ಕೆಲದಿನಗಳಿಂದ ಕಣ್ಣಾ ಮುಚ್ಚಾಲೆ ಆಡುತ್ತಿದ್ದ ಮಳೆ ಮತ್ತೆ ಆರ್ಭಟಿಸಲು ರೆಡಿ !! | ರಾಜ್ಯದಲ್ಲಿ ಮುಂದಿನ ಮೂರು ದಿನಗಳಲ್ಲಿ ಭಾರೀ ಮಳೆ ಸಾಧ್ಯತೆ

ಎರಡು ದಿನಗಳಿಂದ ದಿನಾ ಸಂಜೆಯ ಬಳಿಕ ಮಳೆರಾಯ ಮೋಡಗಳ ಮರೆಯಲ್ಲಿ ಆಗಾಗ ಮುಖ ತೋರಿಸಿ ಮತ್ತೆ ಹೋಗುತ್ತಿದ್ದಾನೆ. ಹಗಲಿನ ವಿಪರೀತ ಸೆಕೆಯ ನಡುವೆ ಸಂಜೆ ಗುಡುಗು ಮಿಂಚು ಮೊಳಗಿ ಇನ್ನೇನು ಜೋರು ಮಳೆ ಬಂದೇ ಬಿಡ್ತು ಅನ್ನುವಷ್ಟರಲ್ಲಿ ಮಂಗ ಮಾಯ. ಆದರೂ ಬೆಂಗಳೂರು, ಮಂಗಳೂರು ಸೇರಿದಂತೆ ಹಲವೆಡೆ ಮಧ್ಯಮ ಪ್ರಮಾಣದ ಮಳೆ ಬಿದ್ದಿದೆ. ಇದು ಮುಂದುವರೆದು ರಾಜ್ಯಾದ್ಯಂತ ಜೋರು ಮಳೆ ಬೀಳುವ ಲಕ್ಷಣಗಳಿವೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಕ್ಷಿಣ ಅರಬ್ಬಿ ಸಮುದ್ರದಲ್ಲಿ ಚಂಡಮಾರುತದ ಕಾರಣದಿಂದ ಮೇ 5 ರಿಂದ ಮೂರು ದಿನಗಳ ಕಾಲ ರಾಜ್ಯದ ಹಲವೆಡೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇನ್ನು ಬುಧವಾರವೂ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು, ಮಳೆಯಿಂದಾಗಿ ರಾಜ್ಯದಲ್ಲಿ ಮೂವರು ಮೃತಪಟ್ಟಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲೂರು ತಾಲೂಕಿನ ಮೇಗಳಹಟ್ಟಿಯಲ್ಲಿ ಸಿಡಿಲು ಬಡಿದು ತಾಯಿ ಮತ್ತು ಮಗ ಮೃತಪಟ್ಟಿದ್ದಾರೆ.

ಹುಬ್ಬಳ್ಳಿಯಲ್ಲಿ ನಿನ್ನೆ ಭಾರೀ ಗಾಳಿ ಸಹಿತ ಮಳೆಯಾಗಿದ್ದು, ಈ ಸಂದರ್ಭದಲ್ಲಿ ಸ್ಕೂಟಿಯಲ್ಲಿ ಪ್ರಯಾಣ ಮಾಡುತ್ತಿದ್ದ ವಿದ್ಯಾರ್ಥಿನಿಯರು ಬಿರುಗಾಳಿಯ ಹೊಡೆತಕ್ಕೆ ಸಿಲುಕಿ ಪರದಾಡಿದ್ದಾರೆ. ಈ ರೀತಿ ವಿದ್ಯಾರ್ಥಿಗಳು ಗಾಳಿ ಮಳೆಗೆ ಸಿಲುಕಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಸುಮಾರು ಅರ್ಧ ತಾಸು ಸುರಿದ ಮಳೆಯ ಅಬ್ಬರಕ್ಕೆ ಹುಬ್ಬಳ್ಳಿ ನಗರದಲ್ಲಿ ವಿವಿಧೆಡೆ ಮರಗಳು, ಕೊಂಬೆಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದವು. ಮೂರ್ನಾಲ್ಕು ಮನೆಗಳ ಗೋಡೆಗಳು ಕುಸಿದಿವೆ. ಮರಗಳು ರಸ್ತೆಗೆ ಅಡ್ಡವಾಗಿ ಬಿದ್ದಿದ್ದರಿಂದಾಗಿ ಹಲವು ರಸ್ತೆಗಳಲ್ಲಿ ಗಂಟೆಗಟ್ಟಲೆ ವಾಹನಗಳ ಸಂಚಾರ ಬಂದ್ ಆಯಿತು. ಕೆಲವು ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಯಿತು.

ಮಡಿಕೇರಿ, ಹಾಸನ ಜಿಲ್ಲೆಯಲ್ಲಿ ಬುಧವಾರ ಮಧ್ಯಾಹ್ನ ಆಲಿಕಲ್ಲು ಸಹಿತ ಧಾರಾಕಾರ ಮಳೆ ಸುರಿಯಿತು.
ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಲವು ಭಾಗಗಳಲ್ಲಿ ಬುಧವಾರ ಸಂಜೆ ಭಾರೀ ಮಳೆ ಸುರಿದಿದೆ.

Leave A Reply

Your email address will not be published.