ಜೆಸಿಬಿ ಟಯರ್ ಗೆ ಗಾಳಿ ತುಂಬುತ್ತಿದ್ದ ವೇಳೆ ಸ್ಫೋಟಗೊಂಡ ಟಯರ್ !! | ಇಬ್ಬರು ಕಾರ್ಮಿಕರು ದುರ್ಮರಣ- ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ವಾಹನ ವರ್ಕ್‌ಶಾಪ್‌ನಲ್ಲಿ ಜೆಸಿಬಿ ಟಯರ್ ಗೆ ಗಾಳಿ ತುಂಬುತ್ತಿದ್ದಾಗ ಟಯರ್ ಸ್ಫೋಟಗೊಂಡು ಅಲ್ಲಿದ್ದ ಇಬ್ಬರು ನೌಕರರು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆಯೊಂದು ಛತ್ತೀಸ್‌ಗಢದ ರಾಯಪುರದ ಸಿಲ್ತಾರಾದಲ್ಲಿ ಮುನ್ನೆಲೆಗೆ ಬಂದಿದೆ.

ಮೃತ ನೌಕರರನ್ನು ರಾಜಪಾಲ್ ಮತ್ತು ಪ್ರಂಜನ್ ಎಂದು ಗುರುತಿಸಲಾಗಿದೆ.

ರಾಯ್‌ಪುರದ ಸಿಲ್ತಾರಾ ಕೈಗಾರಿಕಾ ಪ್ರದೇಶದಲ್ಲಿ ಮೇ 3 ರಂದು ಸಂಭವಿಸಿದ ಈ ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೀಡಿಯೋ ತುಣುಕಿನಲ್ಲಿ ದೊಡ್ಡ ಟೈರ್‌ನಲ್ಲಿ ಕೆಲಸಗಾರ ಗಾಳಿ ತುಂಬುತ್ತಿರುವುದನ್ನು ಕಾಣಬಹುದು. ನಂತರ ಇನ್ನೊಬ್ಬ ವ್ಯಕ್ತಿ ಬಂದು ಗಾಳಿಯ ಪ್ರಮಾಣವನ್ನು ಪರೀಕ್ಷಿಸಲು ಟೈರ್ ಅನ್ನು ಒಂದೆರಡು ಬಾರಿ ಒತ್ತಿದ್ದಾರೆ. ಆ ವೇಳೆ ಟೈರ್ ಸ್ಫೋಟಗೊಂಡಿದೆ. ಸ್ಫೋಟದಲ್ಲಿ ಇಬ್ಬರು ವ್ಯಕ್ತಿಗಳು ಹಾರಿಹೋಗಿರುವ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದೆ.

ಸ್ಫೋಟದ ತೀವ್ರತೆ ಎಷ್ಟು ತೀವ್ರವಾಗಿತ್ತು ಎಂದರೆ ಟೈರ್ ಬಳಿಯಿದ್ದ ಇಬ್ಬರೂ ಕೆಲಸಗಾರರು ಗಾಳಿಯಲ್ಲಿ ಹಾರಿ ಹೋಗಿದ್ದಾರೆ. ಅದಲ್ಲದೆ ಅವರ ದೇಹದ ಕೆಲವು ತುಂಡುಗಳೂ ಅಲ್ಲಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಇದೇ ವೇಳೆ ಜೆಸಿಬಿಯ ಟೈರ್ ಕೂಡ ಹಾರಿ ಬಿದ್ದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಲ್ತಾರಾ ಔಟ್‌ಪೋಸ್ಟ್ ಇನ್‌ಚಾರ್ಜ್ ಅವರು, ಸಿಲ್ತಾರಾ ಪ್ರದೇಶದ ಘನ್‌ಕುನ್ ಸ್ಟೀಲ್ಸ್ ಪ್ರೈವೇಟ್ ಲಿಮಿಟೆಡ್‌ನ ಗ್ಯಾರೇಜ್‌ನಲ್ಲಿ, ಇಬ್ಬರು ನೌಕರರು ಜೆಸಿಬಿಯ ಟೈರ್‌ಗೆ ಗಾಳಿ ತುಂಬುತ್ತಿದ್ದರು. ಈ ವೇಳೆ ಏಕಾಏಕಿ ಟೈರ್ ಸ್ಫೋಟಗೊಂಡಿದೆ. ಈ ದುರ್ಘಟನೆಯಲ್ಲಿ ಒಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

Leave A Reply

Your email address will not be published.