ಓದಿ ಮುಗಿಸಿದ ಪಠ್ಯ ಪುಸ್ತಕಗಳನ್ನು ಗುಜರಿಗೆ ಹಾಕುವ ಅಭ್ಯಾಸ ಹೊಂದಿದ್ದೀರಾ !?? |ಹಾಗಿದ್ರೆ ಇಂದೇ ಬದಲಾಗಿ, ನಿಮ್ಮ ಮೂಲಕ ಓದೋರಿಗೆ ಈ ರೀತಿ ಸಹಾಯ ಮಾಡಿ

ಪರೀಕ್ಷೆಗಳು ನಡೆದು ಶೈಕ್ಷಣಿಕ ವರ್ಷ ಈಗಾಗಲೇ ಮುಕ್ತಾಯಗೊಂಡಿದೆ. ಕಾಲೇಜು ವಿದ್ಯಾರ್ಥಿಗಳಿಗಷ್ಟೇ ಪರೀಕ್ಷೆ, ತರಗತಿಗಳು ನಡೆಯುತ್ತಿದೆ. ಈ ನಡುವೆ ಹಲವು ವಿದ್ಯಾರ್ಥಿಗಳಿಗೆ ತಮ್ಮ ಹಳೆಯ ಪಠ್ಯಪುಸ್ತಕಗಳನ್ನು ಏನು ಮಾಡುವುದು ಎಂಬ ಚಿಂತೆ ಕಾಡುತ್ತಿರಬಹುದು. ಹೆಚ್ಚಿನವರು ಗುಜರಿಗೆ ಹಾಕಿ ಹಣ ಪಡೆಯುತ್ತಾರೆ. ಕೆಲವರು ಅಗತ್ಯವಿರುವವರಿಗೆ ನೀಡುತ್ತಾರೆ. ಇದಾಗಿಯೂ ಪುಸ್ತಕಗಳು ಉಳಿದರೆ ಅವುಗಳನ್ನು ಮಾರಾಟ ಮಾಡಲು ವೇದಿಕೆಯೊಂದು ಸಿದ್ಧವಾಗಿದೆ.

ಹೌದು. ಹಲವು ಪೋಷಕರು ಹಾಗೂ ಸಂಘಟನೆಗಳು ಪಠ್ಯಪುಸ್ತಕಗಳನ್ನು ಹಂಚಿಕೊಳ್ಳುವ ಮಾರ್ಗ ಕಂಡುಕೊಂಡಿದ್ದಾರೆ. ಇಂಥಹದ್ದೇ ಒಂದು ಪ್ರಯತ್ನದ ಭಾಗವಾಗಿ ಆನ್ ಲೈನ್ ವೇದಿಕೆಯೊಂದು ಸೃಷ್ಟಿಯಾಗಿದ್ದು, 2 ವರ್ಷಗಳಿಂದ ಸಾಂಕ್ರಾಮಿಕದ ಕಾರಣದಿಂದಾಗಿ ಸ್ಥಗಿತಗೊಂಡಿತ್ತು. ಈಗ ಅದು ಪುನಾರಂಭಗೊಂಡಿದೆ.

sumrux.com ನ ತಂಡ 200 ಸದಸ್ಯರನ್ನು ಹೊಂದಿದ್ದು, ವೆಬ್ ಸೈಟ್ ನಲ್ಲಿ ಪಠ್ಯಪುಸ್ತಕಗಳ ಫೋಟೋಗಳನ್ನು ಹಾಕುತ್ತಾರೆ. ಇಲ್ಲಿ ಪೋಷಕರು ತಮ್ಮ ಮಕ್ಕಳ ಬಳಿ ಇರುವ ಪಠ್ಯಪುಸ್ತಕಗಳನ್ನು ಮಾರಾಟ ಮಾಡುವುದಕ್ಕೆ ಅಥವಾ ವಿನಿಮಯ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ.

ವೆಬ್ ಸೈಟ್ ನ್ನು ಪ್ರಾರಂಭಿಸಿದ ಕೃಪಾ ಡಿಎಸ್ ಮಾತನಾಡಿ, ಪ್ರಕಟಗೊಂಡ ವರ್ಷ, ಪಬ್ಲಿಷರ್ ಗಳು ಸೇರಿದಂತೆ ಅಗತ್ಯವಿರುವ ವಿವರಗಳನ್ನು ನೀಡುವ ಮೂಲಕ ಪೋಷಕರು ಈ ವೆಬ್ ಸೈಟ್ ನಲ್ಲಿ ಪೋಸ್ಟ್ ಮಾಡಬಹುದಾಗಿದೆ. ತಮ್ಮ ಬಳಿ ಇರುವ ಪುಸ್ತಕಗಳನ್ನು ಬೇರೆಯವರಿಗೆ ಮಾರಲು ಅಥವಾ ವಿನಿಮಯ ಮಾಡಿಕೊಳ್ಳಲು ಪುಸ್ತಕಗಳ ಫೋಟೋಗಳನ್ನು ವೆಬ್ ಸೈಟ್ ನಲ್ಲಿ ಹಾಕಬಹುದಾಗಿದೆ ಎಂದು ವಿವರಿಸಿದ್ದಾರೆ.

ಹಳೆಯ ಪಠ್ಯಪುಸ್ತಕಗಳನ್ನು ವಿಲೇವಾರಿ ಮಾಡುವುದಷ್ಟೇ ಈ ವೆಬ್ ಸೈಟ್ ನ ಉದ್ದೇಶವಲ್ಲ. ಆರ್ ಟಿಇ ಅಡಿಯಲ್ಲಿ ಯಾರು ವಿದ್ಯಾಭ್ಯಾಸ ಮುಂದುವರೆಸುತ್ತಿದ್ದಾರೋ ಅವರಿಗೆ ಉಪಯುಕ್ತವಾಗುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ ಎನ್ನುತ್ತಾರೆ ಕೃಪಾ. ಈ ಆನ್ ಲೈನ್ ವೇದಿಕೆ ಹಲವು ವಿದ್ಯಾರ್ಥಿಗಳಿಗೆ ಸಹಾಯ ಮಾಡಲಿದ್ದು, ವಿದ್ಯಾರ್ಥಿಗಳ ಪೋಷಕರು ಈ ಬಗ್ಗೆ ಒಲವು ತೋರಿಸಿದರೆ ಒಳ್ಳೆಯದು.

Leave A Reply

Your email address will not be published.