“ಲೈಂಗಿಕ ಕ್ರಿಯೆ” ಗೂ ಮುನ್ನ ಸಂಗಾತಿಗಳು ಈ ಪ್ರಶ್ನೆ ಕೇಳುವುದು ಅವಶ್ಯಕ!

‘ಲೈಂಗಿಕ ಕ್ರಿಯೆ’ ಇಬ್ಬರು ವ್ಯಕ್ತಿಗಳನ್ನು ಭಾವನಾತ್ಮಕವಾಗಿ ಹತ್ತಿರವಾಗಿಸುತ್ತದೆ. ತುಂಬಾ ಸಲ ನಾವು ವ್ಯಕ್ತಿಯ ಆಕರ್ಷಣೆಗೊಳಗಾಗಿ ಅವರ ಹಿಂದೆ ಹೋಗಿ ಅಸುರಕ್ಷಿತ ಲೈಂಗಿಕ ಕ್ರಿಯೆ ಮಾಡಿ, ಒಮ್ಮೆ ತಪ್ಪು ಮಾಡಿದರೆ ಚೇತರಿಕೆ ಬಹಳ ಕಷ್ಟ. ಹಾಗಾಗಿ ಶಾರೀರಿಕ ಸಂಬಂಧಕ್ಕೆ ಮುನ್ನ ಕೆಲವೊಂದು ವಿಷಯವನ್ನು ಗಂಡು ಹೆಣ್ಣು ಇಬ್ಬರೂ ತಿಳಿದುಕೊಳ್ಳುವುದು ಬಹಳ ಮುಖ್ಯ.

ಸೆಕ್ಸ್ ಬಗ್ಗೆ ಒಬ್ಬೊಬ್ಬರ ಕಲ್ಪನೆ ಬೇರೆ ಬೇರೆನೇ ಇದೆ. ಮೊದಲ ಬಾರಿ ಸೆಕ್ಸ್ ನಡೆಸೋ ಮುನ್ನ ಸಂಗಾತಿಗೆ ಕೆಲ ಪ್ರಶ್ನೆಗಳನ್ನು ಕೇಳುವುದು ಉತ್ತಮ. ಸಂಭೋಗಕ್ಕೂ ಮುನ್ನ ಯಾವ ಪ್ರಶ್ನೆಗಳನ್ನು ಕೇಳಬೇಕೆಂದು ಕೆಲವೊಂದು ಮಾಹಿತಿ ಇಲ್ಲಿ ನೀಡಿದ್ದೇವೆ.


Ad Widget

Ad Widget

Ad Widget

ಹಿಂದಿನ ಕಾಲದಲ್ಲಿ ಮದುವೆ ಮಾತ್ರ ಲೈಂಗಿಕ ಸಂಪರ್ಕ ಹೊಂದಲು ರಹದಾರಿ ಆಗಿತ್ತು. ಈಗ ಸೆಕ್ಸ್ ಮಾಡಲು ಹಲವು ದಾರಿಗಳಿವೆ. ಅದು ಲಿವ್ ಇನ್ ರೆಲೇಶನ್ಶಿಪ್ ಇರಬಹುದು, ಪರಸ್ಪರ ಆಕರ್ಷಿತರಾದ ಗೆಳೆಯರಿಬ್ಬರು ನಡೆಸುವ ಲೈಂಗಿಕ ಚಟುವಟಿಕೆ ಇರಬಹುದು. ಜೊತೆಗೆ ಈಗ ತಾನೇ ಶುರುವಾಗ ಒನ್ ಟೈಮ್ ರಿಲೇಶನ್ ಶಿಪ್ ಆದ ಒಂದು ರಾತ್ರಿಯ ಸಂಧಾನ – ವನ್ ನೈಟ್ ಸ್ಟಾಂಡ್ -ಕೂಡಾ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಆದರೆ ನಾವಿಲ್ಲಿ ಮಾತಾಡುತ್ತಿರುವ ವಿಚಾರ ಸುರಕ್ಷಿತ ಲೈಂಗಿಕ ಕ್ರಿಯೆ ಬಗ್ಗೆ. ಇಲ್ಲಿ ಲೈಂಗಿಕ ಸಂಪರ್ಕ ಬೆಳೆಸುವ ವ್ಯಕ್ತಿಗಳು ಪರಸ್ಪರ ವ್ಯಕ್ತಿಯನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಸಂಭೋಗದ ಮೊದಲು ಇಬ್ಬರು ಭಾವನಾತ್ಮಕವಾಗಿ ಒಂದಾಗಿರಬೇಕು. ಯಾರೇ ಆಗಿರಲಿ, ಸಂಭೋಗ ಬೆಳೆಸುವ ಮೊದಲು ಆಯ್ಕೆ ಸರಿಯಾಗಿದೆಯೇ ಎಂದು ತಮ್ಮಲ್ಲೇ ಪ್ರಶ್ನೆ ಮಾಡಿಕೊಳ್ಳುವುದು ಉತ್ತಮ. ಯಾಕೆಂದ್ರೆ ಮುಂದೆ ಸಮಸ್ಯೆಯಾಗುತ್ತದೆ. ಕ್ವಿಕ್ ಸೆಕ್ಸ್ ಆ ಕ್ಷಣಕ್ಕೆ ಕ್ರೇಜ್ ಹುಟ್ಟಿಸಬಹುದು. ಸ್ವಲ್ಪ ಎಡವಟ್ಟಾದರೂ ಅದು ಜೀವಕ್ಕೆ ಕುತ್ತಾಗಬಹುದು.

ಸಾಧಾರಣವಾಗಿ ಮಹಿಳೆಯರು ಸುಂದರ ಹುಡುಗನ ಜೊತೆ ಶಾರೀರಿಕ ಸಂಬಂಧ ಬೆಳೆಸಲು ಆಸಕ್ತಿ ಹೊಂದಿರುತ್ತಾರೆ. ಯಾಕೆಂದರೆ ಸೌಂದರ್ಯ ಮೊತ್ತಮೊದಲಾಗಿ ಆಕರ್ಷಿಸುತ್ತದೆ. ಆತನ ಬಗ್ಗೆ ಸರಿಯಾಗಿ ತಿಳಿಯದೆ ಸಂಭೋಗ ಬೆಳೆಸುವ ಆಸಕ್ತಿ ಬೆಳೆಸುತ್ತಾರೆ. ಸುಂದರವಾದ ಹುಡುಗ್ರೆಲ್ಲ ಒಳ್ಳೆಯವರಾಗಿರ್ತಾರೆ ಎನ್ನಲು ಸಾಧ್ಯವಿಲ್ಲ. ಮದ್ಯಪಾನದ ಚಟ ಇರಬಹುದು, ಅತಿ ಹೆಚ್ಚು ಕೋಪ ಮಾಡಿಕೊಳ್ಳುವುದು ಕೂಡಾ ಸೆಕ್ಸ್ ನಂತರದ ಸಂಬಂಧ ಹಳಸಲು ಕಾರಣ ಆಗುತ್ತದೆ. ಮೊದಮೊದಲು ಅವರ ಜೊತೆ ಸಂಭೋಗ ಬೆಳೆಸುವುದು ಖುಷಿ ನೀಡಬಹುದು. ಆದ್ರೆ ಕೊನೆಗೆ ಇದೇ ಸಂಕಷ್ಟ ತರಬಹುದು. ಹಾಗಾಗಿ ಸೌಂದರ್ಯ ನೋಡಿ ಸಂಬಂಧ ಬೆಳೆಸುವ ಮೊದಲು ಅವರ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದು ಮುಖ್ಯ.

ಸಂಭೋಗ ನಡೆಸುವ ಮೊದಲು ನಿಮ್ಮ ಸಂಗಾತಿ ಬೇರೆಯವರ ಜೊತೆ ಸಂಬಂಧ ಹೊಂದಿದ್ದಾರೆಯೇ ಎಂಬುದನ್ನು ಪತ್ತೆ ಮಾಡಿ. ಒಂದು ವೇಳೆ ಸಂಬಂಧ ಬೆಳೆಸಿದ್ದರೆ, ಯಾವುದೇ ಕಾರಣಕ್ಕೂ ಅವರ ಜೊತೆ ಸಂಬಂಧ ಬೆಳೆಸಬೇಡಿ. ಆದರೆ ಈ ವಿಷಯ ತಿಳಿದುಕೊಳ್ಳುವುದು ಕಷ್ಟ. ಹೊಸ ಸಂಗಾತಿಯ ಜೊತೆ ತಾನು ಈ ಹಿಂದೆ ನಡೆಸಿದ ಸರಸ ಸಲ್ಲಾಪಗಳ ಬಗ್ಗೆ ಸಾಮಾನ್ಯವಾಗಿ ಯಾರೂ ಬಿಚ್ಚಿಡುವುದಿಲ್ಲ. ಆದ್ರೆ ಬಾಯಿ ಬಿಚ್ಚಿ ಹೇಳದೆ ಹೋದರೂ, ಎದುರು ವ್ಯಕ್ತಿಯ ನೋಟ, ಭಾವನೆಗಳನ್ನು ವ್ಯಕ್ತಪಡಿಸುವ ರೀತಿ ಮತ್ತು ಪದೇ ಪದೇ ಪಲ್ಲಟ ಗೊಳ್ಳುವ ಮನಸ್ಸನ್ನು ಓದಲು ಕಲಿಯುವುದು ಬಹು ಮುಖ್ಯ. ಅದಕ್ಕೆ ತಾಳ್ಮೆ ಬೇಕಾಗುತ್ತದೆ. ಮತ್ತು ಅದು ಸಮಯವನ್ನು ಬೇಡುತ್ತದೆ. ಬೆಳಿಗ್ಗೆ ಪರಿಚಯವಾಗಿ ನಾಳೆ ಸಂಜೆಯ ಹೊತ್ತಿಗೆ ಪಲ್ಲಂಗದಲ್ಲಿ ಆಗುವ ಅವಸರ ಇರುವವರಿಗೆ ಇದು ಸಾಧ್ಯವಿಲ್ಲ. ಅಂತಹವರು ಇತರ ಸುರಕ್ಷತಾ ವಿಧಾನಗಳನ್ನು ಪಾಲಿಸುವುದು ಅತಿಮುಖ್ಯ.

ನೀವು ಯಾರ ಜೊತೆ ಸಂಭೋಗ ಬೆಳೆಸುವ ಮೊದಲು ಎಸ್ ಟಿಡಿ ಮತ್ತು ಎಚ್ ಐವಿ ಪರೀಕ್ಷೆಯನ್ನು ಯಾವಾಗ ಮಾಡಿಕೊಂಡಿದ್ದಾರೆ ಎಂಬುದನ್ನು ಅವಶ್ಯಕವಾಗಿ ಕೇಳಬೇಕು. ಇಲ್ಲದೆ ಹೋದರೆ, ಖುದ್ದು ಅವರೊಂದಿಗೆ ತೆರಳಿ ಮಾಡಿಸಿಕೊಂಡು ನಂತರ ಮಾತ್ರ ಮುಂದುವರೆಯಬೇಕು.

ಸಂಭೋಗ ಬೆಳೆಸುವ ಮೊದಲು ಗರ್ಭ ನಿರೋಧಕವಾಗಿ ಏನು ಬಳಸ್ತಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು. ಕೆಲ ಪುರುಷರು ಕಾಂಡೋಮ್ ಬಳಕೆ ಮಾಡಲು ಇಷ್ಟಪಡುವುದಿಲ್ಲ. ಕಾರಣ ಕಾಂಡೋಂಗಳು ಸ್ಪರ್ಶ ಸುಖವನ್ನು ಕಡಿಮೆ ಮಾಡುತ್ತವೆ ಎಂಬ ಭಾವನೆ. ಅದು ಸತ್ಯ ಕೂಡಾ. ಆದರೆ ಅಸುರಕ್ಷಿತ ಸಂಭೋಗ ಅನೇಕ ಸಮಸ್ಯೆಗೆ ಕಾರಣವಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಉತ್ತಮ. ಈಗ ಪುರುಷರು ಬಳಸುವ ಕಾಂಡೊಮ್ ಮಾತ್ರವಲ್ಲ, ಮಹಿಳಾ ಕಾಂಡೊಮ್ ಗಳೂ ಮಾರ್ಕೆಟ್ ನಲ್ಲಿ ಲಭ್ಯ. ಆದ್ರೆ ಅದರ ಸಮರ್ಪಕ ಬಳಕೆಯ ವಿಧಾನ ತಿಳಿದಿರಬೇಕು ಅಷ್ಟೇ. ಅಸುರಕ್ಷಿತ ಸೆಕ್ಸ್ ಅದು ಗುಣಪಡಿಸಲಾಗದ ರೋಗಗಳಿಗೆ ಕಾರಣವಾಗುತ್ತದೆ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ. ಅಲ್ಲದೆ ಐ ಪಿಲ್ ಮುಂತಾದ ಕಾಂಟ್ರಾ ಸೆಪ್ಟಿವ್ ಗುಳಿಗೆಗಳು ಗರ್ಭ ಧರಿಸದ ಹಾಗೆ ಇರಲು ಲಭ್ಯ. ಸೆಕ್ಸ್ ನ ನಂತರ 24 ಗಂಟೆಗಳ ಒಳಗೆ ಅವನ್ನು ತೆಗೆದುಕೊಂಡರೆ, ಗರ್ಭ ಕಟ್ಟುವುದಿಲ್ಲ.

ಅಷ್ಟೇ ಅಲ್ಲ, ಸ್ತ್ರೀಯರು ಒಂದು ಬಾರಿ ಪುರುಷನ ಜೊತೆ ಲೈಂಗಿಕ ಕ್ರಿಯೆಗೆ ಒಪ್ಪಿದರೆ, ಮುಂದೆ ಆಕೆಗೆ ಆತನನ್ನು ತಿರಸ್ಕರಿಸಲು ಆಯ್ಕೆಗಳೇ ಇಲ್ಲದಂತಾಗುತ್ತದೆ. ಕೆಲವು ದಿನ ಮನಸ್ಸಿನ ಪುರುಷರು ಆಕೆಯನ್ನು ಬ್ಲಾಕ್ ಮೇಲ್ ಕೂಡಾ ಮಾಡಬಹುದು. ಫನ್ ಅಂತ ಹೊರಟದ್ದು ಮುಂದಿನ ಜೀವನಕ್ಕೆ ಉರುಳಾಗಬಹುದು. ಎಷ್ಟೋ ಸಲ ಖುಷಿಗಾಗಿ ಖಾಸಗಿಯಾಗಿ ಆಚರಿಸಿಕೊಳ್ಳುವ ಈ ಕ್ಷಣಗಳನ್ನು ಹುಡುಗರು ಗುಟ್ಟಾಗಿ ಚಿತ್ರೀಕರಿಸಿಕೊಂಡು ಅದನ್ನು ತನಗೆ ಬೇಕಾದಂತೆ ಉಪಯೋಗಿಸಿ ಕೊಳ್ಳುವುದನ್ನು ದಿನನಿತ್ಯ ಕಾಣುತ್ತಿದ್ದೇವೆ. ಹೆಣ್ಣು ನಂಬಿಕೆಯಿಂದ ನನ್ನ ಗೆಳೆಯನಿಗೆ ಎಲ್ಲವನ್ನೂ ಒಪ್ಪಿಸಿದ ಸಂದರ್ಭವನ್ನು ಸ್ಪೈ ಕ್ಯಾಮರಾಗಳ ಮೂಲಕ ರೆಕಾರ್ಡ್ ಮಾಡಿಕೊಂಡು ಅದನ್ನು ಪೋರ್ನ್ ಸೈಟುಗಳಿಗೆ ಮಾರಾಟ ಮಾಡುವುದನ್ನು ಗಮನಿಸಬಹುದು. ಒಟ್ಟಾರೆ ಸೆಕ್ಸ್ ಎಂಬುದು ಎಷ್ಟು ಆಕರ್ಷಕವೋ, ಆಯ್ಕೆ ತಪ್ಪಿ ಆಚರಿಸಿದರೆ ಅಷ್ಟೇ ಭೀಕರ !

Leave a Reply

error: Content is protected !!
Scroll to Top
%d bloggers like this: