ಜನಪ್ರಿಯ ಸಾಮಾಜಿಕ ಜಾಲತಾಣವಾದ ಟ್ವಿಟರ್ ಇನ್ನು ಉಚಿತ ಸಾಮಾಜಿಕ ಜಾಲತಾಣವಾಗಿ ಮುಂದುವರಿಯುವುದಿಲ್ಲ ಎಂಬ ಸುಳಿವನ್ನು ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಸಾಮಾನ್ಯ ಬಳಕೆದಾರರಿಗೆ ಟ್ವಿಟರ್ ಎಂದಿನಂತೆ ಉಚಿತವಾಗಿಯೇ ಇರಲಿದೆ. ಆದರೆ,ವಾಣಿಜ್ಯ ಮತ್ತು ಸರ್ಕಾರದ ಬಳಕೆದಾರರಿಗೆ ಅಲ್ಪ ಮೊತ್ತದ ಶುಲ್ಕ ವಿಧಿಸಬಹುದು ಎಂದು ಹೇಳಿದ್ದಾರೆ.
ಟ್ವಿಟರ್ ಮಂದಿನ ದಿನಗಳಲ್ಲಿ ಪೇವಾಲ್ ಸಾಮಾಜಿಕ ಜಾಲತಾಣದ ಸ್ವರೂಪ ಪಡೆಯಲಿದೆ. ಆದರೆ ಸಾಂದರ್ಭಿಕ ಬಳಕೆದಾರರಿಗೆ ಟ್ವಿಟ್ಟರ್ ಸದಾ ಉಚಿತವಾಗಿರುತ್ತದೆ. ವಾಣಿಜ್ಯ ಅಥವಾ ಸರ್ಕಾರಿ ಬಳಕೆದಾರರಿಗೆ ಸ್ವಲ್ಪ ಶುಲ್ಕ ವಿಧಿಸಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಟ್ವಿಟರ್ ಈಗಾಗಲೇ ‘ಟ್ವಿಟರ್ ಬ್ಲೂ’ ಮೂಲಕ ಪಾವತಿ ಆಧಾರಿತ ಸೇವೆಗಳನ್ನು ನೀಡುತ್ತಿದೆ. ಆ ಸೇವೆಯನ್ನು ಪಡೆಯುತ್ತಿರುವ ಬಳಕೆದಾರರಿಗೆ ಪ್ರೀಮಿಯಂ ಆಯ್ಕೆಗಳು ಮತ್ತು ಬಳಕೆಗೆ ತಕ್ಕಂತೆ ಆಯಪ್‌ನಲ್ಲಿ ಬದಲಾವಣೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ.
ಶುಲ್ಕ ಆಧರಿತ ಚಂದಾದಾರಿಕೆಯ ಯೋಜನೆಯೇನೂ ಹೊಸದಲ್ಲ. ಟ್ವಿಟರ್ ಬ್ಲೂ ಇಂಥದ್ದೇ ಪರಿಕಲ್ಪನೆ. ಈ ಸೇವೆಯಡಿ ಟ್ವಿಟರ್ ತನ್ನ ನಿಷ್ಠಾವಂತ ಗ್ರಾಹಕರಿಗೆ ಪ್ರಮುಖ ವಿಶೇಷತೆಗಳ ಲಭ್ಯತೆಯನ್ನು ನೀಡುತ್ತದೆ ಹಾಗೂ ಮಾಸಿಕ ಚಂದಾದಾರಿಕೆ ಶುಲ್ಕಕ್ಕೆ ಕಸ್ಟಮೈಸ್ ಮಾಡಲಾದ ಆಯಪ್ ಸೇವೆ ಒದಗಿಸುತ್ತದೆ.
ಟ್ವಿಟರ್ ಬ್ಲೂ, ಐಓಎಸ್, ಆಂಡ್ರಾಯ್ಡ್ ಮತ್ತು ವೆಬ್‍ನಲ್ಲಿ ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್‍ನಲ್ಲಿ ಲಭ್ಯ.