ಪೊಲೀಸರಿಂದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಧಾರಗಳನ್ನೇ ಎತ್ತಾಕೊಂಡೋದ ಮಂಗಣ್ಣ !!

ಕೊಲೆ ಮಾಡುವುದು ಅಪರಾಧ. ಕೊಲೆಗೆ ಸಹಕರಿಸುವುದು, ಸಾಕ್ಷ್ಯಾಧಾರಗಳನ್ನು ನಾಶ ಮಾಡುವುದು ಅದಕ್ಕಿಂತಲೂ ದೊಡ್ಡ ಅಪರಾಧ. ಅಂತಹ ಮಹಾ ಅಪರಾಧವನ್ನೇ ಕೋತಿಯೊಂದು ಮಾಡಿದೆ. ಅರೆ.. ಇದು ಹೇಗೆ ಅಂತೀರಾ?? ಹೀಗಿದೆ ನೋಡಿ ಮಂಗಣ್ಣನ ಕಥೆ.

ಸದಾ ಮರದಿಂದ ಮರಕ್ಕೆ ಹಾರುತ್ತಾ, ಕಪಿ ಚೇಷ್ಟೆ ಮಾಡುತ್ತಾ ಇದ್ದ ಕೋತಿಯೊಂದು ಇದೀಗ ಪೊಲೀಸರ ನಿದ್ದೆಗೆಡಿಸಿದೆ. ಕಪಿಯೊಂದು ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದ ಮುಖ್ಯ ಸಾಕ್ಷ್ಯಾಧಾರಗಳನ್ನೇ ಕದ್ದು ಪರಾರಿಯಾಗಿರುವ ಅಪರೂಪದ ಘಟನೆ ರಾಜಾಸ್ಥಾನದ ಜೈಪುರದಲ್ಲಿ ಬೆಳಕಿಗೆ ಬಂದಿದೆ.


Ad Widget

Ad Widget

Ad Widget

ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಸಾಕ್ಷ್ಯಾಧಾರಗಳನ್ನು ಹಾಜರುಪಡಿಸುವಂತೆ ಸೂಚನೆ ನೀಡಿದಾಗ ಆರೋಪಿಗಳು ಕೊಲೆಗೆ ಬಳಸಿದ್ದ ಚಾಕು ಹಾಗೂ ಇತರ 15 ಸಾಕ್ಷ್ಯಾಧಾರಗಳಿದ್ದ ಬ್ಯಾಗ್ ಅನ್ನು ಕೋತಿ ಕದ್ದಿರುವ ಸತ್ಯ ಬೆಳಕಿಗೆ ಬಂದಿದೆ.

2016ರಲ್ಲಿ ಶಶಿಕಾಂತ್ ಶರ್ಮಾ ಎಂಬ ವ್ಯಕ್ತಿಯು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೃತಪಟ್ಟಿದ್ದರು. ಈ ಸಂಬಂಧ ಚಾಂದ್ವಾಜಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡಿದ್ದ ಪೊಲೀಸರು, ಶವ ಪತ್ತೆಯಾದ ನಂತರ, ಮೃತರ ಸಂಬಂಧಿಕರು ಈ ಬಗ್ಗೆ ತನಿಖೆಗೆ ಒತ್ತಾಯಿಸಿ ಜೈಪುರ-ದೆಹಲಿ ಹೆದ್ದಾರಿಯಲ್ಲಿ ರಸ್ತೆತಡೆ ಪ್ರತಿಭಟನೆಯನ್ನೂ ನಡೆಸಿದ್ದರು.

ಇದರಿಂದ ತನಿಖೆ ಚುರುಕುಗೊಳಿಸಿದ್ದ ಪೊಲೀಸರು 5 ದಿನಗಳ ಹಿಂದೆಯಷ್ಟೇ ರಾಹುಲ್ ಕಂದೆರಾ ಮತ್ತು ಮೋಹನ್‌ಲಾಲ್ ಕಂದೇರಾ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಕೊಲೆ ಪ್ರಕರಣ ದಾಖಲಿಸಿ, ಇಬ್ಬರು ಆರೋಪಿಗಳನ್ನು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಎದುರು ಹಾಜರುಪಡಿಸಬೇಕಿತ್ತು. ಈ ಹೊತ್ತಿನಲ್ಲೇ ಆರೋಪಿಗಳಿಂದ ಸಂಗ್ರಹಿಸಲಾಗಿದ್ದ ಸಾಕ್ಷ್ಯಾಧಾರಗಳ ಬ್ಯಾಗ್‌ನ್ನು ಕೋತಿಯೊಂದು ಹೊತ್ತೊಯ್ದಿದೆ. ಕೊಲೆ ಮಾಡಲು ಬಳಸಿದ್ದ ಪ್ರಾಥಮಿಕ ಸಾಕ್ಷ್ಯವಾದ ಚಾಕು ಸಹ ಇದೇ ಬ್ಯಾಗ್‌ನಲ್ಲಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಕೊಲೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದ ಪೊಲೀಸರು ಕೊಲೆಗೆ ಬಳಸಿದ ಚಾಕು ಹಾಗೂ ಇತರ 15 ಮುಖ್ಯ ಸಾಕ್ಷ್ಯಾಧಾರಗಳನ್ನು ಬ್ಯಾಗ್‌ವೊಂದರಲ್ಲಿಟ್ಟಿದ್ದರು. ಮಲ್ಖಾನದಲ್ಲಿ (ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವ ಕೊಠಡಿ) ಸ್ಥಳಾವಕಾಶದ ಕೊರತೆ ಇದ್ದುದರಿಂದ ಬ್ಯಾಗ್ ಅನ್ನು ಮರದ ಕೆಳಗೆ ಇಡಲಾಗಿತ್ತು. ಈ ವೇಳೆ ಕೋತಿ ಅದನ್ನು ಹೊತ್ತುಕೊಂಡು ಓಡಿ ಹೋಗಿದೆ. ನ್ಯಾಯಾಲಯಕ್ಕೆ ಸಾಕ್ಷ್ಯವನ್ನು ಹಾಜರುಪಡಿಸುವಂತೆ ಸೂಚನೆ ನೀಡಿದಾಗ ಪೊಲೀಸರು ಈ ವಿಷಯವನ್ನು ತಿಳಿಸಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಪ್ರಕರಣದ ಆರೋಪಿಗಳನ್ನು ಹೇಗಾದರೂ ಪತ್ತೆಮಾಡಿದ ಪೊಲೀಸರಿಗೆ ಇದೀಗ ಕೋತಿಯನ್ನು ಹುಡುಕುವುದು ದೊಡ್ಡ ಸವಾಲಾಗಿದೆ. ಕೋತಿ ಸಿಕ್ಕರೂ ಅದು ಎತ್ತಾಕೊಂಡು ಹೋದ ಸಾಕ್ಷ್ಯಾಧಾರ ಸಿಗಬಹುದೇ ಎಂಬುದು ಎಲ್ಲರಲ್ಲಿ ಮೂಡಿರುವ ಯಕ್ಷಪ್ರಶ್ನೆ.

Leave a Reply

error: Content is protected !!
Scroll to Top
%d bloggers like this: