ಚಿನ್ನದಂಗಡಿಗೆ ನುಗ್ಗಿ 2.50 ಕೋಟಿ ರೂ.ಮೌಲ್ಯದ ಚಿನ್ನಾಭರಣ ದರೋಡೆ

ಬೆಂಗಳೂರು: ಜೆ.ಪಿ.ನಗರ 1ನೇ ಹಂತದಲ್ಲಿರುವ ಪ್ರಿಯದರ್ಶಿನಿ ಜ್ಯುವೆಲ್ಲರಿ ಅಂಗಡಿ ಗೋಡೆ ಕೊರೆದ ದುಷ್ಕರ್ಮಿಗಳು ಬರೋಬ್ಬರಿ 2.50 ಕೋಟಿ ರೂ. ಮೌಲ್ಯದ 5 ಕೆ.ಜಿ.ಚಿನ್ನಾಭರಣ ದೋಚಿರುವ ಘಟನೆ ನಡೆದಿದೆ.

ಜೆ.ಪಿ. ನಗರದ ಶಾಕಾಂಬರಿ ನಗರದ ನಿವಾಸಿ ರಾಜು ದೇವಾಡಿಗ ಕೊಟ್ಟ ದೂರಿನ ಆಧಾರದ ಮೇಲೆ ಜೆ.ಪಿ. ನಗರ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ದೆಹಲಿ ಮೂಲದ ಇಬ್ಬರು ಆರೋಪಿಗಳಿಗೆ ಶೋಧ ಕಾರ್ಯ ಆರಂಭಿಸಿದ್ದಾರೆ.

ರಾಜು ದೇವಾಡಿಗ 2010ರಲ್ಲಿ ಶಾಕಾಂಬರಿ ನಗರದಲ್ಲಿ ತಮ್ಮ ಸ್ವಂತ ಕಟ್ಟಡದ 2ನೇ ಮಹಡಿಯಲ್ಲಿ ಪ್ರಿಯದರ್ಶಿನಿ ಜ್ಯುವೆಲ್ಲರಿ ಆರಂಭಿಸಿದ್ದರು. ಪ್ರತಿದಿನ ರಾತ್ರಿ 9 ಗಂಟೆಯವರೆಗೆ ವ್ಯಾಪಾರ ಮಾಡಿಕೊಂಡು ಚಿನ್ನಾಭರಣಗಳನ್ನು ಲಾಕರ್‌ಗಳಲ್ಲಿ ಇಟ್ಟು ಅಂಗಡಿಗೆ ಬೀಗ ಹಾಕಿಕೊಂಡು ಹೋಗುತ್ತಿದ್ದರು.

ದೆಹಲಿ ಮೂಲದ ಇಬ್ಬರು ಒಂದು ತಿಂಗಳ ಹಿಂದೆ ಆರೋಪಿಗಳು ಇಲ್ಲಿ ಮನೆ ಬಾಡಿಗೆಗೆ ಪಡೆದಿದ್ದರು. ನಂತರ ಪ್ರಿಯದರ್ಶಿನಿ ಜ್ಯುವೆಲ್ಲರಿಗೆ ಕನ್ನ ಹಾಕಲು ಸಂಚು ರೂಪಿಸಿದ್ದರು. ಅದರಂತೆ ಕಳೆದ 2 ವಾರಗಳಿಂದ ಚಿನ್ನದಂಗಡಿಗೆ ಹೊಂದಿಕೊಂಡಿರುವ ಗೋಡೆಯನ್ನು ಮನೆಯೊಳಗಿನಿಂದ ಕಬ್ಬಿಣದ ಚೂಪಾದ ವಸ್ತು ಹಾಗೂ ಹಾರೆಯಿಂದ ಹಂತ ಹಂತವಾಗಿ ಕೊರೆಯಲು ಆರಂಭಿಸಿದ್ದರು.

ಏ.17ರಂದು ರಾಜು ಜ್ಯುವೆಲ್ಲರ್ಸ್‌ನಲ್ಲಿ ವ್ಯಾಪಾರ ಮುಗಿಸಿ ಚಿನ್ನಾಭರಣಗಳನ್ನು ಕಬ್ಬಿಣದ ಲಾಕರ್‌ನಲ್ಲಿ ಇಟ್ಟು ಹೋಗಿದ್ದರು. ಇತ್ತ ಗೋಡೆ ಕೊರೆದು ಜ್ಯುವೆಲ್ಲರಿಯೊಳಗೆ ನುಗ್ಗಿದ ಆರೋಪಿಗಳು, ಮೊದಲಿಗೆ ಅಲ್ಲಿದ್ದ ಸಿಸಿ ಕ್ಯಾಮೆರಾ ಸಂಪರ್ಕ ಕಡಿತಗೊಳಿಸಿದ್ದರು. ನಂತರ 2.50 ಕೋಟಿ ರೂ. ಮೌಲ್ಯದ 5 ಕೆ.ಜಿ.ಚಿನ್ನಾಭರಣವನ್ನು ದೋಚಿದ್ದಾರೆ ಎಂದು ದೂರು ನೀಡಿದ್ದಾರೆ.

Leave A Reply

Your email address will not be published.