ಬಪ್ಪನಾಡು ದಂತಕಥೆಯಲ್ಲಿ ಮುಸ್ಲಿಂ ವ್ಯಕ್ತಿ ಪಾತ್ರದ ಆಯಾಮ ಬದಲು – ಕೋಮು ಸಂಘರ್ಷದ ಎಫೆಕ್ಟ್ !

ಹಿಂದೂ-ಮುಸ್ಲಿಂ ಕೋಮು ಸಾಮರಸ್ಯಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಕ್ಷೇಷ ಹಾಗೂ ಅಸಹನೆಗಳು ಇದೀಗ ಈ ಬಪ್ಪನಾಡುವಿನ ಇತಿಹಾಸ ಹಾಗೂ ದಂತಕಥೆಯ ಮೇಲೆಯೂ ಪ್ರಭಾವ ಬೀರಿದೆ ಎಂಬುದು ಇತ್ತೀಚೆಗೆ ತಿಳಿದು ಬರುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಎಂಬ ಗ್ರಾಮದ ಬಳಿ ಇರುವ ಬಪ್ಪನಾಡು ಐತಿಹಾಸಿಕವಾಗಿ ಬಲು ಪ್ರಸಿದ್ಧಿ ಪಡೆದ ಕ್ಷೇತ್ರ.

ಈ ಬಪ್ಪನಾಡು ಕ್ಷೇತ್ರವು ಬಪ್ಪನಾಡು ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ಹೆಸರುವಾಸಿ, ಅಲ್ಲದೆ, ಇಲ್ಲಿ ನಡೆಯುವ “ಬಪ್ಪನಾಡು ಕ್ಷೇತ್ರ ಮಹಾತ್ಮ” ಎಂಬ ಯಕ್ಷಗಾನವು ತಲತಲಾಂತರಗಳಿಂದ ನಡೆದುಕೊಂಡು ಬಂದಿದ್ದು ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ. ಅಸಲಿಗೆ ಈ ಯಕ್ಷಗಾನವು ಇಲ್ಲಿನ ಪ್ರಸಿದ್ಧ ದಂತಕಥೆಯೊಂದರ ಮೇಲೆ ಆಧಾರಿತವಗಿದ್ದು ಆ ದಂತಕಥೆ ಒಬ್ಬ ಮುಸ್ಲಿಂ ವ್ಯಕ್ತಿಗೆ ಸಂಬಂಧಿಸಿದೆ ಎಂಬುದು ವಿಶೇಷ.

ಬಪ್ಪನಾಡುವಿನ ಯಕ್ಷಗಾನ ಕಥೆಯು ಬಲು ಹಿಂದಿನಿಂದಲೂ ಬ್ಯಾರಿ, ಮಲಯಾಳಂ, ಕನ್ನಡ ಹಾಗೂ ತುಳು ಈ ನಾಲ್ಕು ಭಾಷೆಗಳ ಸಂಭಾಷಣೆ ಹೊಂದಿದೆ.

ಇನ್ನು ಈ ದಂತಕಥೆಯ ವಿಷಯಕ್ಕೆ ಬಂದರೆ, ಸುಮಾರು ಹನ್ನೆರಡನೆಯ ಶತಮಾನದಲ್ಲಿ ಈ ಪ್ರದೇಶದಲ್ಲಿರುವ ಶಾಂಭವಿ ನದಿಯಲ್ಲಿ ಒಂದೊಮ್ಮೆ ಬಪ್ಪಾ ಬ್ಯಾರಿ ಎಂಬ ಮುಸ್ಲಿಂ ವ್ಯಾಪಾರಿಯೊಬ್ಬ ದೋಣಿಯಲ್ಲಿ ಸಾಗುವಾಗ ಅವನಿಗೆ ಕನಸೊಂದು ಬಿದ್ದು ಆ ಕನಸಿನಲ್ಲಿ ದೇವಿ ಪ್ರತ್ಯಕ್ಷಳಾಗಿ ತನಗೊಂದು ದೇವಾಲಯ ನಿರ್ಮಿಸಿಕೊಡಬೇಕೆಂದು ಹೇಳಿದಾಗ, ಬಪ್ಪಾ ಬ್ಯಾರಿ ಆ ಪ್ರದೇಶದಲ್ಲಿ ಅಲ್ಲಿದ್ದ ಜೈನ ಸಮುದಾಯದವರಿಂದ ಭೂಮಿಯನ್ನು ದಾನ ಪಡೆದು ದೇವಾಲಯ ನಿರ್ಮಿಸಿದ್ದ ಎಂದು ಪ್ರತೀತಿ ಹೇಳುತ್ತದೆ.

ತದನಂತರದಿಂದ ಆ ಪ್ರದೇಶದಲ್ಲಿ ಬಪ್ಪಾನ ಮುಸ್ಲಿಂ ವಂಶಸ್ಥರು ಹಾಗೂ ಜೈನ ಸಮುದಾಯದ ವಂಶಸ್ಥರು ಎಲ್ಲರೂ ಸೇರಿ ದೇವಾಲಯಕ್ಕೆ ನಡೆದುಕೊಳ್ಳುತ್ತಿದ್ದಾರೆ ಎಂಬ ಪ್ರತೀತಿ ಚಾಲ್ತಿಯಲ್ಲಿದೆ. ಈ ದಂತಕಥೆಯನ್ನೇ ಕಥಾ ಸ್ವರೂಪದಲ್ಲಿ ಅಂದರೆ ಯಕ್ಷಗಾನದ ರೂಪದಲ್ಲಿ ಕಳೆದ ಹಲವು ದಶಕಗಳಿಂದ ಹೇಳಿಕೊಂಡು ಬರಲಾಗುತ್ತಿದ್ದು ಇದು ಎಲ್ಲರಿಗೂ ತಿಳಿದ ವಿಷಯ. ಬಪ್ಪನಾಡು ಮಹಾತ್ಮ ಯಕ್ಷಗಾನ ಪ್ರಸಂಗದಲ್ಲಿ ಎಲ್ಲ ನಾಲ್ಕು ಭಾಷೆಗಳನ್ನು ಸೂಕ್ತವಾಗಿ ಬಳಸಿ ಸಂಭಾಷಣೆ ನಡೆಸಲಾಗುತ್ತಿತ್ತು.

ಇತ್ತೀಚಿನ ಕೆಲ ಸಮಯದಿಂದ ಹಿಂದೂ-ಮುಸ್ಲಿಂ ಕೋಮು ಸಾಮರಸ್ಯಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಶ್ಲೇಷ ಹಾಗೂ ಅಸಹನೆಗಳು ಇದೀಗ ಈ ಬಪ್ಪನಾಡುವಿನ ಇತಿಹಾಸ ಹಾಗೂ ದಂತಕಥೆಯ ಮೇಲೆಯೂ ಪ್ರಭಾವ ಬೀರಿದೆ ಎಂದರೆ ತಪ್ಪಾಗಲಾರದು.

ಹಿಂದಿನಿಂದಲೂ ಅಂದರೆ ಚಿಕ್ಕವರಿದ್ದಾಗಿನಿಂದಲೂ ಬಪ್ಪನಾಡು ಮಹಾತ್ಮ ಯಕ್ಷಗಾನ ನೋಡುತ್ತ ಬಂದಿರುವ ಕೆಲವರು ಇಂದು ಆ ಯಕ್ಷಗಾನದಲ್ಲಿ ಆಗಿರುವ ಬದಲಾವಣೆ ಕಂಡು ಬೇಸರಿ ಮಾಡುವುದಂತೂ ತಪ್ಪಾಗಲಿಕ್ಕಿಲ್ಲ. ಮೊದಲು ಮಲಯಾಳಂ ಹಾಗೂ ಬ್ಯಾರಿ ಭಾಷೆ ಬಳಸಲ್ಪಡುತ್ತಿದ್ದ ಈ ಆಟದಲ್ಲಿ ಈಗ ಕೇವಲ ತುಳು ಹಾಗೂ ಕನ್ನಡ ಭಾಷೆ ಬಳಸಲ್ಪಡುತ್ತಿದೆ ಎಂದು ಕೆಲವರು ಗಮನಿಸಿದ್ದರೆ, ಇನ್ನೂ ಕೆಲವರು ಆ ಪ್ರಸಂಗದಲ್ಲಿ ಬರುವ ಬಪ್ಪಾ ಪಾತ್ರವನ್ನು ಇಂದು ಸಾಕಷ್ಟು ಆಯಾಮಗಳಲ್ಲಿ ತಿರುಚಲಾಗಿದೆ ಎಂಬುದನ್ನೂ ಹೇಳುತ್ತಾರೆ.

ಅಲ್ಲದೆ, ಈ ಹಿಂದೆ ಬಪ್ಪನಾಡು ದೇವಾಲಯದ ಉತ್ಸವ ಪ್ರತಿ ವರ್ಷ ಜರುಗಿದಾಗ ಇಲ್ಲಿನ ಬಪ್ಪಾ ಅವರ ವಂಶಸ್ಥರಾದ ಮುಸ್ಲಿಮರು ಈ ಉತ್ಸವದಲ್ಲಿ ಭಾಗಿಯಾಗುತ್ತಿದ್ದರು ಹಾಗೂ ತಮ್ಮ ವತಿಯಿಂದ ದೇವಿಗೆ ಅಕ್ಕಿ, ಮಲ್ಲಿಗೆ ಹೂವುಗಳನ್ನು ಕಾಣಿಕೆಯಾಗಿ ನೀಡುತ್ತಿದ್ದರು. ಆದರೆ ಕಳೆದ ಬಾರಿ ನಡೆದ ಉತ್ಸವದಲ್ಲಿ ಅವರು ಭಾಗಿಯಾಗಿರಲಿಲ್ಲ.

ಕಾರಣ, ಇತ್ತೀಚೆಗೆ ಹಲವು ಹಿಂದು ಸಂಘಗಳು ದೇವಸ್ಥಾನಗಳ ವ್ಯಾಪ್ತಿಯಲ್ಲಿ ಮುಸ್ಲಿಮರು ಅಂಗಡಿಗಳನ್ನು ಹಾಕಲು ವಿರೋಧ ವ್ಯಕ್ತಪಡಿಸಿರುವುದು ಪ್ರದೇಶದಲ್ಲಿರುವ ಜನಸಮುದಾಯದ ಮೇಲೆ ಪ್ರಭಾವ ಬೀರಿದೆ ಎಂದಷ್ಟೇ ಹೇಳಬಹುದು.

Leave A Reply

Your email address will not be published.