ಅಪಾರ್ಟ್ಮೆಂಟ್ ವೊಂದರಲ್ಲಿ ಅವಿವಾಹಿತ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ!

ಅಪಾರ್ಟ್ ಮೆಂಟ್ ನ ಕೊಣೆಯೊಂದರಲ್ಲಿ ಅವಿವಾಹಿತ ಮಹಿಳೆಯ ಶವವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪರಿಚಿತರಿಂದಲೇ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ವರ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಕಾಚಮಾರನಹಳ್ಳಿಯ ಅಪಾರ್ಟ್‌ಮೆಂಟ್ ನಲ್ಲಿ ನಡೆದಿದೆ.

ಮಲ್ಲೇಶ್ವರಂ ನಿವಾಸಿ ಸುನೀತಾ ರಾಮಪ್ರಸಾದ್ (45) ಕೊಲೆಯಾದ ಮಹಿಳೆ. ತಡವಾಗಿ ಈ ಘಟನೆ ಬೆಳಕಿಗೆ ಬಂದಿದೆ. ಎ.1 ರಂದು ಈ ಕೊಲೆ ನಡೆದಿದೆ. ಈ ಕೊಲೆಯ ಆರೋಪದಡಿ ಗೋವಿಂದಪುರ ನಿವಾಸಿಗಳಾದ ಇಮ್ರಾನ್ ಮತ್ತು ವೆಂಕಟೇಶ್ ಎಂಬವರನ್ನು ಪೊಲೀಸರು ಬಂಧಿಸಿದ್ದು. ಮತ್ತೊಬ್ಬ ಪ್ರಮುಖ ಆರೋಪಿ ಕಿರಣ್ ತಲೆ ಮರೆಸಿಕೊಂಡಿದ್ದಾನೆ.

ಆರೋಪಿಗಳ ಪೈಕಿ ಕಿರಣ್ ಕೆಲಸಕ್ಕೆಂದು ಎಲ್ಲಿಗೂ ಹೋಗುವುದಿಲ್ಲ. ಎಲ್ಲಾ ಸಮಯ ಮನೆಯಲ್ಲಿಯೇ ಇರುತ್ತಿದ್ದ. ಈತನ ಪತ್ನಿ ಶಿಕ್ಷಕಿ. ವರ್ತೂರಿನ ಕಾಚಮಾರನಹಳ್ಳಿಯ ಅಪಾರ್ಟ್‌ಮೆಂಟ್‌ವೊಂದರ ಒಂದನೇ ಮಹಡಿಯಲ್ಲಿ ಈ ದಂಪತಿಯ ವಾಸ. ಇನ್ನೊರ್ವ ಆರೋಪಿ ಇಮ್ರಾನ್ ಆಟೋ ಚಾಲಕನಾಗಿದ್ದು, ವೆಂಕಟೇಶ್ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ. ಈ ಮೂವರು ಪರಿಚಯಸ್ಥರು ಎಂದು ಪೊಲೀಸರು ಹೇಳಿದ್ದಾರೆ.

ಸುನೀತಾ ರಾಮ್‌ಪ್ರಸಾದ್ ಅವಿವಾಹಿತೆಯಾಗಿದ್ದಾರೆ. ಅವರ ಸಹೋದರರು ವಿದೇಶದಲ್ಲಿದ್ದು, ತಂದೆ ಮೈಸೂರಿನಲ್ಲಿದ್ದಾರೆ. ಹೀಗಾಗಿ ಈಕೆ ಮಲ್ಲೇಶ್ವರಂನಲ್ಲಿ ಸಂಬಂಧಿ ಜೊತೆ ವಾಸವಾಗಿದ್ದರು. ಸುನೀತಾ ಜೀವನ ನಿರ್ವಹಣೆಗೆ ಫೈನಾನ್ಸ್ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗಷ್ಟೇ ಸುನೀತಾಗೆ ಕಿರಣ್ ಪರಿಚಯವಾಗಿದೆ. ಅಲ್ಲದೆ ಸುನೀತಾಗೆ ನಡೆಯಲು ಕಷ್ಟವಾಗುತ್ತಿತ್ತು. ಹಾಗಾಗಿ ಎಲ್ಲಿಗಾದರೂ ಹೋಗಬೇಕಾದರೆ ಕಿರಣ್, ಇಮ್ರಾನ್ ಹಾಗೂ ವೆಂಕಟೇಶ್ ಸಹಾಯ ಪಡೆದುಕೊಳ್ಳುತ್ತಿದ್ದರು ಎಂದು ಹೇಳಲಾಗುತ್ತಿದೆ.

ಸುನೀತಾ ಸಾವಿನ ಎರಡು ವಾರಗಳ ಹಿಂದೆ ಕಿರಣ್ ತಾನು ವಾಸವಾಗಿರುವ ಅಪಾರ್ಟ್‌ಮೆಂಟ್‌ ಮಾಲೀಕರಿಗೆ ನಾಲ್ಕನೇ ಮಹಡಿಯಲ್ಲಿ ಖಾಲಿ ಇರುವ ಮನೆಗೆ ತಮ್ಮ ಪರಿಚಯಸ್ಥರೊಬ್ಬರು ಬಾಡಿಗೆಗೆ ಬರುತ್ತಾರೆ ಎಂದು ಹೇಳಿದ್ದು, ಅಪಾರ್ಟ್‌ಮೆಂಟ್ ನ ಕೀ ಪಡೆದುಕೊಂಡಿದ್ದ. ಎ.1ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಸುನೀತಾರನ್ನು ಈ ಮೂವರು ಆರೋಪಿಗಳು ನಾಲ್ಕನೇ ಮಹಡಿಯ ಮನೆಗೆ ಕರೆದೊಯ್ದಿದ್ದಾರೆ ಎಂಬ ಮಾಹಿತಿಯನ್ನು ಬಂಧಿತ ಆರೋಪಿಗಳು ಪೊಲೀಸರ ಮುಂದೆ ಬಾಯ್ದಿಟ್ಟಿದ್ದಾರೆ.

ತಡರಾತ್ರಿ 1.30ರ ಸುಮಾರಿಗೆ ಈ ಮೂವರು ಮನೆಯಿಂದ ಹೊರಗಡೆ ಬಂದಿದ್ದು, ಈ ನಾಲ್ವರ ನಡುವೆ ಜಗಳ ಆಗಿದೆ. ಅದು ವಿಕೋಪಕ್ಕೆ ಹೋದಾಗ ಮಹಿಳೆಯ ಬಾಯಿ ಮತ್ತು ಮೂಗಿಗೆ ಬಟ್ಟೆ ತುರುಕಿ, ಉಸಿರುಗಟ್ಟಿಸಿ ಕೊಲೆ ಮಾಡಿ ದ್ದಾರೆ ಎನ್ನಲಾಗಿದೆ. ಬಳಿಕ ಮೂವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಹಣದ ಉದ್ದೇಶ ಅಥವಾ ಕುಡಿತದ ಮತ್ತಿನಿಂದ ಅಥವಾ ಇನ್ಯಾವುದೋ ಕಾರಣಕ್ಕೂ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಆಕೆಯನ್ನು ಹೊಸ ಅಪಾರ್ಟ್ ಮೆಂಟ್ ಗೆ ಕರೆ ತಂದ ದಿನವೇ ಹತ್ಯೆ ನಡೆದಿರುವುದರಿಂದ ಇದೊಂದು ಪೂರ್ವಯೋಜಿತ ಕೃತ್ಯ ಎಂಬ ಅನುಮಾನ ಪೊಲೀಸರಿಗಿದ್ದು ಆ ನೆಲೆಯಲ್ಲಿಯೂ ತನಿಖೆ ನಡೆಸುತ್ತಿದ್ದಾರೆ.

ಎ.5ರಂದು ಅಕ್ಕ ಪಕ್ಕದ ನಿವಾಸಿಗಳಿಗೆ ಕೊಳೆತ ವಾಸನೆ ಬರಲು ಪ್ರಾರಂಭಿಸಿದ ಕಾರಣ ಅಪಾರ್ಟ್‌ಮೆಂಟ್‌ ಮಾಲೀಕರಿಗೆ ದೂರು ನೀಡಿದ್ದರು. ಅದರೆ ಮನೆ ಕೀ ಕಿರಣ್ ಬಳಿ ಇದ್ದುದರಿಂದ ಅಲ್ಲಿ ಹೋಗಿ ವಿಚಾರಿಸಿದಾಗ ಕಿರಣ್ ಇರಲಿಲ್ಲ. ನಂತರ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಸ್ಥಳಕ್ಕೆ ಬಂದ ವರ್ತೂರು ಠಾಣೆ ಪೊಲೀಸರು ಬಾಗಿಲು ಮುರಿದು ಒಳ ಹೋಗಿ ನೋಡಿದಾಗ ಕೋಣೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಸುನೀತಾ ಶವ ಪತ್ತೆಯಾಗಿತ್ತು.

ಸುನೀತಾ ಸಂಬಂಧಿಕರಿಗೆ ಪೊಲೀಸರು ಮಾಹಿತಿ ಮುಟ್ಟಿಸಿ, ಬಳಿಕ ಪ್ರಕರಣ ದಾಖಲಿಸಿಕೊಂಡು ಸುನೀತಾರ ಮೊಬೈಲ್ ನೆಟ್‌ವರ್ಕ್ ಮತ್ತು ಮೊಬೈಲ್ ಸಿಡಿಆರ್ ಹಾಗೂ ಅಪಾರ್ಟ್‌ಮೆಂಟ್‌ನ ಸಿಸಿ ಕ್ಯಾಮರಾ ಆಧರಿಸಿ ವೆಂಕಟೇಶ್ ಮತ್ತು ಇಮ್ರಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಕಿರಣ್ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ.

ವ್ಯವಹಾರ ಕುರಿತು ಮೀಟಿಂಗ್ ಇದೆ ಎಂದು ಮನೆಯಿಂದ ಮಾ.31ರಂದು ಸಂಜೆ ಹೊರ ಹೋದ ಸುನೀತಾ ಏ.1ರ ರಾತ್ರಿ 10 ಗಂಟೆಯಾದರು ಮನೆಗೆ ಬಂದಿರಲಿಲ್ಲ. ಹೀಗಾಗಿ ಕುಟುಂಬ ಸಂಬಂಧಿಕರು ಮತ್ತು ಸ್ನೇಹಿತರು ಸೇರಿ ಎಲ್ಲಾ ಕಡೆ ಹುಡುಕಾಡಿದ್ದಾರೆ. ಎಲ್ಲಿಯೂ ಸಿಕ್ಕಿರಲಿಲ್ಲ. ಈ ಸಂಬಂಧ ಏ.4ರಂದು ಸುನೀತಾ ಚಿಕ್ಕಪ್ಪ ಬಿ.ಎನ್. ಬಾಲಾಜಿ ಎಂಬುವರು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಸುನೀತಾ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ಏಪ್ರಿಲ್ 5 ಕ್ಕೆ ಸುನೀತಾಳ ಮೃತದೇಹ ಪತ್ತೆಯಾಗಿತ್ತು. ವಿಷಯ ಗೊತ್ತಾದ ನಂತರ ಪೋಷಕರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

Leave A Reply

Your email address will not be published.