ಸತ್ತು, ಊರಿಡೀ ಹೆಣವನ್ನು ಚೆಲ್ಲಾಡಿದ 9 ಗಂಟೆಯ ಬಳಿಕ ಎದ್ದು ಕೂತ ಸೀಗ ನಾಯ್ಕ !! | 19 ವರ್ಷಗಳ ನಂತರ ವಿಜೃಂಭಣೆಯಿಂದ ನೆರವೇರಿತು ನರ ಬಲಿ ಹಬ್ಬ

ಸೋಮವಾರ ರಾತ್ರಿ 12.30 ರ ಸಮಯದಲ್ಲಿ ಗ್ರಾಮದ ಸೀಗ ಮಾರಮ್ಮನ ದೇವಾಲಯದಲ್ಲಿ ಬಲಿ ಬಿದ್ದ ಕುರಿ ಸೀಗ ನಾಯ್ಕ ಸತ್ತು ಮಲಗಿದ್ದ. ನಿಶ್ಚಲ ದೇಹದ ಸೀಗ ನಾಯ್ಕನನ್ನು ನೋಡಲು ವಿವಿಧೆಡೆಗಳಿಂದ ಸಾಗರೋಪಾದಿಯಲ್ಲಿ ಜನ ಜಮಾವಣೆಗೊಂಡಿದ್ದರು. ಅವತ್ತು ಜೋರು ಮಳೆ ಸತ್ತ ವ್ಯಕ್ತಿಯ ಮೇಲೆ ಕೂಡಾ ಬೀಳುತ್ತಿತ್ತು. ಜನರು ಕೂಡಾ ನೆಂದುಕೊಂಡೆ ಮಳೆ ಲೆಕ್ಕಿಸದೆ ಅಲ್ಲಿನ ಆಗುಹೋಗುಗಳನ್ನು ವೀಕ್ಷಣೆ ಮಾಡುತ್ತಿದ್ದರು.

ಊರಿನ ಜನ ಹಾಗೆ ಸತ್ತಿದ್ದ ಸೀಗ ನಾಯ್ಕನ ದೇಹವನ್ನು ಅಲ್ಲಿಲ್ಲ ಅಡ್ಡಾದಿಡ್ಡಿಯಾಗಿ ಎಸೆದಾಡಿಕೊಂಡು ಮೆರವಣಿಗೆ ಕರೆದೊಯ್ದರು. ಇವೆಲ್ಲ ಆಗುವುದರೊಳಗೆ ಬೆಳಕು ಹರಿದಿತ್ತು. ಅಂದು ಮಂಗಳವಾರ ಮುಂಜಾನೆ 4 ಗಂಟೆಗೆ ಬಲಿ ಬಿದ್ದ ವ್ಯಕ್ತಿಯನ್ನು ಪಂಚವಾದ್ಯ ಮತ್ತು ಕಂದಾಯ ಚಾಮರಗಳೊಂದಿಗೆ ಹೊತ್ತು ಗ್ರಾಮದ ಮತ್ತೊಂದು ದೇವಾಲಯವಾದ ಮಾರಿಗುಡಿ ಮುಂಭಾಗ ಬಲಿ ಬಿದ್ದ ವ್ಯಕ್ತಿಯನ್ನು ಸಾರ್ವಜನಿಕರ ವೀಕ್ಷಣೆ ಅವಕಾಶ ಕಲ್ಪಿಸುತ್ತಿದ್ದಂತೆ ಭಕ್ತರು ನೂಕುನುಗ್ಗಲಿನಲ್ಲಿ ಹರಿದು ಬಂದು ವೀಕ್ಷಣೆ ಮಾಡಿದರು.

ಅದಾಗಲೇ ಸೀಗ ನಾಯ್ಕ ಸತ್ತು ಸುಮಾರು 9 ಗಂಟೆಗಳು ಸಮೀಪಿಸುತ್ತಿದ್ದು. ಆಗ ನಡೆದಿತ್ತು ಒಂದು ಪವಾಡ !!ಅಲ್ಲಿನ ಅರ್ಚಕರಾದ ಉಮೇಶ ಮತ್ತು ಕೆಂಪಣ್ಣ, ಸೀಗ ನಾಯ್ಕ್ ನ ಮೇಲೆ ಮಂತ್ರಿಸಿದ ತೀರ್ಥ ಚಿಮ್ಮುತ್ತಾರೆ. ಸೀಗ ಲಗುಬಗನೆ ಎದ್ದು ಕೂರುತ್ತಾನೆ.

ಅಷ್ಟಕ್ಕೂ ಈ ಪವಾಡ ನಡೆದದ್ದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ. ಇದು ಸೀಗಮಾರಮ್ಮ ದೇವಿಯ ಜಾತ್ರೆಯಲ್ಲಿ ತಲತಲಾಂತರದಿಂದ ಆಚರಿಸಿಕೊಂಡು ಬಂದ ಆಚರಣೆಯಾಗಿದೆ. ಇದೀಗ 19 ವರ್ಷಗಳ ಬಳಿಕ ಸೀಗಮಾರಮ್ಮ ಬಲಿ ಹಬ್ಬ ನಡೆಯುತ್ತಿದೆ. ಈ ಹಬ್ಬವನ್ನು ಗ್ರಾಮದ ಎಲ್ಲಾ ಸಮುದಾಯಗಳು ಒಟ್ಟಿಗೆ ಸೇರಿ ಆಚರಣೆ ಮಾಡುತ್ತಾರೆ. 24 ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಪ್ರತಿಯೊಂದು ಸಮುದಾಯಕ್ಕೂ ಒಂದೊಂದು ಜವಾಬ್ದಾರಿ ವಹಿಸಲಾಗುತ್ತದೆ.

ಬಲಿ ಕೊಡುವ ಕರ್ತವ್ಯವನ್ನು ನಾಯಕ ಸಮುದಾಯಕ್ಕೆ, ಹೆಬ್ರೆ ಬಾರಿಸುವುದು ಪರಿಶಿಷ್ಟ ಜಾತಿಗೆ, ಕನಕಂಡ್ರಿ ಹೊರುವುದು ಶಿವಾರ್ಚಕರಿಗೆ ಹೀಗೆ ಎಲ್ಲಾ ಸಮುದಾಯಕ್ಕೂ ಜವಾಬ್ದಾರಿ ನೀಡಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಬಲಿ ಬೀಳುವ ವ್ಯಕ್ತಿಗೆ ಎರಡು ದಿನ ಮುಂಚೆಯೇ ವೀಳ್ಯ ನೀಡಲಾಗುತ್ತದೆ. ಅವರು ಊರಿನ ಬಲಿ ಬೀಳುವ ಮನೆಯಲ್ಲಿ ವಾಸಿಸುತ್ತಾರೆ.

ಬಲಿ ನೀಡುವ ದಿನ ಬಲಿ ಬೀಳುವ ವ್ಯಕ್ತಿಯನ್ನು ಗ್ರಾಮಕ್ಕೆ ಕರೆದೊಯ್ಯಲಾಗುತ್ತದೆ. ಈ ವೇಳೆ ಸೀಗಮಾರಮ್ಮ ದೇವತೆ ಮೈಮೇಲೆ ಬಂದ ಅರ್ಚಕರು ಬಲಿ ಬೀಳುವ ವ್ಯಕ್ತಿಗೆ ಅಕ್ಕಿ ಕಾಳು ಎಸೆಯುತ್ತಾರೆ. ಆ ವೇಳೆ ಅರ್ಧ ಜೀವ ಹೋಗುತ್ತದೆ. ಅರೆ ಜೀವವಾದ ವ್ಯಕ್ತಿಯನ್ನು ಮತ್ತೆ ಬಲಿ ಮನೆಗೆ ಕರೆತಂದು ಬಲಿ ಮನೆಯಲ್ಲಿ ಮಲಗಿಸಲಾಗುತ್ತದೆ. ಈ ವೇಳೆ ಸೀಗೆಮಾರಮ್ಮ ದೇವತೆ ಮೈಮೇಲೆ ಬರುವ ಅರ್ಚಕ ಆವೇಷದಿಂದ ಬಲಿ ವ್ಯಕ್ತಿಯ ಮೇಲೆ ಕಾಲಿಡುತ್ತಾರೆ. ಆ ಸಂದರ್ಭದಲ್ಲಿ ಆ ಬಲಿ ವ್ಯಕ್ತಿಯ ಜೀವ ಹೋಗುತ್ತದೆ ಎನ್ನುವ ನಂಬಿಕೆಯಿದೆ. ಹೀಗೆ ರಾತ್ರಿ ಆ ವ್ಯಕ್ತಿಯನ್ನು ಊರತುಂಬೆಲ್ಲಾ ಮೆರವಣಿಗೆ ಮಾಡುತ್ತಾರೆ. ಮೆರವಣಿಗೆ ವೇಳೆ ಶವವನ್ನು ಎಸೆಯಲಾಗುತ್ತದೆ. ಸತತ 9 ತಾಸು ಆತನ ಉಸಿರಾಟ ನಿಂತು ಹೋಗಿರುತ್ತದೆ. ಆದರೆ ಹೀಗೆ ಬಲಿ ಬಿದ್ದ ವ್ಯಕ್ತಿಗೆ ಬೆಳಗ್ಗೆ ಮತ್ತೆ ಮರುಜೀವ ಬರುತ್ತದೆ. ಪ್ರಾಣ ಹೋಗಿ ನಿಷ್ಕ್ರೀಯವಾದ ವ್ಯಕ್ತಿಯನ್ನು ಬಲಿ ಪೀಠಕ್ಕೆ ಕೊಂಡೊಯ್ಯುವ ಗ್ರಾಮಸ್ಥರು. ಬಲಿ ಪೀಠದ ಬಳಿ ಸತ್ತ ವ್ಯಕ್ತಿಯ ದರ್ಶನಕ್ಕೆ ಅವಕಾಶ ಕೊಡುತ್ತಾರೆ.

ಬೆಳಗ್ಗೆ 9 ಗಂಟೆ ವೇಳೆಗೆ ಒಳಗೆರೆ ಹುಚ್ಚಮ್ಮ ದೇವತೆ ಮೈಮೇಲೆ ಬಂದ ಅರ್ಚಕರಿಂದ ನಿರ್ಜೀವ ವ್ಯಕ್ತಿ ಮೇಲೆ ತೀರ್ಥ ಪ್ರೋಕ್ಷಣೆ ಮಾಡಲಾಗುತ್ತದೆ. ಸತ್ತ ವ್ಯಕ್ತಿಗೆ ತೀರ್ಥ ಪ್ರೋಕ್ಷಣೆಯಿಂದ ಮರುಜೀವ ಬರುವುದೇ ವಿಶೇಷ. ಸತ್ತಿದ್ದ ವ್ಯಕ್ತಿಗೆ 11ನೇ ದಿನ ಸಾಂಕೇತಿಕವಾಗಿ ತಿಥಿ ಕಾರ್ಯ ನಡೆಯುತ್ತದೆ. ಹೀಗೆ ಬಲಿ ಬೀಳುವ ವ್ಯಕ್ತಿ ಇನ್ನು ಮುಂದೆ ತನ್ನ ಜೀವಮಾನದಲ್ಲಿ ಹೊರಗೆ ಊಟ, ತಿಂಡಿ ಮಾಡುವಂತಿಲ್ಲ.

ಈ ಹಬ್ಬದ ವೇಳೆ ಗ್ರಾಮದಲ್ಲಿ ಮಾಂಸಹಾರ ಮಾಡಲ್ಲ, ಮದ್ಯಪಾನ ಮಾಡಲ್ಲ, ಮನೆಗಳಲ್ಲಿ ಒಗ್ಗರಣೆ ಹಾಕಲ್ಲ. ಈ ಅವಧಿಯಲ್ಲಿ ಮದುವೆ ಸೇರಿದಂತೆ ಶುಭಕಾರ್ಯಗಳು ನಿಷಿದ್ಧವಾಗಿದೆ. ಈ ಅವಧಿಯಲ್ಲಿ ಯಾರಾದರು ಸತ್ತರೆ ಒಂದೇ ಗಂಟೆ ಅವಧಿಯಲ್ಲಿ ಗ್ರಾಮದಿಂದ ಹೊರಕ್ಕೆ ಶವ ಸಾಗಾಣೆ ಮಾಡುತ್ತಾರೆ. ಒಟ್ಟಿನಲ್ಲಿ ಆಧುನಿಕ ಯುಗದಲ್ಲೂ ಕೂಡ ಇಂತಹ ಆಚರಣೆ ನಡೆಯುತ್ತಿರುವುದು ವಿಶೇಷವಾಗಿದೆ. ಬಲಿ ಬೀಳುವ ವ್ಯಕ್ತಿಗೆ ಪ್ರಾಣ ಪಕ್ಷಿ ಹಾರಿ ಹೋಗಿರುತ್ತದೆ ಎಂಬುದು ಗ್ರಾಮಸ್ಥರ ನಂಬಿಕೆ. ಈ ನಂಬಿಕೆಯ ಆಧಾರದ ಮೇಲೆ ಇಲ್ಲಿ ಸೀಗ ಮಾರಮ್ಮ ಬಲಿ ಜಾತ್ರೆ ನಡೆದುಕೊಂಡು ಹೋಗುತ್ತಿದೆ. ಆದರೆ ಯಾವ ನಂಬಿಕೆಯ ಮೇಲೆ ಈ ಹುಟ್ಟು-ಸಾವುಗಳ ಕುರಿತು ಈ ರೀತಿ ಆಚರಣೆ ನಡೆಯುತ್ತಿದೆ ಎಂಬುದು ಎಲ್ಲರನ್ನು ಕುತೂಹಲಕ್ಕೆ ತಳ್ಳಿದೆ.

Leave A Reply