ಶಾಲೆಗಳ ರಜೆ ವಿಸ್ತರಣೆ ಕುರಿತು ಶಿಕ್ಷಣ ಸಚಿವರಿಂದ ಮಹತ್ವದ ಮಾಹಿತಿ

ವಿಧಾನಪರಿಷತ್ ಜೆಡಿಎಸ್ ಸದಸ್ಯ ಬೋಜೇಗೌಡ ಸೇರಿದಂತೆ ಕೆಲ ಮೇಲ್ಮನೆ ಸದಸ್ಯರು ಈ ಬಾರಿ ಬಿಸಿಲ ಬೇಗೆಯ ತಾಪಮಾನ ಹೆಚ್ಚಾಗಿರುವುದರಿಂದ, ಶಾಲೆಗಳನ್ನು ಒಂದು ತಿಂಗಳು ಕಾಲ ವಿಸ್ತರಿಸುವಂತೆ ಮನವಿ ಮಾಡಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ.

ಈ ಬಗ್ಗೆ ಶಾಲೆ ಆರಂಭದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಶಾಲೆ ರಜೆ ವಿಸ್ತರಣೆ ಮಾಡಬೇಕು ಎಂಬ ಬಗ್ಗೆ ಕೆಲ ಶಾಸಕರು ಆಗ್ರಹ ಮಾಡಿದ್ದಾರೆ ಎಂಬ ಮಾಹಿತಿ ಬಂದಿದೆ. ಆದರೆ ಈ ಬಾರಿ ಕಲಿಕಾ ಚೇತರಿಕೆ ಕಾರ್ಯಕ್ರಮ ರೂಪಿಸಿ 15 ದಿನ ಮೊದಲೇ ಶಾಲೆ ಆರಂಭಿಸಲು ನಿರ್ಧರಿಸಲಾಗಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದ್ದಾರೆ.

ಕಲಿಕಾ ಕೊರತೆ ಸರಿದೂಗಿಸಲು ಈ ಬಾರಿ 15 ದಿನ ಮೊದಲೇ ಅಂದರೆ ಮೇ.16 ರಿಂದಲೇ ಶಾಲೆ ಆರಂಭಿಸಿ, ಕಲಿಕಾ ಚೇತರಿಕೆ ಕಾರ್ಯಕ್ರಮ ನಡೆಸಲು ಸಜ್ಜಾಗಿದೆ.

ಕೊರೊನಾ ಕಾರಣದಿಂದಾಗಿ ಕುಸಿತವಾಗಿರುವ ಕಲಿಕಾ ಸಾಮಾರ್ಥ್ಯವನ್ನು ಸರಿದೂಗಿಸುವುದು ಅನಿವಾರ್ಯ. ಈಗಾಗಲೇ ವಿದ್ಯಾರ್ಥಿಗಳು ಕೂಡ ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ಅವರನ್ನು ಚೇತರಿಸುವ ಅಗತ್ಯವಿದೆ. 2022-23ನೇ ಶೈಕ್ಷಣಿಕ ವರ್ಷವನ್ನು ಮೇ 16ರಿಂದಲೇ ಪ್ರಾರಂಭಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ ಎಂದು ಸಚಿವ ಮಾಹಿತಿ ನೀಡಿದ್ದಾರೆ.

ಕೊರೊನಾ ಆರಂಭಗೊಂಡ ವರ್ಷದಲ್ಲೂ ಶೈಕ್ಷಣಿಕ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಬಳಿಕದ ವರ್ಷ ಸಂಪೂರ್ಣ ಅವಧಿಯಲ್ಲಿ ಭೌತಿಕ ತರಗತಿಗಳೇ ನಡೆದಿಲ್ಲ. ಕಳೆದ ಶೈಕ್ಷಣಿಕ ವರ್ಷದಲ್ಲಿ ಅರ್ಧ ಅವಧಿ ಮಾತ್ರವೇ ತರಗತಿಗಳು ನಡೆದಿವೆ. ಈ ಎಲ್ಲಾ ವಿಚಾರಗಳು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡಿವೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

Leave A Reply

Your email address will not be published.