ಕನ್ನಡದ ಕೋಟ್ಯಧಿಪತಿಯ ತಿಮ್ಮಣ್ಣ ಆತ್ಮಹತ್ಯೆ! ಗೃಹಪ್ರವೇಶಕ್ಕೆ ಮುನ್ನಾದಿನವೇ ನಡೆದ ದುರಂತ !

ನಟ ರಮೇಶ್ ಅರವಿಂದ್ ಅವರು ನಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಧಿಪತಿಯಲ್ಲಿ ಭಾಗವಹಿಸಿದ್ದ ಟಿಕ್ ಟಾಕ್, ಹಾಸ್ಯ, ಸಂಗೀತದ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಬೀಳಗಿ ಹೆಸ್ಕಾಂ ಲೈನ್‌ಮನ್ ತಿಮ್ಮಣ್ಣ ಭೀಮಪ್ಪ ಗುರಡ್ಡಿ(27) ದುರಂತ ಅಂತ್ಯ ಕಂಡಿದ್ದಾರೆ.
ಓದಿದ್ದು ಎಸ್ಸೆಸ್ಸೆಲ್ಸಿ ಆದರೂ ಅಪಾರ ಜ್ಞಾನ ಹೊಂದಿದ್ದ
ತಿಮ್ಮಣ್ಣ ಅವರು ಈ ಪ್ರೋಗ್ರಾಂನಲ್ಲಿ 6.40 ಲಕ್ಷ ರೂ. ಗೆದ್ದಿದ್ದರು. ಖೋ ಖೋ ಕ್ರೀಡಾಪಟು ಕೂಡ ಆಗಿದ್ದ ಇವರು ಗ್ರಾಮದ ಮಕ್ಕಳಿಗೆ ಖೋಖೋ ತರಬೇತಿಯನ್ನೂ ನೀಡುತ್ತಿದ್ದರು. ಇತ್ತೀಚೆಗೆ ಊರಲ್ಲಿ ಹೊಸದಾಗಿ ಮನೆಯನ್ನು ಕೂಡಾ ಕಟ್ಟಿಸಿದ್ದರು. ಇನ್ನೊಂದು ತಿಂಗಳಲ್ಲಿ ಮದುವೆ ನಿಶ್ಚಯ ಆಗುವ ಸಾಧ್ಯತೆಯೂ ಇತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಂದು (5) ಅವರ ನೂತನ ಮನೆಯ ಗೃಹಪ್ರವೇಶ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಬೇಕಿತ್ತು. ಇದಕ್ಕೂ 2 ದಿನ ಮೊದಲೇ ತಿಮ್ಮಣ್ಣ ದುರಂತ ಅಂತ್ಯ ಕಂಡಿದ್ದಾರೆ. ನೇಣುಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಮುಧೋಳ ತಾಲೂಕಿನ ಮಂಟೂರ ವ್ಯಾಪ್ತಿಯ ತೋಟದಲ್ಲಿ ಸೋಮವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ತಂದೆ ಚಿಕಿತ್ಸೆಗೆ ಹಾಗೂ ಮನೆ ನಿರ್ಮಾಣಕ್ಕೆ ಮಾಡಿದ ಸಾಲದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆಯಾದರೂ ಇದನ್ನು ತಿಮ್ಮಣ್ಣರ ಸ್ನೇಹಿತರು ಸಾರಾಸಗಟಾಗಿ ಅಲ್ಲಗೆಳೆದಿದ್ದಾರೆ.
ಆತನಿಗೆ ದುಡ್ಡಿನ ಸಮಸ್ಯೆ ಇರಲಿಲ್ಲ, ಒಳ್ಳೆ ಸಂಬಳ ಇತ್ತು. ಅದರ ಆಧಾರದ ಮೇಲೆ ಬ್ಯಾಂಕ್‌ನಲ್ಲಿ ಸಾಲ ಪಡೆದು ಮನೆ ನಿರ್ಮಿಸಿದ್ದ. ಆದರೆ ಮಂಗಳವಾರ ಬೆಳಗ್ಗೆ 7 ಗಂಟೆಗೆ ಆತ್ಮಹತ್ಯೆ ಸುದ್ದಿ ಕೇಳಿ ಆಘಾತವಾಯ್ತು ಎಂದು ಸ್ನೇಹಿತರು ಕಣ್ಣೀರಿಟ್ಟಿದ್ದಾರೆ.
ತಿಮ್ಮಣ್ಣನ ಸಾವಿಗೆ ನಿಜವಾದ ಕಾರಣ ಏನು? ಆ ರಾತ್ರಿ ನಡೆದದ್ದೇನು? ಎಂಬುದಕ್ಕೆ ಖಚಿತ ಉತ್ತರ ಇನ್ನೂ ಸಿಕ್ಕಿಲ್ಲ.