತ್ತ ತಾಯಿಯನ್ನು ಸಾಯಿಸಿದ ಆ ವಾಹನವನ್ನು ದಿನನಿತ್ಯ ಕಾಯುತ್ತಿದೆ ಎಂದರೆ ನಂಬುತ್ತೀರಾ? ಇದು ನಿಜ. ತನ್ನ ಹೆತ್ತಬ್ಬೆಯನ್ನು ಸಾಯಿಸಿದ ಆ ವಾಹನ ಯಾವುದು? ಪುಟ್ಟ ಮರಿಯಾಗಿದ್ದ ಆ ಆಕ್ಸಿಡೆಂಟ್ ಈ ನಾಯಿಗೆ ಈಗಲೂ ನೆನಪಿದೆಯಾ? ಈಗ ಅದು ದ್ವೇಷಕ್ಕೋಸ್ಕರ ಹಪಹಪಿಸುತ್ತಿದೆಯಾ? ತಿಳಿಯೋಣ ಒಂದು ಕರುಣಾಜನಕ ಸ್ಟೋರಿ.

ತಾಯಿಯನ್ನು ಕೊಂದ ವಾಹನ ಮೇಲೆ ನಾಯಿಯು ಸೇಡು ತೀರಿಸಿಕೊಳ್ಳಲು ಹವಣಿಸುವ ಈ ದೃಶ್ಯ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಟ್ಟಿಕೇರಿ ಟೋಲ್ ಗೇಟ್ ಬಳಿ ದಿನ ನಿತ್ಯ ಕಂಡುಬರುತ್ತದೆ.
ಟೋಲ್ ಗೇಟ್ ನಲ್ಲಿರುವ ವಿಐಪಿ ಲೇನ್ ನಲ್ಲಿ ಸೈರನ್ ಮೊಳಗಿಸಿಕೊಂಡು ಬರುವ ಆಂಬ್ಯುಲೆನ್ಸ್ ಮತ್ತು ಪೊಲೀಸ್ ವಾಹನಗಳನ್ನ ಹಿಂಬಾಲಿಸಿ, ಅಟ್ಟಾಡಿಸಿಕೊಂಡು ಹೋಗುತ್ತಿದೆ ಈ ನಾಯಿ. ತಾಯಿಯ ಸಾವನ್ನು ಕಣ್ಣಾರೆ ಕಂಡ ಮರಿ ನಾಯಿಯ ಸೇಡು ಇದಾಗಿದ್ದು, ಅದರ ಕರುಳ ಬಾಧೆ ನೋಡಿದರೆ ಎಂತಹವರಿಗೇ ಆಗಲಿ ಒಮ್ಮೆ ಕರುಳು ಚುರುಕ್ ಅನ್ನದೆ ಇರದು.

ಘಟನೆ ವಿವರ : ಒಂದು ವರ್ಷದ ಹಿಂದೆ ತಾಯಿ ನಾಯಿ ತನ್ನ ಮರಿಗಳಿಗೆ ಹಾಲುಣಿಸುವ ಸಂದರ್ಭದಲ್ಲಿ ವಿಐಪಿ ಲೇನ್ ನಿಂದ ಬಂದ ಅಂಬ್ಯುಲೆನ್ಸ್ ನಡಿಗೆ ಸಿಲುಕಿ ಅಸುನೀಗಿತ್ತು. ಆದರೆ ಈ ಅಪಘಾತದಲ್ಲಿ ಬದುಕುಳಿದಿದ್ದು ಈ ಗಂಡು ಮರಿ ನಾಯಿಯೊಂದೇ. ಈಗ ತಾಯಿಯ ಸಾವಿನ ಸೇಡು ತೀರಿಸಿಕೊಳ್ಳಲು ಸೈರನ್ ಹಾಕಿ ವಿಐಪಿ ಲೇನ್ ನಿಂದ ಬರುವ ಎಲ್ಲ ಆಂಬ್ಯುಲೆನ್ಸ್ ವಾಹನಗಳನ್ನೂ ಅಡ್ಡಗಟ್ಟುತ್ತದೆ ಈ ಮರಿ ನಾಯಿ. ಕೇವಲ ಆಂಬ್ಯುಲೆನ್ಸ್ ಅಷ್ಟೇ ಅಲ್ಲ, ಪೋಲಿಸ್ ವಾಹನವನ್ನೂ ಅಡ್ಡಗಟ್ಟುತ್ತದೆ ಇದು. ಸೈರನ್ ಶಬ್ದ ಕಿವಿಗೆ ಬೀಳುತ್ತಿದ್ದಂತೆ ಎಲ್ಲೇ ಇದ್ದರೂ ಓಡೋಡಿ ಬಂದು ಆಂಬ್ಯುಲೆನ್ಸ್ ವಾಹನಕ್ಕೆ ಅಡ್ಡಗಟ್ಟಿ ತನ್ನ ಸೇಡನ್ನು ತೀರಿಸಿಕೊಳ್ಳಲೇ ಬೇಕೆಂದು ವಾಹನದ ಹಿಂದೆ ಓಡುತ್ತದೆ.

ಸೈರನ್ ಹಾಕಿದ ವಾಹನ ತನ್ನ ತಾಯಿಯ ಸಾವಿಗೆ ಕಾರಣವಾಗಿದೆ ಎಂದು ತಿಳಿದು ಪ್ರತಿ ಅಂಬ್ಯುಲೆನ್ಸ್ ಮತ್ತು ಪೊಲೀಸ್ ವಾಹನದ ಮೇಲೆ ಎರಗುವ ನಾಯಿಯ ಜ್ಞಾಪಕ ಶಕ್ತಿಗೆ ಇಲ್ಲಿನ ಹಟ್ಟಿಕೇರಿ ಟೋಲ್ ಗೇಟ್ ಸಿಬ್ಬಂದಿ ಮೌನವಾಗಿ ಮಿಡಿಯುತ್ತಾರೆ. ಕಳೆದ ಏಳೆಂಟು ತಿಂಗಳಿಂದ ನಾಯಿ ಬೆಳೆಯುತ್ತಾ ಇದ್ದ ಹಾಗೆ ಇದರ ಸೇಡು ಹೆಚ್ಚಾಗುತ್ತಲೇ ಇದೆ.

ಸಮಾಧಾನಕರ ಸಂಗಂತಿಯೆಂದರೆ ಟೋಲ್ ಸಿಬ್ಬಂದಿಯ ಜೊತೆ ಈ ಮರಿನಾಯಿ ಅನ್ಯೋನ್ಯವಾಗಿದೆ. ತಾಯಿ ನಾಯಿಯ ಸಾವಿನ ಸಂದರ್ಭವನ್ನು ಕಣ್ಣಾರೆ ಕಂಡಿರುವ ಈ ಸಿಬ್ಬಂದಿ, ಮರಿ ನಾಯಿಗೆ ಅನ್ನ ನೀರು ನೀಡಿ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ.

Leave A Reply

Your email address will not be published.