ಹವಾಮಾನ ಸವಾಲಿನಲ್ಲಿ ಅಡಕೆ ಕೃಷಿ!! ಉದುರುತ್ತಿರುವ ಅಡಕೆ ನಳ್ಳಿಯ ಕುರಿತು ಇಲ್ಲಿದೆ ಮಾಹಿತಿ

ಇತ್ತೀಚಿನ ದಿನಗಳಲ್ಲಿ ವಾತಾವರಣದಲ್ಲಿ ಉಂಟಾಗುತ್ತಿರುವ ಹವಾಮಾನ ಬದಲಾವಣೆ ಅಡಕೆ ಕೃಷಿಕರಿಗೆ ಸವಲಾಗಿ ಪರಿಣಮಿಸಿದೆ. ಧಾರಾಕಾರ ಮಳೆ, ಅತಿಯಾದ ಉಷ್ಣತೆಯಿಂದ ಯಥೇಚ್ಛವಾಗಿ  ಅಡಿಕೆ ನಳ್ಳಿ ಬೀಳುತ್ತಿದೆ.

ವಾತಾವರಣದಲ್ಲಿ ಹವಾಮಾನ ಬದಲಾವಣೆಯಿಂದ ಅಡಕೆ ಎಳೆ ನಳ್ಳಿ ಬೀಳುವ ಸಮಸ್ಯೆಗೆ ಕಾರಣವಾಗಿರುವ ರಸ ಹೀರುವ ಕೀಟ ಸಂತಾನಾಭಿವೃದ್ಧಿ ಮಾಡಿಕೊಂಡಿದ್ದು ಮುಂದಿನ ಒಂದು ತಿಂಗಳಲ್ಲಿ ಈ ಕೀಟ ವ್ಯಾಪಕವಾಗಿ ಅಡಕೆಗೆ ಕಾಟ ನೀಡುವ ಆತಂಕ ಕೃಷಿಕರಲ್ಲಿ ಮನೆಮಾಡಿದೆ.

ಪ್ರತೀ ಬಾರಿ ಮೇ ತಿಂಗಳ ಆರಂಭದಲ್ಲಿ ರಸ ಹೀರುವ ಕೀಟಗಳು ಸಂತಾನಾಭಿವೃದ್ಧಿ ಮಾಡಿಕೊಂಡು ಎಳೆ ಅಡಕೆಯ ರಸ ಹೀರುತ್ತಿದ್ದವು. ಪರಿಣಾಮವಾಗಿ ಮೇ ಮಧ್ಯ ಭಾಗದಿಂದ ಎಳೆ ಅಡಕೆಗಳು ಬೀಳುತ್ತಿದ್ದವು. ಜೂನ್ ಮಧ್ಯ ಭಾಗದವರೆಗೆ ಕರಾವಳಿ, ಮಲೆನಾಡು ಭಾಗಗಳಲ್ಲಿ ಅಡಿಕೆ ನಳ್ಳಿ ಬೀಳುತ್ತಿದ್ದವು. ಆದರೆ ಈ ಬಾರಿ ವಾತಾವರಣದ ಅತಿಯಾದ ಉಷ್ಣತೆ ಹಾಗೂ ದಿಢೀರನೆ ಮಳೆ. ಇವೆರಡೂ ಕಾರಣಗಳಿಂದ ಈ ರಸ ಹೀರುವ ಕೀಟ ಪೆಂಟಟೊಮಿಡ್ ತಿಗಣೆ ಈಗಾಗಲೇ ಸಂತಾನಾಭಿವೃದ್ಧಿ ಹೆಚ್ಚಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಏಪ್ರಿಲ್ ತಿಂಗಳ ನಂತರ ಇದರ ಬಾಧೆ ಕಂಡುಬರುತ್ತದೆ.


ಏನಿದು ಪೆಂಟಟೊಮಿಡ್ ತಿಗಣೆ ?

ಇದೊಂದು ಬಗೆಯ ಒಂದು ರಸಹೀರುವ ಕೀಟ. ಇದಕ್ಕೆ, ಉದ್ದನೆಯ ಚೂಪಾದ ಬಾಯಿಯ ಅಂಗವಿದ್ದು, ಎಳೆ ಅಡಕೆಗೆ ಬಾಯಿ ತೂರಿಸಿ ರಸ ಹೀರುತ್ತವೆ, ಮುಖ್ಯವಾಗಿ ತೊಟ್ಟಿನ ಕೆಳಭಾಗದಲ್ಲಿ. ಎಳೆ ಅಡಿಕೆ ಸಿಪ್ಪೆಗೆ ತನ್ನ ಬಾಯಿಯನ್ನು ತೂರಿಸಿ ರಸ ಹೀರುವ  ಈ ಕೀಟ. ಒಂದು ತಿಗಣೆಯು ಒಂದು ದಿನಕ್ಕೆ ಒಂದು ಎಳೆ ಅಡಿಕೆಯಿಂದ ಮಾತ್ರ ರಸ ಹೀರಬಲ್ಲದು ಮತ್ತು ಇದರಿಂದ ಕಾಯಿಯ ಟರ್ಗರ್ ಪ್ರೆಷರ್ ಕಡಿಮೆಯಾಗಿ ಎಳೆ ಅಡಕೆಯು ೨-೩ ದಿನಗಳಲ್ಲಿ ಉದುರುತ್ತದೆ. ಬಿದ್ದ ಅಡಕೆಯ ಗಾತ್ರ ಸಣ್ಣದಿರುವ ಕಾರಣ ಯಾವುದಕ್ಕೂ ಉಪಯೋಗವಾಗುವುದಿಲ್ಲ. ಸಾಮಾನ್ಯವಾಗಿ ಮಾರ್ಚ್-ಆಗಸ್ಟ್ ತಿಂಗಳಲ್ಲಿ ಪೆಂಟಟೊಮಿಡ್ ತಿಗಣೆಯು ಹಾನಿ ಮಾಡುತ್ತದೆ. ಅದರಲ್ಲೂ, ಜೂನ್-ಜುಲೈ ತಿಂಗಳಲ್ಲಿ ಇದರ ಕಾಟ ಹೆಚ್ಚು ಕಂಡುಬರುತ್ತದೆ.

ಉದುರಿದ ಎಳೆಕಾಯಿಯ ತೊಟ್ಟಿನ ಕೆಳಭಾಗದಲ್ಲಿ ಸೂಜಿಯಿಂದ ಚುಚ್ಚಿದಂತಹ ಕಪ್ಪು ಚುಕ್ಕೆ ಈ ತಿಗಣೆಯ ಬಾಧೆಯನ್ನು ಸೂಚಿಸುವ ಲಕ್ಷಣ. ಇಂತಹ ಎಳೆಕಾಯಿಯನ್ನು ಕತ್ತರಿಸಿ ನೋಡಿದಾಗ ಕಪ್ಪು ಚುಕ್ಕೆಗೆ ಅನುಗುಣವಾಗಿ ಸಿಪ್ಪೆಯ ಒಳಬದಿಯಲ್ಲಿ ಮತ್ತು ಎಳೆಅಡಕೆಯಲ್ಲಿ ವರ್ಣ ಬದಲಾವಣೆ ಆಗಿರುವುದನ್ನು ಕಾಣಬಹುದುದಾಗಿದೆ.

ಈ ಬಾರಿ ಹಲವು ತೋಟಗಳಲ್ಲಿ ಈಗಾಗಲೇ ಪೆಂಟಟೊಮಿಡ್ ತಿಗಣೆ ಪಸರಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿದರೆ ಉತ್ತಮ. ಮಳೆ ಹೆಚ್ಚಾದ ಬಳಿಕ ಈ ಕೀಟದ ಬಾಧೆ ಕಡಿಮೆಯಾಗುತ್ತದೆ ಎನ್ನಲಾಗಿದೆ. ಇದರ ನಿವಾರಣೆಗೆ ಬಳಸುವ ಕೀಟನಾಶಕದ ಪ್ರಮಾಣ ಹೆಚ್ಚಾಗಬಾರದು ಮತ್ತು ಸಿಂಪಡಣೆ ಮಾಡುವಾಗ ಅತ್ಯಂತ ಜಾಗರೂಕರಾಗಿರಬೇಕು. ಎತ್ತರಕ್ಕೆ ಔಷಧಿ ಸಿಂಪಡಣೆ ಮಾಡುವುದರಿಂದ ನಮ್ಮ ದೇಹ ಮತ್ತು ನೀರಿನ ಮೂಲಗಳ ಮೇಲೆ ಬೀಳುವ ಸಾಧ್ಯತೆ ಹೆಚ್ಚು. ಹಾಗಾಗಿ, ಜಾಗರೂಕರಾಗಿರಬೇಕು ಎನ್ನುತ್ತಾರೆ ತಜ್ಞರು.

Leave A Reply

Your email address will not be published.