250 ವರ್ಷ ಹಳೆಯದಾದ ದೇವಾಲಯ ಸ್ಥಳಾಂತರಕ್ಕೆ ರೈಲ್ವೆ ನೋಟಿಸ್ !! | ಆಕ್ರೋಶಗೊಂಡ ಹಿಂದೂ ಕಾರ್ಯಕರ್ತರಿಂದ ಸಾಮೂಹಿಕ ಆತ್ಮಹತ್ಯೆಯ ಬೆದರಿಕೆ

ರೈಲ್ವೆ ನಿಲ್ದಾಣದ ಆವರಣದಲ್ಲಿರುವ 250 ವರ್ಷ ಹಳೆಯದಾದ ಚಾಮುಂಡ ದೇವಿ ದೇವಾಲಯ ಸ್ಥಳಾಂತರಕ್ಕೆ ರೈಲ್ವೆ ನೋಟಿಸ್ ಹೊರಡಿಸಿದ ಬಳಿಕ ಹಿಂದೂ ಸಂಘಟನೆ ಕಾರ್ಯಕರ್ತರು ಈ ಬಗ್ಗೆ ಆಕ್ರೋಶಗೊಂಡಿದ್ದು, ಜೀವ ಬೆದರಿಕೆ ಹಾಕಿರುವ ಘಟನೆ ಆಗ್ರಾದಲ್ಲಿನ ರಾಜಾ ಕಿ ಮಂಡಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಒಂದು ವೇಳೆ ರೈಲ್ವೆ ಪ್ರಾಧಿಕಾರ ಇದನ್ನು ಮುಂದುವರೆಸಿದ್ದಲ್ಲಿ ರೈಲ್ವೆ ನಿಲ್ದಾಣದಲ್ಲಿಯೇ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹಿಂದೂ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ.

ರೈಲ್ವೆ ನಿಲ್ದಾಣದಿಂದ ದೇವಾಲಯ ಸ್ಥಳಾಂತರಕ್ಕೆ ರೈಲ್ವೆ ವಿಭಾಗೀಯ ಮ್ಯಾನೇಜರ್ ಆನಂದ್ ಸ್ವರೂಪ್ ಏಪ್ರಿಲ್ 20 ರಂದು ದೇವಾಲಯ ಆಡಳಿತ ಮಂಡಳಿಗೆ ನೋಟಿಸ್ ಕಳುಹಿಸಿದ್ದರು. ಪ್ರಯಾಣಿಕರಿಗೆ ತೊಂದರೆಯಾಗುತ್ತಿರುವುದರಿಂದ ದೇವಾಲಯವನ್ನು ಸ್ಥಳಾಂತರಿಸಲಾಗುತ್ತಿದೆ. ಒಂದು ವೇಳೆ ದೇವಾಲಯ ಸ್ಥಳಾಂತರಿಸದಿದ್ದಲ್ಲಿ, ರೈಲ್ವೆ ಫ್ಲಾಟ್ ಫಾರಂನ್ನು ಸ್ಥಳಾಂತರಿಸಬೇಕಾಗುತ್ತದೆ ಎಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿತ್ತು.

ಸಮೀಪದಲ್ಲಿದ್ದ ಮಸೀದಿ, ದರ್ಗಾಗಳಿಗೂ ಇದೇ ರೀತಿಯ ನೋಟಿಸ್ ಕಳುಹಿಸಲಾಗಿತ್ತು. ಈ ನೋಟಿಸ್ ಗೆ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿ, ಆಗ್ರಾದಲ್ಲಿನ ರೈಲ್ವೆ ವಿಭಾಗೀಯ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. 250 ವರ್ಷ ಹಳೆಯದಾದ ದೇವಾಲಯವನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸಬಾರದು ಎಂದು ಅವರು ಆಗ್ರಹಿಸಿದ್ದಾರೆ.

Leave A Reply

Your email address will not be published.