ಗೂಗಲ್ ಮ್ಯಾಪ್ ನಲ್ಲಿ ಕಂಡುಬಂತು ಕೈ-ಕಾಲು, ತಲೆಯೇ ಇಲ್ಲದ ಆಕೃತಿ !!| ಫೋಟೋ ಕಂಡು ಬೆಚ್ಚಿಬಿದ್ದ ನೆಟ್ಟಿಗರು

ಪ್ರಪಂಚದಲ್ಲಿ ದಿನಕ್ಕೊಂದು ರೀತಿಯ ವಿಚಿತ್ರ ಘಟನೆಗಳ ದೃಶ್ಯಗಳು ವೈರಲ್ ಆಗುತ್ತಲೇ ಇರುತ್ತವೆ. ಕೆಲವು ಹಾಸ್ಯಾಸ್ಪದ ಘಟನೆಗಳಾದರೆ ಇನ್ನು ಕೆಲವು ಘಟನೆಗಳು ಎಂತಹವರನ್ನಾದರೂ ಬೆಚ್ಚಿಬೀಳಿಸುತ್ತದೆ. ಅಂತೆಯೇ ಇದೀಗ ಅಂತಹುದೇ ಫೋಟೋ ಒಂದು ವೈರಲ್ ಆಗಿದ್ದು, ಅದನ್ನು ನೋಡಿದರೆ ನೀವು ಬೆಚ್ಚಿಬೀಳೋದು ಗ್ಯಾರಂಟಿ!!

ಹೌದು. ನ್ಯೂಯಾರ್ಕ್​ನ ಬಹುಭದ್ರತೆಯ ಬೀದಿಯಲ್ಲಿ ಕೈ- ಕಾಲುಗಳಿಲ್ಲದ ಅಷ್ಟೇ ಏಕೆ ತಲೆಯೇ ಇಲ್ಲದ ಆಕೃತಿಯ ಚಿತ್ರಗಳು ವೈರಲ್ ಆಗಿವೆ. ಇದನ್ನು ನೋಡಿದ ಜನರೆಲ್ಲ ತಲೆಕೆಡಿಸಿಕೊಂಡಿದ್ದಾರೆ. ಗೂಗಲ್ ಮ್ಯಾಪ್​ಗಳಲ್ಲಿ ಕಾಣಿಸಿಕೊಂಡ ಈ ಚಿತ್ರಗಳು ಇದೀಗ ವೈರಲ್ ಆಗಿವೆ. ವಾಸ್ತವವಾಗಿ ಈ ಆಕೃತಿ ಕಾಣಿಸಿಕೊಂಡಿದ್ದು 2021ರ ಮೇ ಸಂದರ್ಭದಲ್ಲಿ. ಆದರೆ ಇದೀಗ ಈ ಫೋಟೋಗಳು ಜನರ ಗಮನವನ್ನು ಮತ್ತೆ ತನ್ನೆಡೆಗೆ ಸೆಳೆದಿದ್ದು, ವೈರಲ್ ಆಗಿದೆ.

ಗೂಗಲ್ ಮ್ಯಾಪ್ ಬಳಕೆದಾರರು ಸೂಟ್​ ಮಾದರಿಯ ದಿರಿಸೊಂದನ್ನು ಧರಿಸಿದ ಆಕೃತಿಯೊಂದು ಬೀದಿಗಳಲ್ಲಿ ಅಡ್ಡಾಡುವ ಚಿತ್ರಗಳನ್ನು ಗಮನಿಸಿದ್ದಾರೆ. ಅದು ಸಾಮಾನ್ಯ ಬೀದಿಯೂ ಅಲ್ಲ, ಬದಲಾಗಿ ನ್ಯೂಯಾರ್ಕ್​ನ ಬ್ರೂಕ್ಲಿನ್​ನ ನೇವಿ ಯಾರ್ಡ್​! ಅಲ್ಲಿ ಈ ಆಕೃತಿ ಕಾಣಿಸಿಕೊಂಡಿದ್ದು, ಬೀದಿಗಳಲ್ಲಿ ಓಡಾಡುವ, ಮರದ ಬಳಿ ನಿಂತಿರುವ ಚಿತ್ರಗಳು ವೈರಲ್ ಆಗಿವೆ.

ಈ ಚಿತ್ರ ಹೇಗೆ ಗೂಗಲ್ ಮ್ಯಾಪ್​ನಲ್ಲಿ ಕಾಣಿಸಿಕೊಂಡಿದೆ, ಅದಕ್ಕೆ ಕಾರಣವೇನೆಂಬುದು ಬಹುತೇಕರಿಗೆ ಅಚ್ಚರಿ ತಂದಿದೆ. ಮೊದಮೊದಲಿಗೆ ಇದನ್ನು ನೋಡಿದವರು ಬೆಚ್ಚಿಬಿದ್ದಿದ್ದಾರೆ. ನೇವಿ ಯಾರ್ಡ್ ಅತ್ಯಂತ ಸುರಕ್ಷಿತ ಪ್ರದೇಶ. ಕಟ್ಟಡಗಳಿಂದ ಆವೃತವಾಗಿರುವ ಇದರ ಸುತ್ತಮುತ್ತ ಭದ್ರತೆಯೂ ಹೆಚ್ಚಿದೆ. ಹೀಗಿರುವಾಗ ಇಂತಹ ಆಕೃತಿ ಕಾಣಿಸಿಕೊಂಡಿದ್ದು ಹೇಗೆ ಎನ್ನುವುದು ಎಲ್ಲರ ಪ್ರಶ್ನೆ.

ಈ ಫೋಟೋಗಳಲ್ಲಿ ಕಂಡುಬಂದಿರುವ ಆಕೃತಿ ಎಲ್ಲರಿಗೂ ಆಶ್ಚರ್ಯ ತಂದಿದೆ. ಇದಕ್ಕೆ ಕಾರಣ ಇನ್ನೂ ಬಹಿರಂಗವಾಗಿಲ್ಲ. ಆದರೆ ಈ ಹಿಂದೆ ಇಂಥದ್ದೇ ಪ್ರಕರಣಗಳನ್ನು ಗಮನಿಸಿಕೊಂಡು ಇದಕ್ಕೆ ಕಾರಣವನ್ನು ಹೇಳಬಹುದು. ಗೂಗಲ್ ಮ್ಯಾಪ್​ನ ಗ್ಲಿಚ್​ನ ಕಾರಣದಿಂದ ಹೀಗಾಗಿದೆ ಎನ್ನುವುದು ಒಂದು ಊಹೆ. ಈ ಹಿಂದೆಯೂ ತಲೆ, ಕಾಲುಗಳಿಲ್ಲದ ವ್ಯಕ್ತಿಯ ಫೋಟೋಗಳು, ಅಥವಾ ದೇಹದ ಭಾಗಗಳು ನಾಪತ್ತೆಯಾಗಿರುವ ಫೋಟೋಗಳು ವೈರಲ್ ಆಗಿದ್ದವು.

2021ರ ಮೇ ಸಂದರ್ಭದಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚಿದ್ದ ಕಾರಣ, ಸೂಟ್ ಮಾದರಿಯ ದಿರಿಸನ್ನು ಧರಿಸಿ ವ್ಯಕ್ತಿ ಓಡಾಡಿರಬಹುದು. ತಾಂತ್ರಿಕ ಸಮಸ್ಯೆ ಅರ್ಥಾತ್ ಗ್ಲಿಚ್ ಕಾರಣದಿಂದ ಆಕೃತಿಯ ಮಾದರಿಯಲ್ಲಿ ವ್ಯಕ್ತಿ ಗೋಚರವಾಗಿರುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ. ಆದರೆ ಈ ಬಗ್ಗೆ ಸ್ಪಷ್ಟೀಕರಣ ಇನ್ನಷ್ಟೇ ಬರಬೇಕಿದೆ ಎಂಬುದು ಮಾತ್ರ ಸತ್ಯ.

Leave A Reply

Your email address will not be published.