ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ ಯುವತಿಯ ಕತ್ತು ಸೀಳಿದ ಚೀನಾ ಮಾಂಜಾ – ಕುತ್ತಿಗೆಗೆ 50 ಸ್ಟಿಚ್, ಯುವತಿ ಸ್ಥಿತಿ ಗಂಭೀರ

ಚೀನಾ ದಾರದಿಂದಾಗಿ ನಾವು ಈಗಾಗಲೇ ಹಲವಾರು ಮಂದಿಯ ಪ್ರಾಣ ಸಂಕಷ್ಟದಲ್ಲಿ ಸಿಲುಕಿರುವುದನ್ನು ಕಂಡಿದ್ದೇವೆ. ಆದರೆ ಇದರ ನಿಷೇಧದ ಬಗ್ಗೆ ಇಲ್ಲಿಯವರೆಗೆ ಯಾವುದೇ ಕ್ರಮ ತಗೊಂಡಿಲ್ಲ. ಈಗ ಇದರ ಮುಂದುವರಿದ ಭಾಗವೇ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಯುವತಿಯ ಕುತ್ತಿಗೆ ಸೀಳಿದೆ ಈ ಚೀನಾದ ಮಾಂಜಾ. ಯುವತಿಯ ಕತ್ತನ್ನು ಸೀಳಿರುವ ಹೃದಯವಿದ್ರಾವಕ ಘಟನೆ ಮೇ 2 ರಂದು ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಖಾಸಂಪುರ್ ಪ್ರದೇಶದಲ್ಲಿ ನಡೆದಿದೆ.

ರೀನಾ ಠಾಕೂರ್ ಎಂದು ಗುರುತಿಸಲಾದ ಯುವತಿ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ವೇಳೆ ಕುತ್ತಿಗೆಗೆ ಚೀನಾದ ಮಾಂಜಾ ಸಿಲುಕಿ ಆಕೆಯ ಕತ್ತನ್ನು ಸೀಳಿದೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಕುತ್ತಿಗೆ ಭಾಗದಲ್ಲಿ ತೀವ್ರ ಗಾಯವಾಗಿದ್ದ ಪರಿಣಾಮ 50 ಹೊಲಿಗೆಗಳನ್ನು ಹಾಕಲಾಗಿದ್ದು, ಆಕೆಯ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.

ವರದಿಯ ಪ್ರಕಾರ, ಯುವತಿ ರೀನಾ ವೈದ್ಯರಿಂದ ಔಷಧಿಗಳನ್ನು ಖರೀದಿಸಲು ಹೋಗಿದ್ದಾಗ ಈ ಘಟನೆ ನಡೆದಿದೆ. ರೀನಾ ನಗರದಲ್ಲಿ ತನ್ನ ತಂಗಿ ಅಂಜಲಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ತಂದೆ-ತಾಯಿ ಇಬ್ಬರೂ ಇಲ್ಲ ಎನ್ನಲಾಗಿದೆ. ರೀನಾ ಮಕ್ಟರಾ ಡಿಗ್ಗಿ ಪ್ರದೇಶದಲ್ಲಿ ವೈದ್ಯರಿಂದ ಔಷಧಿಗಳನ್ನು ಖರೀದಿಸಲು ಹೋಗಿದ್ದಾಗ ಈ ಘಟನೆ ನಡೆದಿದೆ.

ಚೈನೀಸ್ ಮಾಂಜಾದಿಂದಾಗಿ ದೇಶದ ವಿವಿಧ ಭಾಗಗಳಲ್ಲಿ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ಮುಜಾಫರ್‌ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಯುವಕನೊಬ್ಬ ಸಾವನ್ನಪ್ಪಿದ್ದ. ಅನೇಕ ಘಟನೆಗಳ ಹೊರತಾಗಿಯೂ ಸರ್ಕಾರ ಚೀನೀ ತಂತಿಗಳ ಮಾರಾಟವನ್ನು ತಡೆಯಲು ವಿಫಲವಾಗಿವೆ.

Leave A Reply

Your email address will not be published.