ತುಳುನಾಡ ಸೃಷ್ಟಿಕರ್ತ ‘ಪರಶುರಾಮ’ ನಿಗೆ ಬೃಹತ್ ಪ್ರತಿಮೆಯ ಗೌರವ!

ಕಾರ್ಕಳ: ತುಳುನಾಡು ಪರಶುರಾಮನಿಂದಲೇ ಸೃಷ್ಟಿ ಆಗಿರುವುದು ಎಂಬ ಪ್ರತೀತಿ ಇದೆ. ಅಂತಹ ಪರಶುರಾಮನನಿಗೆ ಗೌರವ ಸಲ್ಲಿಕೆಯ ಕೆಲಸವೊಂದು ಭರದಿಂದ ನಡೆಯುತ್ತಿದೆ. ಪರಶುರಾಮನ ಬೃಹತ್ ಕಂಚಿನ ಪ್ರತಿಮೆಯೊಂದು ನಿರ್ಮಾಣ ಹಂತದಲ್ಲಿದೆ.
ಥೀಂ ಪಾರ್ಕ್ ಉಡುಪಿ ಕಾರ್ಕಳ ಹೆದ್ದಾರಿಯಲ್ಲಿ ಸಿಗುವ ಬೈಲೂರಿನ ಉಮಿಕ್ಕಳ ಬೆಟ್ಟದ ಮೇಲೆ ನಿರ್ಮಾಣಗೊಳ್ಳಲಿದೆ ಈ ಅಭೂತಪೂರ್ವ ಕಂಚಿನ ಪ್ರತಿಮೆ.

ಇದಕ್ಕಾಗಿ ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ವಿವಿಧ ಇಲಾಖೆಗಳ ಅನುದಾನ ಬಳಸಲಾಗುತ್ತಿದೆ. ಪ್ರಸ್ತುತ ಬೆಟ್ಟಕ್ಕೆ ತೆರಳುವ ರಸ್ತೆ ಕಟ್ಟಡದ ತಳ ಪಾಯದ ಕೆಲಸ ಮುಗಿದಿದೆ. ಗೋಡೆ ನಿರ್ಮಾಣ ನಡೆಯುತ್ತಿವೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅನುದಾನದಿಂದ ಹಾಲ್ ಫ್ರೇಮ್ ಕೆಲಸವಾಗುತ್ತಿದೆ. ಶೀಘ್ರ ಭೂಮಿ ಪೂಜೆಯೂ ಕೂಡಾ ನೆರವೇರಲಿದೆ.

ರಸ್ತೆಯಿಂದ 450 ಅಡಿ ಎತ್ತರದ ಬೆಟ್ಟದ ಮೇಲೆ 57 ಅಡಿ ಎತ್ತರದಲ್ಲಿ 33 ಅಡಿಯ ಕಂಚಿನ ಪ್ರತಿಮೆ ಇರಲಿದೆ. 10 ಅಡಿ ಎತ್ತರದ ಪೀಠ ಇರಲಿದೆ. ಈ ಮೂಲಕ ಉಮಿಕ್ಕಳ ಬೆಟ್ಟ ಪ್ರವಾಸಿ ತಾಣ, ವೀಕ್ಷಣಾ ತಾಣ ವಾಗಿಯಷ್ಟೇ ಅಲ್ಲದೆ ಧಾರ್ಮಿಕ ಕ್ಷೇತ್ರವಾಗಿಯೂ ಮುಂದಿನ ದಿನಗಳಲ್ಲಿ ಗಮನ ಸೆಳೆಯಲಿದೆ. ಕರಾವಳಿಯಲ್ಲಿ ಪರಶುರಾಮನ ಬೃಹತ್ ಗಾತ್ರದ ಪ್ರತಿಮೆ ಎಲ್ಲಿಯೂ ಕಾಣಸಿಗದು.

ಗೊಮ್ಮಟೇಶ್ವರ ಬೆಟ್ಟ, ಹಲವಾರು ಬಸದಿಗಳು, ಸಂತ ಲಾರೆನ್ಸ್ ಬಸಿಲಿಕಾ, ಕೋಟಿ ಚೆನ್ನಯ ಥೀಂ ಪಾರ್ಕ್ ಹೀಗೆ ಹತ್ತು ಹಲವು ಆಕರ್ಷ ಣೀಯ ಸ್ಥಳಗಳ ಮೂಲಕ ಪ್ರವಾಸಿ ಕ್ಷೇತ್ರವಾಗಿ ಗಮನ ಸೆಳೆಯುತ್ತಿರುವ ಕಾರ್ಕಳದ ಹಿರಿಮೆಗೆ ಪರಶುರಾಮ ಥೀಂ ಪಾರ್ಕ್ ಶೀಘ್ರದಲ್ಲೇ ಸೇರಲಿದೆ.

Leave A Reply

Your email address will not be published.