ಕೋವಿಡ್ ಲಸಿಕೆ ಕಡ್ಡಾಯ ಅಲ್ಲ – ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಕೊರೊನಾ ಸೋಂಕಿಗೆ ನಿರೋಧಕ ಲಸಿಕೆ ತೆಗೆದುಕೊಳ್ಳುವಂತೆ ಯಾರಿಗೂ ಒತ್ತಡ ಹೇರಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದರ ಜೊತೆಗೆ ಲಸಿಕೆ ಬಗ್ಗೆ ಸರ್ಕಾರ ಮಾಡಿರುವ ನಿಯಮಗಳು ‘ಸರಿಯಲ್ಲ ಎಂದು ಹೇಳುವುದಕ್ಕೆ ಆಗುವುದಿಲ್ಲ’ ಎಂದೂ ಸುಪ್ರೀಂ ಕೋರ್ಟ್ ಹೇಳಿದೆ. ಸಾರ್ವಜನಿಕ ಆರೋಗ್ಯದ ಹಿತ ದೃಷ್ಟಿಯಿಂದ ಮಾತ್ರ ವೈಯಕ್ತಿಕವಾಗಿ ಕೆಲ ನಿಯಮಗಳನ್ನು ಹೇರಿಕೆ ಮಾಡಬಹುದು ಎಂದು ಸ್ಪಷ್ಟಪಡಿಸಿದೆ.

ಕೆಲ ರಾಜ್ಯಗಳು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಲಸಿಕೆ ಕಡ್ಡಾಯ ಮಾಡಿರುವ ನೀತಿಯನ್ನೂ ಪರಿಶೀಲಿಸಲು ಕೋರ್ಟ್ ಹೇಳಿದೆ. ಸದ್ಯ ಸೋಂಕು ನಿಯಂತ್ರಣದಲ್ಲಿದೆ. ಸೋಂಕಿತರ ಸಂಖ್ಯೆ ನಿಯಂತ್ರಣದಲ್ಲಿ ಇರುವ ವರೆಗೂ ಸಾರ್ವಜನಿಕ ಸ್ಥಳಗಳಲ್ಲಿ ಜನತೆಗೆ ಯಾವುದೇ ರೀತಿಯ ನಿಯಂತ್ರಣವನ್ನು ಹೇರಬೇಡಿ ಎಂದಿರುವ ಕೋರ್ಟ್, ಈಗಾಗಲೇ ಹೇರಲಾಗಿರುವ ನಿರ್ಬಂಧಗಳನ್ನು ವಾಪಸ್ ತೆಗೆದುಕೊಳ್ಳಿ ಎಂದಿದ್ದಾರೆ.

ಇನ್ನು ತಮ್ಮ ಅಭಿಪ್ರಾಯವು ಕೊರೊನಾ ನಿಯಮಾವಳಿಗಳಾದ ಮಾಸ್ಕ್, ಸಾಮಾಜಿಕ ಅಂತರಕ್ಕೆ ಅನ್ವಯಿಸುವುದಿಲ್ಲ ಎಂದಿರುವ ನ್ಯಾಯಾಧೀಶರು, ತಮ್ಮ
ಅಭಿಪ್ರಾಯವು ಕೇವಲ ಲಸಿಕೆಗೆ ಸೀಮಿತ ಎಂದಿದ್ದಾರೆ.

ಇದೇ ವೇಳೆ ಕೊರೊನಾ ಲಸಿಕೆಯಿಂದ ಆದ ಅಡ್ಡ ಪರಿಣಾಮಗಳ ಕುರಿತಾದ ವರದಿಯನ್ನು ಪ್ರಕಟಿಸುವಂತೆಯೂ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಹೇಳಿದೆ. ಈ ವರದಿಯನ್ನು ಪ್ರಕಟಿಸುವಾಗ ವೈದ್ಯರು ಹಾಗೂ ಜನರ ಅಭಿಪ್ರಾಯಗಳ ಸಮೇತ ಪ್ರಕಟಿಸಬೇಕು. ಮಾಹಿತಿಯನ್ನು ತಿರುಚಬಾರದು ಹಾಗೂ ಸಾರ್ವಜನಿಕರಿಗೆ ಲಭ್ಯವಾಗುವ ವ್ಯವಸ್ಥೆಯ ಅಡಿ ವರದಿ ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.

ಲಸಿಕೆ ಕಡ್ಡಾಯಗೊಳಿಸಿದ ಸರ್ಕಾರದ ನೀತಿ ವಿರೋಧಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಈ ನಿರ್ಧಾರ ಕೈಗೊಂಡಿದೆ.

Leave A Reply

Your email address will not be published.