ರಂಜಾನ್ ಮುನ್ನಾದಿನ ಎರಡು ಸಮುದಾಯಗಳ ನಡುವೆ ಮಾರಾಮಾರಿ !! | ಪರಸ್ಪರ ಕಲ್ಲುತೂರಾಟ, ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿದ ಸರ್ಕಾರ

ಇತ್ತೀಚೆಗೆ ದೇಶದಲ್ಲಿ ಕೋಮು ಸಂಘರ್ಷಗಳು ಹೆಚ್ಚಾಗುತ್ತಿದೆ. ಗಲಭೆಗಳನ್ನು ನಿಯಂತ್ರಿಸಲು ಸರ್ಕಾರಗಳು ಎಷ್ಟೇ ಪ್ರಯತ್ನ ಪಟ್ಟರೂ ಅಹಿತಕರ ಘಟನೆಗಳು ಪುನರಾವರ್ತಿಸುತ್ತಿವೆ. ಹಾಗೆಯೇ ಇದೀಗ ಪವಿತ್ರ ರಂಜಾನ್ ‘ಈದ್ ಉಲ್ ಫ್ರಿತ್’ ಆಚರಣೆಗೂ ಮುನ್ನಾದಿನ ರಾಜಾಸ್ಥಾನದ ಜೋದ್‌ಪುರದ ಜಲೋರಿ ಗೇಟ್ ಬಳಿ ಮುಸ್ಲಿಂ ಧ್ವಜ ಹಾಗೂ ಧ್ವನಿವರ್ಧಕಗಳನ್ನು ಅಳವಡಿಸುವ ವಿಚಾರಕ್ಕೆ ಎರಡು ಸಮುದಾಯಗಳ ನಡುವೆ ಮಾರಾಮಾರಿ ನಡೆದಿದೆ.

ಇಲ್ಲಿನ ಜಲೋರಿ ಗೇಟ್ ಬಳಿಯಿದ್ದ ಹಿಂದೂ ಧ್ವಜವನ್ನು ತೆರವುಗೊಳಿಸಿ ಮುಸ್ಲಿಂ ಧ್ವಜ ಹಾಗೂ ಬ್ಯಾನರ್‌ಗಳನ್ನು ಅಳವಡಿಸುವ ವಿಚಾರಕ್ಕೆ ವಿವಾದ ಏರ್ಪಟ್ಟಿದೆ. ಸ್ವಾತಂತ್ರ‍್ಯ ಹೋರಾಟಗಾರ ಬಾಲ್ ಮುಕುಂದ್ ಬಿಸ್ಸಾ ಅವರ ಪ್ರತಿಮೆಯ ಮೇಲೆ ಮುಸ್ಲಿಂ ಧ್ವಜವನ್ನು ಹಾಕಲಾಗಿತ್ತು. ಜಲೋರಿ ವೃತ್ತದಲ್ಲಿ ಈದ್‌ಗೆ ಸಂಬಂಧಿಸಿದ ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ಇದರ ವಿರುದ್ಧ ಹಿಂದೂ ಸಮುದಾಯ ಘೋಷಣೆಗಳನ್ನು ಕೂಗಲು ಪ್ರಾರಂಭಿಸುತ್ತಿದ್ದಂತೆಯೇ ಜನರು ಆಕ್ರೋಶಗೊಂಡು ಪ್ರತಿಭಟನೆಗಿಳಿದಿದ್ದಾರೆ.

ಎರಡೂ ಸಮಯದಾಯದ ಜನರಿಂದಲೂ ಕಲ್ಲು ತೂರಾಟ ನಡೆದಿದ್ದು, ವಾಹನಗಳಿಗೆ ಹಾನಿಯಾಗಿದೆ. ಪೊಲೀಸರ ಮೇಲೂ ಕಲ್ಲು ತೂರಾಟ ನಡೆದಿದ್ದು, ಧ್ವನಿವರ್ಧಕವನ್ನು ಕಿತ್ತೆಸೆಯಲಾಗಿದೆ. ನಂತರ ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಿ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಈ ವೇಳೆ ಪತ್ರಕರ್ತರ ಮೇಲೂ ಲಾಠಿಚಾರ್ಜ್ ನಡೆದಿದ್ದು, 11 ಮಂದಿಗೆ ಗಾಯಗಳಾಗಿವೆ. ಪರಿಸ್ಥಿತಿ ತಿಳಿಗೊಳಿಸಲು ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ ಎಂದು ವರದಿಯಾಗಿದೆ.

ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಆಡಳಿತಕ್ಕೆ ಸೂಚನೆ ನೀಡಲಾಗಿದೆ. ಈ ಘಟನೆ ಸಂಭವಿಸಿರುವುದು ದುರದೃಷ್ಟಕರ. ಜೋದ್ ಪುರದದಲ್ಲಿ ಸಂಪ್ರದಾಯವನ್ನು ಗೌರವಿಸಿ, ಶಾಂತಿ ಸುವ್ಯವಸ್ಥೆ ಕಾಪಾಡಬೇಕೆಂದು ಎಲ್ಲ ಪಕ್ಷದ ನಾಯಕರಲ್ಲಿ ಮನವಿ ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

Leave A Reply

Your email address will not be published.