ಕೊರಗಜ್ಜನ ಈ ಕ್ಷೇತ್ರದ ನೆಲದಲ್ಲಿ ಮೂಡಿಬರುತ್ತಿದೆ ನಾಗರ ಹಾವಿನ ಚಿತ್ರ ; ಈ ಪವಾಡ ನೋಡಲು ದಂಡೋಪಾದಿಯಾಗಿ ಬರುತ್ತಿರುವ ಜನ ಸಾಗರ!

ಕರ್ನಾಟಕದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶ ಹೇಗೆ ನಾನಾ ದೇವರುಗಳ ತೀರ್ಥಕ್ಷೇತ್ರ ಗಳಿಗೆ ಹೆಸರುವಾಸಿಯಾಗಿದೆಯೋ, ಅದೇ ರೀತಿ ಅಲ್ಲಿನ ತುಳುನಾಡಿನ ಜನ ಅಷ್ಟೇ ಭೂತಾರಾಧನೆಯನ್ನೂ ನಂಬುತ್ತಾರೆ ಮತ್ತು ಬಹಳ ಶ್ರದ್ಧಾ ಭಕ್ತಿಯಿಂದ ಆರಾಧಿಸುತ್ತಾರೆ. ಹಾಗಾಗಿ ಅಲ್ಲಿನ ಬಹುತೇಕರ ಮನೆಯ ಅಂಗಳದಲ್ಲಿ ಇಂದಿಗೂ ಈ ರೀತಿಯ ಅನೇಕ ಸ್ಥಳೀಯ ದೈವಗಳ ಸಣ್ಣ ಸಣ್ಣ ಗುಡಿಗಳನ್ನು ಕಾಣಬಹುದಾಗಿದೆ. ಅಂತಹ ನಂಬಿಕೆಗಳಲ್ಲಿ ಬಹಳ ಪ್ರಸಿದ್ಧವಾಗಿರುವುದೇ ಕೊರಗಜ್ಜ ಎಂಬ ದೈವ. ಈ ಕೊರಗಜ್ಜನನ್ನು ಭಾರೀ ಶ್ರದ್ಧಾ, ಭಕ್ತಿಗಳಿಂದ ಪೂಜಿಸುವುದಲ್ಲದೇ, ದಕ್ಷಿಣ ಕನ್ನಡಾದ್ಯಂತ ಈ ಕೊರಗಜ್ಜನಿಗೆ ಹಲವಾರು ದೇವಾಲಯಗಳಿವೆ. ಈ ದೇವಾಲಯಗಳಿಗೆ ವಿವಿಧ ಕಡೆಯಿಂದ ಭಕ್ತರು ಆಗಮಿಸಿ, ತಮ್ಮ ಕಷ್ಟ ನಷ್ಟಗಳನ್ನು ಹೇಳಿಕೊಂಡರೆ, ಕೊರಗಜ್ಜನು ಅದನ್ನು ಪರಿಹರಿಸುತ್ತಾನೆ ಎಂಬ ನಂಬಿಕೆಗಳು ಇಲ್ಲಿವೆ ಮತ್ತು ಅದಕ್ಕೆ ಪುಷ್ಟಿ ನೀಡುವಂತೆ ಅನೇಕ ಉದಾಹರಣೆಗಳು ಇದೆ.

ಕೊರಗಜ್ಜನ ಪವಾಡಕ್ಕೆ ಯಾರೂ ಕೂಡಾ ಮಾರು ಹೋಗದೇ ಇರೋದಕ್ಕೆ ಸಾಧ್ಯವಿಲ್ಲ. ಅ‌ಂತಹ ಒಂದು ಕಾರ್ಣಿಕ ಹೊಂದಿರುವ ದೈವೀಶಕ್ತಿಯ ಆಗರವೇ ಈ ಕೊರಗಜ್ಜ. ಇಂತಿಪ್ಪ ಈ ದೈವದ ಒಂದು ಪವಾಡ ಈ ಊರಲ್ಲಿ ನಡೆದಿದೆ. ಅದನ್ನು ಕಂಡು ಜನ ದೈವದ ಮಹಿಮೆ ಎಂದು ಹೇಳುತ್ತಿದ್ದಾರೆ.

ಪವಾಡಗಳ ಮೂಲಕವೇ ಪ್ರಸಿದ್ಧಿಯನ್ನು ಪಡೆದಿರುವ ಹೆಬ್ರಿ, ಶಿವಪುರ ಕೊರಗಜ್ಜನ ಕ್ಷೇತ್ರದಲ್ಲಿ ಬುಧವಾರ ಬೆಳಿಗ್ಗೆ ಸನ್ನಿಧಾನದ ಸಮೀಪ ನೆಲದಲ್ಲಿ ಮೂಡಿಬರುತ್ತಿರುವ ನಾಗರ ಹಾವಿನ ಚಿತ್ರ ಅಚ್ಚರಿ ಮೂಡಿಸುತ್ತಿದೆ. ತೆಂಗಿನ ಮರದ ಸಮೀಪ ಕೃಷ್ಣ ಸರ್ಪದ ರೂಪವನ್ನು ಹೋಲುವ ನಾಗರ ಹಾವಿನ ಚಿತ್ರ ಹುತ್ತದ ಮಣ್ಣಿನ ಹಾಗೆ ಇರುವ ಮಣ್ಣಿನಿಂದ ಇರುವೆಗಳು ನಿರ್ಮಿಸುತ್ತಿರುವುದು ಎಲ್ಲರನ್ನೂ ಆಶ್ಚರ್ಯಗೊಳಿಸಿದೆ.

ಸುತ್ತಮುತ್ತ ಹುತ್ತದ ಮಣ್ಣು ಇಲ್ಲದೆ ಆ ಜಾಗದಲ್ಲಿ ಇರುವೆಗಳು ಮಣ್ಣನ್ನು ಎಲ್ಲಿಂದ ತರುತ್ತಿವೆ ಎಂಬ ಅಚ್ಚರಿ ಎದುರಾಗಿದ್ದು ನಾಗರ ಹಾವಿನ ಚಿತ್ರ ಮಣ್ಣಿನಿಂದ ಉಬ್ಬುತ್ತಲೆ ಇದ್ದು ಸಾರ್ವಜನಿಕರು ಈ ಅಚ್ಚರಿ ನೋಡಲು ಬರುತ್ತಿದ್ದಾರೆ.

ಕ್ಷೇತ್ರದ ಧರ್ಮದರ್ಶಿ ಪುನೀತ್ ಅವರು ಹೇಳುವಂತೆ, ಅವರಿಗೆ ಮುಂಜಾನೆ ಸುಮಾರು 4 ಗಂಟೆ ಹೊತ್ತಿಗೆ ನಾಗರ ಹಾವೊಂದು ಪರಿಸರದಲ್ಲಿ ಅತ್ತಿತ್ತ ಓಡಾಡುತ್ತಿರುವ ಕನಸೊಂದು ಬಿದ್ದಿದೆ. ಬೆಳಿಗ್ಗೆ ಎದ್ದ ಕೂಡಲೇ ಕೊರಗಜ್ಜನ ಸನ್ನಿಧಾನ ಸಮೀಪ ಖಾಲಿ ಜಾಗದಲ್ಲಿ ನಾಗರ ಹಾವಿನ ಚಿತ್ರ ಮೂಡಿರುವುದು ಕೊರಗಜ್ಜನ ಮಹಿಮೆ ಇರಬಹುದು, ಈ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಪುನೀತ್ ತಿಳಿಸಿದ್ದಾರೆ

Leave A Reply

Your email address will not be published.