ಅಂಬೇಡ್ಕರ್ ಕುರಿತು ಭಾಷಣ ಮಾಡಿದ ವಿದ್ಯಾರ್ಥಿಗೆ ಜೀವಬೆದರಿಕೆ ಹಾಕಿದ ಶಿಕ್ಷಕ!

ಡಾ.ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಭಾಷಣ ಮಾಡಿದ ವಿದ್ಯಾರ್ಥಿಗೆ ಶಿಕ್ಷಕರೊಬ್ಬರು ಜೀವ ಬೆದರಿಕೆ ಹಾಕಿದ ಘಟನೆಯೊಂದು ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನಲ್ಲಿ ಸಂಭವಿಸಿದೆ.

ಕುಶಾಲನಗರದ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಏ.14ರಂದು ಆಯೋಜಿಸಿದ್ದ ಅಂಬೇಡ್ಕರ್ ಅವರ 131ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಈ ಮಾಡಿದ ಭಾಷಕ್ಕೆ ವಿದ್ಯಾರ್ಥಿಗೆ ಬೆದರಿಕೆ ನೀಡಲಾಗಿದೆ.

ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ಅಭಿಲಾಷ್ ಅಂಬೇಡ್ಕರ್ ಗುಣಗಾನ ಮಾಡಿ ಭಾಷಣ ಮಾಡಿದ್ದ. ಈ ಬಗೆಗಿನ ಭಾಷಣ ವಿಡಿಯೋ ತುಣುಕನ್ನು ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಅಭಿಲಾಷ್‌ಗೆ ದೂರವಾಣಿ ಕರೆ ಮಾಡಿದ ಸೋಮವಾರಪೇಟೆಯ ಕಲ್ಕಂದೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಧರ್ಮರಾಜ್, ಭಾಷಣಕ್ಕೆ ಆಕ್ಷೇಪ ವ್ಯಕ್ತಪಡಿಸಿ ಜೀವ ಬೆದರಿಕೆ ಒಡ್ಡಿದ್ದರು ಎನ್ನಲಾಗಿದೆ. ಈ ಬಗ್ಗೆ ಮೊಬೈಲ್ ಸಂಭಾಷಣೆಯೊಂದು ವೈರಲ್ ಆಗಿತ್ತು.

ಪ್ರಕರಣದ ಬಗ್ಗೆ ಪೊಲೀಸರಿಗೆ ದೂರು ನೀಡಲು ಅಭಿಲಾಷ್ ಹಿಂದೇಟು ಹಾಕಿದ್ದರಿಂದ ವಿದ್ಯಾರ್ಥಿಯು ಭಯದಲ್ಲಿ ಇರಬೇಕಾಗಿದೆ ಎಂಬ ವರದಿ ಆಧಾರದ ಮೇಲೆ ಶಿಕ್ಷಕನನ್ನು ಕೆಲಸದಿಂದ ಅಮಾನತು ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ವೇದಮೂರ್ತಿ ಆದೇಶಿಸಿದ್ದಾರೆ.

Leave A Reply

Your email address will not be published.