ಮಂಗಳೂರು : ಮಹಿಳಾ‌ ಪ್ರಾಧ್ಯಾಪಕಿಯೋರ್ವರ ಬಗ್ಗೆ ಮಾನಹಾನಿ ಹಾಗೂ ಅಶ್ಲೀಲ ಪೋಸ್ಟರ್ ಹಂಚಿಕೆ ; ಪ್ರತಿಷ್ಠಿತ ಕಾಲೇಜಿನ ಸಂಚಾಲಕ, ಪ್ರಾಧ್ಯಾಪಕನ ದಸ್ತಗಿರಿ!!!

ಮಂಗಳೂರು: ಕಾಲೇಜಿನ ಪ್ರಾಧ್ಯಾಪಕಿಯೋರ್ವರ ಬಗ್ಗೆ ಮಾನಹಾನಿಕರವಾಗಿ ಪತ್ರ ಹಾಗೂ ಪೋಸ್ಟರ್ ಗಳನ್ನು ಬರೆದು ಹಂಚುತ್ತಿದ್ದ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಅವುಗಳನ್ನು ಅಂಟಿಸಿ ಕಿರುಕುಳ ನೀಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದ.ಕ. ಜಿಲ್ಲೆಯ ಪ್ರತಿಷ್ಠಿತ ಕಾಲೇಜಿನ ಸಂಚಾಲಕ ಹಾಗೂ ಇಬ್ಬರು ಪ್ರಾಧ್ಯಾಪಕರನ್ನು ಮಂಗಳೂರು ನಗರ ಪೊಲೀಸರು ದಸ್ತಗಿರಿ ಮಾಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ಲಾಯಿಲ ಮನೆ ನಿವಾಸಿ ಪ್ರಕಾಶ್ ಶೆಣೈ (44), ಬಂಟ್ವಾಳ ತಾಲೂಕು ಸಿದ್ದಕಟ್ಟೆ ನಿವಾಸಿ ಮೇಗಿನ ಉಳಿರೋಡಿ ನಿವಾಸಿ ಪ್ರದೀಪ್ ಪೂಜಾರಿ (36) ಹಾಗೂ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕು,ಸೀತಾನದಿ ನಡ್ಪಾಲು ಮನೆಯ ತಾರಾನಾಥ ಬಿ ಎಸ್ ಶೆಟ್ಟಿ (32) ಬಂಧಿತ ಆರೋಪಿಗಳು.

ಬಂಟ್ವಾಳದ ಪ್ರತಿಷ್ಠಿತ ಕಾಲೇಜ್ ವೊಂದರ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ನಡುವೆ ಪ್ರಾದ್ಯಾಪಕರ ನೇಮಕಾತಿ ಹಾಗೂ ಆಡಳಿತ ವಿಚಾರಕ್ಕೆ ಸಂಬಂಧಿಸಿದಂತೆ ಮನಸ್ತಾಪವೇ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದೆ.

ಸಂತ್ರಸ್ತ ಮಹಿಳಾ ಪ್ರಾದ್ಯಾಪಕಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು,
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಗಳಾದ ಪ್ರಕಾಶ್ ಶೆಣೈ, ಪ್ರದೀಪ್ ಪೂಜಾರಿ ಹಾಗೂ ತಾರಾನಾಥ ಬಿ ಎಸ್ ಶೆಟ್ಟಿ ರವರನ್ನು ಬಂಧಿಸಿದ್ದಾರೆ. ಆರೋಪಿಗಳು ಕಾಲೇಜಿನ ಸಂಚಾಲಕ ಹಾಗೂ ಪ್ರಾಧ್ಯಾಪಕರಾಗಿದ್ದು, ಅವರು ಅಕ್ರಮ ಕೂಟ ರಚಿಸಿ ಕೃತ್ಯ ಎಸಗಿದ್ದಾರೆ.

ಆರೋಪಿಗಳ ಪೈಕಿ ಪ್ರದೀಪ್ ಪೂಜಾರಿ ಎಂಬವರ ವಿರುದ್ಧ ಈ ಹಿಂದೆ 2019 ನೇ ಇಸವಿಯಲ್ಲಿ ಕಾಲೇಜ್ ಪ್ರಾಧ್ಯಾಪಕಿಯೊಬ್ಬರಿಗೆ ಮಾನಹಾನಿಗೆ ಯತ್ನಿಸಿದ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಅವರುಗಳ ಪತ್ತೆ ಕಾರ್ಯ ಮುಂದುವರಿದಿದೆ. ಆರೋಪಿಗಳಿಂದ 3 ಮೊಬೈಲ್ ಫೋನುಗಳನ್ನು ಸ್ವಾಧೀನಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave A Reply

Your email address will not be published.