ವಿಶ್ವ ತಾಯಂದಿರ ದಿನದ ವಿಶೇಷ | ಈಕೆ ಕೇವಲ 5 ನೇ ವಯಸ್ಸಿಗೇ ತಾಯಿಯಾದವಳು !!

ಅಮ್ಮ ಎಂದರೆ ಕಣ್ಣಿಗೆ ಕಾಣುವ ದೇವರು. ಜೀವನದುದ್ದಕ್ಕೂ ಕೈ ಹಿಡಿದು ಮುನ್ನಡೆಸುವ ಮಹಾಮಾತೆ. ಹುಟ್ಟಿದಾಗ ಕೈ ಹಿಡಿದು, ನಂತರ ಬೇಕೆಂದೇ ಕೈ ಬಿಟ್ಟು ಬದುಕಿನ ನಡಿಗೆ ಕಲಿಸಿದವಳು ಅಮ್ಮ. ಪ್ರತಿಯೊಬ್ಬರ ಬಾಳಿನಲ್ಲೂ ಅಮ್ಮನಿಗೆ ಬೇರೆಯೇ ಸ್ಥಾನ ಇದೆ. ಪ್ರತಿಯೊಬ್ಬರ ಅಭಿವೃದ್ಧಿಯ ಹಿಂದೆ ಅಮ್ಮನ ಪಾತ್ರ ದೊಡ್ಡದು ಎಂದೇ ಹೇಳಬಹುದು. ಅಮ್ಮ ಎಂದರೆ ನಿಸ್ವಾರ್ಥ ಪ್ರೀತಿಯ ಸಂಕೇತ. ಮಕ್ಕಳ ಖುಷಿಯಲ್ಲಿಯೇ ತನ್ನ ಖುಷಿಯನ್ನು ಕಾಣುವವರು ಅಮ್ಮ. ತನ್ನ ಮಕ್ಕಳಿಗಾಗಿ ಎಂತಹ ಅಪಾಯವನ್ನು ಬೇಕಾದರೂ ಎದುರಿಸಲು, ಯಾವ ತ್ಯಾಗಕ್ಕೂ ಅಮ್ಮ ಸಿದ್ಧರಿರುತ್ತಾರೆ ಎಂಬುದು ಸತ್ಯ.

ಅಮ್ಮನ ಬಗ್ಗೆ ಇಷ್ಟೆಲ್ಲಾ ಪೀಠಿಕೆ ಯಾಕೆ ಅಂತೀರಾ…? ಇಂದು ವಿಶ್ವ ತಾಯಂದಿರ ದಿನ. ಈ ದಿನವನ್ನು ಪ್ರತಿ ವರ್ಷ ಮೇ ತಿಂಗಳ 2ನೇ ಭಾನುವಾರದಂದು ಆಚರಿಸಲಾಗುತ್ತದೆ. ಭಾರತ ಸೇರಿದಂತೆ ಪ್ರಪಂಚದಾದ್ಯಂತ ಮೇ 8 ಅನ್ನು ವಿಶ್ವ ತಾಯಂದಿರ ದಿನವನ್ನಾಗಿ ಆಚರಿಸಲಾಗುತ್ತದೆ. ಈ ವಿಶೇಷ ದಿನಕ್ಕೆ ನಾವು ನಿಮಗೊಂದು ಅಚ್ಚರಿಯ ತಾಯಿಯ ಕುರಿತು ಹೇಳಲಿದ್ದೇವೆ. ಈ ತಾಯಿಯ ಬಗ್ಗೆ ಕೇಳಿದ್ರೆ ನೀವು ಹೌಹಾರುವುದು ಖಚಿತ.

ಹೌದು. ಈ ತಾಯಿಯ ಬಗ್ಗೆ ಈಗಾಗಲೇ ಇಡೀ ಜಗತ್ತೇ ಅಚ್ಚರಿಗೊಂಡಿದೆ. ಈ ತಾಯಿ ಕೇವಲ 5 ವರ್ಷ ವಯಸ್ಸಿನಲ್ಲೇ ತಾಯಿ ಪಟ್ಟ ಅಲಂಕರಿಸಿದ್ದಾಳೆ. ಇಂದಿಗೂ ಜಗತ್ತಿನಾದ್ಯಂತ ವೈದ್ಯಲೋಕಕ್ಕೇ ಸವಾಲೊಡ್ಡಿದ ಪ್ರಕರಣ ಎಂದು ಹೇಳಬಹುದು. ಕೇವಲ 5 ವರ್ಷ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡುವುದು ಹೇಗೆ ಎಂಬುದನ್ನು ವೈದ್ಯರು ಕೂಡ ಇಲ್ಲಿಯವರೆಗೆ ಅರ್ಥಮಾಡಿಕೊಳ್ಳಲು ಆಗಿಲ್ಲ.

ಈ ತಾಯಿಯನ್ನು ವಿಶ್ವದ ಅತ್ಯಂತ ಕಿರಿಯ ತಾಯಿ ಎಂದು ಕರೆಯಲಾಗುತ್ತದೆ. ಈ ತಾಯಿಯ ಹೆಸರು ಲೀನಾ ಮದೀನಾ. ಲೀನಾ ಮದೀನಾ 27 ಸೆಪ್ಟೆಂಬರ್ 1933 ರಂದು ಪೆರುವಿನ ಟಿಕ್ರಾಪೋದಲ್ಲಿ ಜನಿಸಿದರು. ಲೀನಾ ಕೇವಲ 5 ವರ್ಷದವಳಿದ್ದಾಗ, ಇದ್ದಕ್ಕಿದ್ದಂತೆ ಅವಳ ಹೊಟ್ಟೆಯ ಗಾತ್ರವು ಹೆಚ್ಚಾಗತೊಡಗಿತು. ಮೊದಮೊದಲು ಲೀನಾ ಅವರ ಪೋಷಕರು ಟ್ಯೂಮರ್‌ನಿಂದ ಹೊಟ್ಟೆ ಬೆಳೆಯುತ್ತಿದೆ ಎಂದು ಭಾವಿಸಿದ್ದರು. ಬಳಿಕ ಆಕೆಯನ್ನು ವೈದ್ಯರ ಬಳಿ ಕರೆದುಕೊಂಡು ಹೋದ ನಂತರ ವೈದ್ಯರು ಹೇಳಿದ್ದನ್ನು ಕೇಳಿ ಲೀನಾ ಪೋಷಕರು ಬೆಚ್ಚಿಬಿದ್ದಿದ್ದರು.

ಯಾಕೆಂದರೆ ವೈದ್ಯರು ಲೀನಾಳನ್ನು ಪರೀಕ್ಷಿಸಿದಾಗ ಆಕೆಯ ಹೊಟ್ಟೆಯಲ್ಲಿ ಮಗು ಬೆಳೆಯುತ್ತಿರುವುದು ಕಂಡುಬಂದಿತ್ತು. ಇದನ್ನು ತಿಳಿದ ವೈದ್ಯರೂ ಒಂದು ಕ್ಷಣ ಬೆಚ್ಚಿಬಿದಿದ್ದರು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡುವುದು ಹೇಗೆ ಎಂಬುದು ವೈದ್ಯರ ಮುಂದಿದ್ದ ದೊಡ್ಡ ಸವಾಲಾಗಿತ್ತು. ಇದು ಲೀನಾಳ ಜೀವಕ್ಕೆ ಅಪಾಯಕಾರಿಯಾಗಿತ್ತು. ಹೀಗಾಗಿ ಆಕೆಯನ್ನು ಆಸ್ಪತ್ರೆಯಲ್ಲಿಯೇ ಇರಿಸಲಾಗಿತ್ತು. ಅಂತಿಮವಾಗಿ ಮೇ 14, 1939ರಂದು ಲೀನಾ ಮದೀನಾ ಕೇವಲ 5 ವರ್ಷ ವಯಸ್ಸಿನಲ್ಲಿ ಸಿಸೇರಿಯನ್ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದಳು. ಈ ಸುದ್ದಿ ಆ ಸಮಯದಲ್ಲಿ ಜಗತ್ತಿನಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಈ ವಿಷಯವನ್ನು ನಂಬುವುದು ಯಾರಿಗಾದರೂ ಕಷ್ಟವಾಗಿತ್ತು.

ಲೀನಾಗೆ ಹೆರಿಗೆಯಾದಾಗ ಆಕೆಯ ಮಗುವಿನ ತೂಕ 2.7 ಕೆಜಿ ಇತ್ತು. ಆಕೆಯ ಮಗನಿಗೆ ನಂತರ ಗೆರಾರ್ಡೋ ಎಂದು ಹೆಸರಿಡಲಾಯಿತು. ವರದಿಯ ಪ್ರಕಾರ, ಈ ಮಗುವನ್ನು ಲೀನಾ ಸಹೋದರನಂತೆ ಬೆಳೆಸಿದಳಂತೆ. ಲೀನಾಗೆ ಪ್ರಿಕೋಸಿಯಸ್ ಪ್ಯೂಬರ್ಟಿ ಎಂಬ ಸಮಸ್ಯೆ ಇತ್ತು ಎಂಬ ಸತ್ಯ ಬಳಿಕ ಬಹಿರಂಗವಾಯ್ತು. ಈ ಸಮಸ್ಯೆ ಎದುರಿಸುವವರಿಗೆ ಲೈಂಗಿಕ ಅಂಗಗಳು ಚಿಕ್ಕ ವಯಸ್ಸಿನಲ್ಲಿಯೇ ಬೆಳೆಯುತ್ತವೆ. ವರದಿಯ ಪ್ರಕಾರ, ಲೀನಾಗೆ 3 ವರ್ಷ ವಯಸ್ಸಿನಲ್ಲೇ ಪಿರಿಯಡ್ಸ್ ಬರಲಾರಂಭಿಸಿತ್ತು.

ಆದರೆ, ಲೀನಾ ಮದೀನಾ ಇಷ್ಟು ಚಿಕ್ಕ ವಯಸ್ಸಿನಲ್ಲಿ ಗರ್ಭಿಣಿಯಾದದ್ದು ಹೇಗೆ ಎಂಬ ಪ್ರಶ್ನೆ ಕಾಡುತ್ತಲೇ ಇತ್ತು. ಲೀನಾ ವಾಸಿಸುತ್ತಿದ್ದ ಹಳ್ಳಿಯಲ್ಲಿ ಪ್ರತಿವರ್ಷ ಸಾಂಪ್ರದಾಯಿಕ ಹಬ್ಬ ಆಚರಿಸಲಾಗುತ್ತಿತ್ತು. ಈ ಹಬ್ಬದಲ್ಲಿ ಯುವಕ-ಯುವತಿಯರು ಮೈಮರೆಯುತ್ತಿದ್ದರು. ಇದಾದ ನಂತರವೂ 5ನೇ ವಯಸ್ಸಿಗೆ ತಾಯಿಯಾದ ಲೀನಾ ಜೊತೆ ಯಾರಿಗೆ ಸಂಬಂಧವಿತ್ತು ಎಂಬುದು ಈವರೆಗೆ ತಿಳಿದುಬಂದಿಲ್ಲ. ಅಷ್ಟೇ ಅಲ್ಲ, ಮೆಡಿನಾ ತಾಯಿಯಾಗಲು ಕಾರಣ ಆಕೆಯ ತಂದೆಯೇ ಕಾರಣ ಎಂಬ ಶಂಕೆಯ ಮೇಲೆ ಆತನನ್ನು ಬಂಧಿಸಲಾಯಿತು. ಆದರೆ ಇದನ್ನು ಪುಷ್ಠೀಕರಿಸುವ ಸಾಕ್ಷ್ಯಾಧಾರಗಳು ದೊರೆತಿಲ್ಲವೆಂಬ ಕಾರಣಕ್ಕೆ ಆತ ಖುಲಾಸೆಯಾದ.

ಹಾಗಾಗಿ ಆ ಮಗುವಿನ ಅಪ್ಪ ಯಾರು ಎಂಬ ಸತ್ಯ ಇಂದಿಗೂ ಹೊರಬಂದಿಲ್ಲ. ಗೆರಾರ್ಡೋ ಜೈವಿಕ ತಂದೆ ಯಾರೆಂಬುದು ಕೊನೆಗೂ ಬಯಲಾಗದ ಸತ್ಯವಾಗಿಯೇ ಉಳಿಯಿತು. ಈ ಪುಟಾಣಿ ಅಮ್ಮನ್ನ ನೆನಪಿಸಿಕೊಂಡು ನಮ್ಮನ್ನು ಅನವರತ ಸಲಹಿದ ಹೆತ್ತಮ್ಮನನ್ನು ನೆನೆಯೋಣ. ಅಮ್ಮ ದೂರ ಇದ್ದರೆ, ತಕ್ಷಣ ಒಂದು ಕರೆ ಮಾಡೋಣ.

Leave A Reply

Your email address will not be published.