ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ಕುಮಾರಣ್ಣ !! | ಮುಂಬರುವ ಚುನಾವಣೆಯಲ್ಲಿ ಮುಸ್ಲಿಂ ಮತ ಓಲೈಕೆಗೆ ಆಗಿದೆ ಮಾಸ್ಟರ್ ಪ್ಲಾನ್

ಮುಂಬರುವ 2023 ರ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಭರ್ಜರಿ ತಯಾರಿ ಮಾಡಿಕೊಂಡಿದೆ. ರಾಜಕೀಯ ರಣತಂತ್ರಗಳನ್ನು ರೂಪಿಸಿರೋ ಎಚ್.ಡಿ. ಕುಮಾರಸ್ವಾಮಿ ಮುಸ್ಲಿಂ ಮತಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯಾಧ್ಯಕ್ಷರ ಬದಲಾವಣೆ ಸಿದ್ಧವಾಗಿದ್ದಾರೆ. ನಾಳೆ ಹೊಸ ರಾಜ್ಯದ್ಯಕ್ಷರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಹೌದು. ಪ್ರಸ್ತುತ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಎಚ್.ಡಿ.ಕುಮಾರಸ್ವಾಮಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಇತ್ತೀಚಿಗೆ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ಸಿ.ಎಂ.ಇಬ್ರಾಹಿಂರನ್ನು ಜೆಡಿಎಸ್ ವರಿಷ್ಠರು ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಲಿ ಅಧ್ಯಕ್ಷ ಹಾಗೂ ಶಾಸಕ ಎಚ್.ಕೆ.ಕುಮಾರಸ್ವಾಮಿ ತಮ್ಮ ಹುದ್ದೆಗೆ ರಾಜೀನಾಮೆ‌ ನೀಡಿದ್ದಾರೆ.

ಈ ಬಗ್ಗೆ ಸ್ವತಃ ಮಾತನಾಡಿದ ಹಾಲಿ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಏ.17 ರಂದು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದೇನೆ. ಜೆಡಿಎಸ್‌ನ ನೂತನ ರಾಜ್ಯಾಧ್ಯಕ್ಷರಾಗಿ ಸಿ.ಎಂ.ಇಬ್ರಾಹಿಂ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈಗಾಗಲೇ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿದ್ದೇನೆ. ಪಕ್ಷದ ಸಂಘಟನೆ ದೃಷ್ಟಿಯಿಂದ ಜೆಡಿಎಸ್ ರಾಜ್ಯಾಧ್ಯಕರ ಬದಲಾವಣೆ ಮಾಡಲಾಗುತ್ತಿದೆ ಎಂದರು.

ಇದರ ಹಿಂದೆ ಎಚ್ಡಿಕೆ ರಾಜಕೀಯ ತಂತ್ರ ಅಡಗಿದ್ದು, ಮುಂದಿನ ಚುನಾವಣೆಯಲ್ಲಿ ಮುಸ್ಲಿಂ ರ ಮತವನ್ನು ಸೆಳೆಯುವ ಉದ್ದೇಶದಿಂದ ಎಚ್ಡಿಕೆ ಸಿ.ಎಂ.ಇಬ್ರಾಹಿಂಗೆ ರಾಜ್ಯಾಧ್ಯಕ್ಷ ಪಟ್ಟ ನೀಡಿದ್ದಾರೆ ಎನ್ನಲಾಗುತ್ತಿದೆ. ಕಳೆದ ಕೆಲ ತಿಂಗಳಿನಿಂದ ರಾಜ್ಯದಲ್ಲಿ ಹಿಜಾಬ್ ವಿವಾದ ತಾರಕಕ್ಕೇರಿದೆ. ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ಹಕ್ಕಿಗಾಗಿ ಹೈಕೋರ್ಟ್, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೂ ವಿದ್ಯಾರ್ಥಿನಿಯರಿಗೆ ನ್ಯಾಯ ಸಿಕ್ಕಿಲ್ಲ. ಇದಾದ ಬಳಿಕ ರಾಜ್ಯದಲ್ಲಿ ಹಲಾಲ ಕಟ್ ಮಾಂಸದ ವಿವಾದ ತಾರಕಕ್ಕೇರಿದೆ. ಇದರ ಬೆನ್ನಲ್ಲೇ ಮುಜರಾಯಿ ಇಲಾಖೆಯ ದೇವಾಲಯ ಹಾಗೂ ಜಾತ್ರೆಯಲ್ಲಿ ಮುಸ್ಲಿಂ ಸಮುದಾಯದ ವ್ಯಾಪಾರಸ್ಥರಿಗೆ ಅವಕಾಶ ನೀಡಬಾರದೆಂಬ ಅಗ್ರಹ ಹಾಗೂ ಹೋರಾಟ ಆರಂಭಗೊಂಡಿದೆ. ಇಷ್ಟೆಲ್ಲ ಮುಸ್ಲಿಂ ವಿರೋಧಿ ಬೆಳವಣಿಗೆಗಳು ರಾಜ್ಯದಲ್ಲಿ ನಡೆಯುತ್ತಿದ್ದರೂ, ಸದಾ ಕಾಲ‌ ಮುಸ್ಲಿಂ ಪರ ಎಂದು ಹೇಳಿಕೊಳ್ಳುತ್ತಿದ್ದ ಕಾಂಗ್ರೆಸ್ ಮೌನವಾಗಿ ಉಳಿದಿದೆ.

ಹಿಜಾಬ್, ಹಲಾಲ್ ಸೇರಿದಂತೆ ಯಾವುದೇ ಘಟನೆಗಳ ಬಗ್ಗೆಯೂ ಒಂದು ಸ್ಪಷ್ಟ ಸ್ಟ್ಯಾಂಡ್ ತೆಗೆದುಕೊಳ್ಳುವಲ್ಲಿ ಕೈನಾಯಕರು ಎಡವಿದರು. ಹೀಗಾಗಿ ಸಿ.ಎ.ಇಬ್ರಾಹಿಂ ಸೇರಿದಂತೆ ಹಲವು ಮುಸ್ಲಿಂ ನಾಯಕರು ಕಾಂಗ್ರೆಸ್ ಮೇಲೆ ಮುನಿಸಿಕೊಂಡಿದ್ದಾರೆ. ಮಾತ್ರವಲ್ಲ ಅಲ್ಲಲ್ಲಿ ಕಾಂಗ್ರೆಸ್ ಬೆಂಬಲಿಸಬಾರದೆಂಬ ಮಾತುಗಳು ಮುಸ್ಲಿಂ ನಾಯಕರಿಂದ ಕೇಳಿ ಬರಲಾರಂಭಿಸಿದೆ. ಹೀಗಾಗಿ ಕಾಂಗ್ರೆಸ್ ಮೇಲೆ ಮುನಿಸಿಕೊಂಡ ಮುಸ್ಲಿಂರನ್ನು ಜೆಡಿಎಸ್ ನತ್ತ ಸೆಳೆಯಲು ಕುಮಾರಸ್ವಾಮಿ ಇಬ್ರಾಹಿಂರನ್ನು ರಾಜ್ಯಾಧ್ಯಕ್ಷರ ಪಟ್ಟಕ್ಕೆ ಕೂರಿಸುತ್ತಿದ್ದಾರೆ.

ಅದರಲ್ಲೂ ಇಬ್ರಾಹಿಂ ಕಾಂಗ್ರೆಸ್ ನಲ್ಲಿ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಮುನಿಸಿಕೊಂಡು ಹೊರಬಂದವರು. ಅಲ್ಲದೇ ಕಾಂಗ್ರೆಸ್ ನಲ್ಲಿ ಮುಸ್ಲಿಂಮರಿಗೆ ಸ್ಥಾನಮಾನ ಇಲ್ಲ. ದುಡಿಯಲು ಮಾತ್ರ ಮುಸ್ಲಿಮರು ಬೇಕು ಎಂದು ಆರೋಪಿಸಿದ್ದರು. ಇದೇ ಅಭಿಪ್ರಾಯವನ್ನು ಬಳಸಿಕೊಂಡು ಜೆಡಿಎಸ್ ನಿಂದ ಇಬ್ರಾಹಿಂಗೆ ಉನ್ನತ ಸ್ಥಾನಮಾನ ನೀಡಲಾಗಿದೆ. ಅವರ ನೇತೃತ್ವದಲ್ಲೇ ಚುನಾವಣೆಗೆ ಹೋಗುತ್ತೇವೆ ಎಂದು ಮುಸ್ಲಿಮರನ್ನು ಒಲೈಸಲು ಕುಮಾರಸ್ವಾಮಿ ಮಾಸ್ಟರ್ ಪ್ಲ್ಯಾನ್ ಸಿದ್ಧ ಪಡಿಸಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬಂದಿದೆ.

Leave A Reply

Your email address will not be published.