ಏಕಕಾಲಕ್ಕೆ ಎರಡು ಅಕ್ರಮ ದನ ಸಾಗಾಟ ಪ್ರಕರಣಗಳು ಪತ್ತೆ!! ಹೆಬ್ರಿ ಪೊಲೀಸ್ ಹಾಗೂ ಬ್ರಹ್ಮಾವರ ಹಿಂಜಾವೇ ಕಾರ್ಯಕರ್ತರ ಭರ್ಜರಿ ಕಾರ್ಯಾಚರಣೆ

ಕಾರ್ಕಳ ಭಾಗದಲ್ಲಿ ಸಕ್ರಿಯವಾಗಿದ್ದ ಗೋಕಳ್ಳರ ತಂಡವನ್ನು ಪೊಲೀಸರು ಬೆನ್ನಟ್ಟಿ ಗೋವುಗಳನ್ನು ವಶಕ್ಕೆ ಪಡೆದಿರುವ ಘಟನೆಯೊಂದು ನಡೆದಿದೆ. ಹೆಬ್ರಿ ಇನ್ಸ್ ಪೆಕ್ಟರ್ ಸುದರ್ಶನ್ ದೊಡ್ಡಮನೆ ನೇತೃತ್ವದಲ್ಲಿ ಗೋಕಳ್ಳರ ವಿರುದ್ಧ ಈ ಕಾರ್ಯಾಚರಣೆ ನಡೆದಿದೆ. ಗೋ ಸಾಗಾಟ ಮಾಡುತ್ತಿದ್ದ ವಾಹನ ಸೇರಿ 14 ಗೋವುಗಳನ್ನು ವಶಕ್ಕೆ ಪಡೆಯಲಾಗಿದೆ.

ಹೆಬ್ರಿ ಬ್ಯಾಣ ಪರಿಸರದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಹೆಬ್ರಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ಗೋ ಸಾಗಾಟಗಾರರನ್ನು ಬೆನ್ನಟ್ಟುವಾಗ, ಗೋಕಳ್ಳರ ವಾಹನ ಅಂಗಡಿಯೊಂದಕ್ಕೆ ಡಿಕ್ಕಿ ಹೊಡೆದಿದೆ.

ಈ ಸಂದರ್ಭ ವಾಹನವನ್ನು ಸ್ಥಳದಲ್ಲೇ ಬಿಟ್ಟು ಗೋಕಳ್ಳರು ಪರಾರಿಯಾಗಿದ್ದಾರೆ. ಗೋಕಳ್ಳರು ಹಿಂಸಾತ್ಮಕ ರೀತಿಯಲ್ಲಿ ಕೈಕಾಲು ಕಟ್ಟಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದರು .ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ, ಬ್ರಹ್ಮಾವರ ತಾಲೂಕಿನ ಹೇರೂರು ಕಾಡೋಳಿ ಕ್ರಾಸ್ ಸಮೀಪ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿ ಏಳು ಗೋವುಗಳನ್ನು ವಶಪಡಿಸಿಕೊಂಡಿದ್ದು, ಗೋಸಾಗಾಟಗಾರರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಥಾಮಸ್ ಡಿ ಸೋಜ ಎನ್ನುವವನಿಗೆ ಅಕ್ರಮವಾಗಿ ಗೋವುಗಳನ್ನು ಸರಬರಾಜು ಮಾಡುತ್ತಿದ್ದ ಸಾಲಿಗ್ರಾಮ ಕಾರ್ಕಡ ಪಡುಬೈಲ್‌ನ ಕೃಷ್ಣ ಪೂಜಾರಿ ಹಾಗೂ ಕಾವಡಿಯ ನಾಗೇಶ ಮರಕಾಲನನ್ನು ಬ್ರಹ್ಮಾವರ ತಾಲೂಕು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಹಿಡಿದು ಬ್ರಹ್ಮಾವರ ಪೋಲಿಸರಿಗೆ ಒಪ್ಪಿಸಿದ್ದಾರೆ.

ಈ ಸಂಬಂಧ ಏಳು ಗೋವುಗಳನ್ನು ರಕ್ಷಿಸಲಾಗಿದ್ದು, ಬ್ರಹ್ಮಾವರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave A Reply

Your email address will not be published.