ಸುಳ್ಯ: ಹೊನಲು ಬೆಳಕಿನ ಹಗ್ಗಜಗ್ಗಾಟ ಪಂದ್ಯಾಟದ ವೇಳೆ ಪರಸ್ಪರ ಹೊಡೆದಾಟ!! ಘಟನೆಯ ವೀಡಿಯೋ ವೈರಲ್-ಸಂಘಟಕರ ನಡೆಗೆ ಆಟಗಾರರು ಗರಂ

ಸುಳ್ಯ: ತಾಲೂಕಿನ ಅರಂತೋಡು ಎಂಬಲ್ಲಿ ವಾಹನ ಚಾಲಕ ಮಾಲಕರ ಸಂಘದ ವತಿಯಿಂದ ನಡೆಯುತ್ತಿದ್ದ ಹೊನಲು ಬೆಳಕಿನ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಆಟಗಾರರು ಮತ್ತು ಸಂಘಟಕರ ನಡುವೆ ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡ ಘಟನೆಯೊಂದು ಬೆಳಕಿಗೆ ಬಂದಿದ್ದು, ಕೆಲ ಬಿಜೆಪಿ ಮುಖಂಡರ ಮಧ್ಯಪ್ರವೇಶದಿಂದ ಪ್ರಕರಣ ತಿಳಿಯಾಗಿದೆ ಎಂದು ತಿಳಿದುಬಂದಿದೆ.

ಘಟನೆ ವಿವರ: ಅರಂತೋಡು ಶಾಲಾ ಮೈದಾನದಲ್ಲಿ ನಡೆಯುತ್ತಿದ್ದ ಹೊನಲು ಬೆಳಕಿನ ಹಗ್ಗಜಗ್ಗಾಟ ಪಂದ್ಯಕ್ಕೆ ಹಲವು ತಂಡಗಳು ಹೆಸರು ನೋಂದಾಯಿಸಿದ್ದವು. ಪಂದ್ಯ ಆರಂಭಕ್ಕೂ ಮುನ್ನ ನಡೆದ ಟಾಸ್ ನಲ್ಲಿ ಶಿವಾಜಿನಗರದ ಮೂರು ತಂಡಗಳು ಎದುರೆದುರಾಗಿದ್ದು, ಈ ವೇಳೆ ಆಟಗಾರರು ಒಂದೇ ಊರಿನ ತಂಡ ಎದುರುಬದುರಾದರೆ ನಮ್ಮೊಳಗೇ ಸ್ಪರ್ಧೆ ನಡೆದಂತಾಗುತ್ತದೆ ಕೊಂಚ ಬದಲಾವಣೆ ಮಾಡಿ ಎಂದು ಸಂಘಟಕರಲ್ಲಿ ಮನವಿ ಮಾಡಿದೆ ಎನ್ನಲಾಗಿದೆ.

ಇದಕ್ಕೆ ಒಪ್ಪದ ಸಂಘಟಕರು ಪಟ್ಟು ಬಿಡದೆ ಬದಲಾವಣೆಗೆ ಒಪ್ಪಿಗೆ ಸೂಚಿಸದ ಹಿನ್ನೆಲೆಯಲ್ಲಿ ಸಂಘಟಕರು ಹಾಗೂ ಆಟಗಾರರ ನಡುವೆ ಮಾತಿಗೆ ಮಾತು ಬೆಳೆದು ಪರಸ್ಪರ ಕೈ ಮಿಲಾಸಿದ್ದಾರೆ ಎನ್ನಲಾಗಿದೆ.ಈ ವೇಳೆ ಸ್ಥಳದಲ್ಲಿದ್ದ ಕೆಲ ಬಿಜೆಪಿ ಮುಖಂಡರು ಸ್ಥಳಕ್ಕೆ ಧಾವಿಸಿ ಯುವಕರನ್ನು ಮನವೊಲಿಸಿದ್ದು, ಪರಿಸ್ಥಿತಿ ಶಾಂತಗೊಳಿಸಿದ್ದಾರೆ. ಬಳಿಕ ತಂಡಗಳು ಆಟದಲ್ಲಿ ಭಾಗವಹಿಸದೆ ಮರಳಿದ್ದು, ಸದ್ಯ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದರೊಂದಿಗೆ ಸಂಘಟಕರ ನಡೆಗೆ ಆಕ್ರೋಶ ವ್ಯಕ್ತವಾಗಿದೆ.

Leave A Reply

Your email address will not be published.