ಮುಕ್ಕೂರು : ಉಚಿತ ಬೇಸಗೆ ಶಿಬಿರ ಚಿಣ್ಣರ ಸಂಭ್ರಮ-2022 ಸಮಾರೋಪ

ಮುಕ್ಕೂರು : ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಬೇಸಗೆ ಶಿಬಿರದಂತಹ ಚಟುವಟಿಕೆಗಳು ಪೂರಕ. ಈ ನಿಟ್ಟಿನಲ್ಲಿ ಮುಕ್ಕೂರಿನಲ್ಲಿ ಪ್ರಥಮ ಬಾರಿಗೆ ಹಮ್ಮಿಕೊಂಡಿರುವ ಉಚಿತ ಬೇಸಗೆ ಶಿಬಿರ ಕಾರ್ಯ ಶ್ಲಾಘನೀಯ ಎಂದು ಪ್ರಗತಿಪರ ಕೃಷಿಕ ನಾಗರಾಜ ಉಪಾಧ್ಯಾಯ ಕಜೆ ಹೇಳಿದರು.

ಮುಕ್ಕೂರು-ಕುಂಡಡ್ಕ ನೇಸರ ಯುವಕ ಮಂಡಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಮುಕ್ಕೂರು ಶಾಲಾ ಹಿತಚಿಂತನಾ ಸಮಿತಿ ಹಾಗೂ ಶಾಲಾ ಎಸ್‍ಡಿಎಂಸಿ ವತಿಯಿಂದ ಮುಕ್ಕೂರು ಶಾಲೆಯಲ್ಲಿ ಎ.11 ರಿಂದ 17 ರ ತನಕ ಹಮ್ಮಿಕೊಂಡ ಉಚಿತ ಬೇಸಗೆ ಶಿಬಿರ-ಚಿಣ್ಣರ ಸಂಭ್ರಮದ ಸಮಾರೋಪ ಸಮಾರಂಭ ರವಿವಾರ ನಡೆಯಿತು. ನೇಸರ ಯುವಕ ಮಂಡಲ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹತ್ತಾರು ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇದು ಸಂಘಟನೆಯ ಸಾಮಾಜಿಕ ಜವಬ್ದಾರಿಗೆ ಹಿಡಿದ ಕೈಗನ್ನಡಿ ಎಂದವರು ಪ್ರಶಂಸಿದರು.

ನಿವೃತ್ತ ಸೇನಾಧಿಕಾರಿ ಕ್ಯಾ.ಸುದಾನಂದ ಪೆರುವಾಜೆ ಮಾತನಾಡಿ, ಮಕ್ಕಳನ್ನು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯು ಹುರಿದುಂಬಿಸುವ ಅಗತ್ಯತೆಗೆ ಇದೆ. ರಾಷ್ಟ್ರ ಸೇವೆಗಾಗಿ ಸೈನಿಕನಾಗಿ ಸೇವೆ ಸಲ್ಲಿಸಲು ಮಕ್ಕಳಿಗೆ ಎಳವೆಯಿಂದಲೇ ಪ್ರೋತ್ಸಾಹ ನೀಡುವ ಅಗತ್ಯತೆ ಇದ್ದು ಬೇಸಗೆ ಶಿಬಿರದಂತಹ ಕಾರ್ಯಕ್ರಮ ಅದಕ್ಕೂಂದು ಪೂರಕ ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ನೇಸರ ಯುವಕ ಮಂಡಲದ ಗೌರವಾಧ್ಯಕ್ಷ ಹಾಗೂ ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಶಾಲಾ ಮಕ್ಕಳ ಪ್ರಗತಿಗೆ ಪೂರಕವಾಗಿರುವ ಎಲ್ಲ ಚಟುವಟಿಕೆಗಳಿಗೆ ಬೆಂಬಲ ನೀಡಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯ. ಆ ಕಾರ್ಯ ಬೇಸಗೆ ಶಿಬಿರದ ಮೂಲಕ ಅಭಿವ್ಯಕ್ತಗೊಂಡಿದೆ. ಇದಕ್ಕೆ ತನು-ಮನ-ಧನದ ನೆರವು ನೀಡಿದ ಊರ ಪರ ಊರ ಮಹನೀಯರಿಗೆ ಶಿಬಿರದ ಯಶಸ್ಸನ್ನು ಸಮರ್ಪಿಸುತ್ತಿದ್ದೇವೆ ಎಂದರು.

ಮುಕ್ಕೂರು ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಧಾಕರ ರೈ ಕುಂಜಾಡಿ ಮಾತನಾಡಿ, ಕಳೆದ ಒಂದು ವಾರದಿಂದ ಸಂಘಟನೆಯ ಪದಾಧುಕಾರಿಗಳು ಶಿಬಿರ ಯಶಸ್ಸಿಗೆ ದುಡಿದಿದ್ದಾರೆ. ಇದಕ್ಕೆ ಅನೇಕರು ಬೆಂಬಲ ನೀಡಿದ್ದಾರೆ. ಇದೊಂದು ಮಾದರಿ ಕಾರ್ಯ ಎಂದರು.

ಮುಕ್ಕೂರು-ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ, ಮುಕ್ಕೂರು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಯಂತ ಕುಂಡಡ್ಕ ಮಾತನಾಡಿ, ಇದೊಂದು ಪ್ರಥಮ ಅನುಭವ. ಇದಕ್ಕೆ ಸಿಕ್ಕ ಬೆಂಬಲ ಅತ್ಯಧ್ಭುತ. ಪ್ರತ್ಯಕ್ಷ ಹಾಗೂ ಪರೋಕ್ಷ ರೀತಿಯಲ್ಲಿ ನೆರವಾದ ಸರ್ವರಿಗೆ ಅಭಾರಿಯಾಗಿದ್ದೇವೆ ಎಂದರು.

ವೇದಿಕೆಯಲ್ಲಿ ಮುಕ್ಕೂರು-ಕುಂಡಡ್ಕ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷ ಯಶವಂತ ಜಾಲು ಉಪಸ್ಥಿತರಿದ್ದರು. ಶಿಬಿರಾರ್ಥಿಗಳಾದ ಪೆರುವಾಜೆ ಶಾಲಾ ವಿದ್ಯಾರ್ಥಿನಿ ತನ್ವಿ, ಚೆನ್ನಾವರ ಕಿ.ಪ್ರಾ.ಶಾಲಾ ವಿದ್ಯಾರ್ಥಿನಿ ಪ್ರೇಕ್ಷಿತಾ, ಬೆಂಗಳೂರು ಶಾಲಾ ವಿದ್ಯಾರ್ಥಿನಿ ತನ್ಮಯಿ, ಸವಣೂರು ವಿದ್ಯಾರಶ್ಮಿ ಶಾಲೆಯ ಗಗನ್ ದೀಪ್ ಅನಿಸಿಕೆ ವ್ಯಕ್ತಪಡಿಸಿದರು. ಬೇಸಗೆ ಶಿಬಿರದಲ್ಲಿ ಪಾಲ್ಗೊಂಡ 90 ಮಕ್ಕಳಿಗೆ ಪ್ರಶಂಸನಾ ಪತ್ರ ನೀಡಲಾಯಿತು.

ಸಭಾ ಕಾರ್ಯಕ್ರಮ ನಿರ್ವಹಿಸಿದ ಚಿಣ್ಣರು

ಇಡೀ ಸಭಾ ಕಾರ್ಯಕ್ರಮವನ್ನು ವಿವಿಧ ಶಾಲೆಗಳ ಶಿಬಿರಾರ್ಥಿ ಚಿಣ್ಣರು ನಿರ್ವಹಿಸಿದ್ದು ವಿಶೇಷವಾಗಿತ್ತು. ಪುಟಾಣಿಗಳೇ ಸ್ವಾಗತ, ಧನ್ಯವಾದ, ನಿರೂಪಣೆ ಮಾಡುವ ಮೂಲಕ ಸಭಿಕರ ಮನ ಗೆದ್ದರು. ಸಭೆಯ ಪ್ರಾರಂಭದಲ್ಲಿ ಕೆಲ ಹೊತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಬೆಳ್ಳಾರೆ ಕೆಪಿಎಸ್ ವಿದ್ಯಾರ್ಥಿ ದೀಪ್ತಿ ನೃತ್ಯ ಪ್ರದರ್ಶಿಸಿದರು. ಗುತ್ತಿಗಾರು ಶಾಲಾ ವಿದ್ಯಾರ್ಥಿನಿ ಯಜ್ಞ ಸ್ವಾಗತಿಸಿ, ಮುಕ್ಕೂರು ಶಾಲಾ ವಿದ್ಯಾರ್ಥಿ ಮಿಥುನ್ ಕುಂಡಡ್ಕ ವಂದಿಸಿದರು. ಮುಕ್ಕೂರು ಶಾಲಾ ವಿದ್ಯಾರ್ಥಿನಿ ಪುಣ್ಯ ಹಾಗೂ ಪಂಜ ಮೊರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿ ಆರುಷ್ ನಿರೂಪಿಸಿದರು.

Leave A Reply

Your email address will not be published.