ವಾಹನ ಸವಾರರಿಗೊಂದು ಸಿಹಿ ಸುದ್ದಿ !! | ಹೊಸ ಕಾರು ಖರೀದಿಯ ಕೆಲವೇ ಗಂಟೆಗಳಲ್ಲಿ ನಿಮ್ಮ ಕೈಸೇರಲಿದೆ ನೋಂದಣಿ ಸಂಖ್ಯೆ

ಹೊಸ ಕಾರು ಕೊಂಡವರಿಗೆ ನೋಂದಣಿಯ ಕಿರಿಕಿರಿ ಇನ್ನು ಮುಂದೆ ಇರುವುದಿಲ್ಲ. ದಿನನಿತ್ಯ ಆರ್ ಟಿಓ ಕಚೇರಿಗೆ ನೋಂದಣಿಗಾಗಿ ಅಲೆದಾಡುವ ಕೆಲಸಕ್ಕೆ ತಿಲಾಂಜಲಿ ಇಡುವ ಸಮಯ ಬರುತ್ತಿರುವ ಬಗ್ಗೆ ಸುದ್ದಿಯೊಂದು ಹೊರಬಿದ್ದಿದೆ. ಹೌದು, ಕರ್ನಾಟಕದಲ್ಲಿ ಕೆಲವೇ ದಿನಗಳಲ್ಲಿ ಡಿಪಿಆರ್ ಎಂದರೆ ಡೀಲರ್ ಪಾಯಿಂಟ್ ರೆಜಿಸ್ಟ್ರೇಷನ್ ಎಂಬ ಹೊಸ ಪ್ರಕ್ರಿಯೆ ಜಾರಿಗೆ ಬರಲಿದೆ.

ಹೌದು. ಡಿಪಿಆರ್ ಜಾರಿಗೆ ಬರುವ ಮೂಲಕ ಇನ್ನು ಹೊಸ ವಾಹನ ಖರೀದಿದಾರು ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ಈ ವಿಧಾನದ ಮೂಲಕ ಹೊಸ ಕಾರು ಖರೀದಿಸಿದ ಒಂದೆರಡು ಗಂಟೆಯಲ್ಲೇ ಅದರ ನೋಂದಣಿ ಸಂಖ್ಯೆ ಖರೀದಿದಾರರಿಗೆ ಲಭ್ಯವಾಗಲಿದೆ. ಅಷ್ಟೇ ಅಲ್ಲ, ಶಾಶ್ವತ ನೋಂದಣಿ ಪ್ರಮಾಣ ಪತ್ರವೂ ಸಹ 2-3 ದಿನಗಳಲ್ಲಿ ಖರೀದಿದಾರರ ಕೈಸೇರಲಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಾಧ್ಯಮವೊಂದಕ್ಕೆ ಮಾತನಾಡಿರುವ ಸಾರಿಗೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ ಅವರು ಮುಂದಿನ ಹತ್ತು ದಿನಗಳಲ್ಲಿ ಸಾರ್ವಜನಿಕರಿಗೆ ಡೀಲರ್‌ಗಳೇ ಆನ್‌ಲೈನ್‌ ಮೂಲಕ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡುವಂತಹ ವಿಧಾನ ಒಳಗೊಂಡ ಡಿಪಿಆರ್ ಸೇವೆ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅವರು”ಈ ವಿಧಾನವು ಅತ್ಯಂತ ಸುಧಾರಿತ ಪ್ರಕ್ರಿಯೆಯಾಗಿದ್ದು, ಇದನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಅನುಕೂಲವಾಗುವಂತೆ ಅದಕ್ಕೆ ಪೂರಕವಾದ ಸರ್ಕಾರಿ ಸಂಸ್ಥೆಗಳೊಂದಿಗೆ ಮಾತನಾಡಿದ್ದು ಅವರ ವಹಿಸಬೇಕಾದ ಪಾತ್ರಗಳ ಬಗ್ಗೆ ಚರ್ಚಿಸಿದ್ದೇವೆ” ಎಂದಿದ್ದಾರೆ.

ಇದೊಂದು ನೂತನ ವಿಧಾನವಾಗಿದ್ದು ಇದರಲ್ಲಿ ಯಾವುದೇ ರೀತಿಯ ಭೌತಿಕ ಹಾಗೂ ಮೌಖಿಕ ಸಂಪರ್ಕ ಇರುವುದಿಲ್ಲ. ಒಂದೊಮ್ಮೆ ಗ್ರಾಹಕ ಶೋರೂಂನಲ್ಲಿ ತನಗೆ ಬೇಕಾದ ವಾಹನ ಆಯ್ಕೆ ಮಾಡಿ ಹಣ ಪಾವತಿಸಿದರೆ ಸಾಕು ಅಷ್ಟೇ. ತದನಂತರ ಡೀಲರ್‌ಗಳೇ ಸ್ವತಃ ಅದಕ್ಕೆ ಸಂಬಂಧಿಸಿದಂತೆ ಬೇಕಾಗಿರುವ ದಾಖಲೆ ಪತ್ರಗಳನ್ನು ಪರಿವಾಹನ ಎಂಬ ಸೇವಾ ತಂತ್ರಾಂಶ ಬಳಸಿ ಅದರಲ್ಲಿ ವಿವರಗಳನ್ನು ನಮೂದಿಸಿ ಸ್ಕ್ಯಾನ್ ಪ್ರತಿಗಳನ್ನು ಲಗತ್ತಿಸುತ್ತಾರೆ. ಇದರಲ್ಲಿ ಒಂದೊಮ್ಮೆ ತೆರಿಗೆ ಪಾವತಿಯಾದರೆ ಸಾಕು, ಅದರ ಶುಲ್ಕ ಸ್ವೀಕೃತಿಯ ರಸೀದಿಯೊಂದಿಗೆ ನೋಂದಣಿ ಸಂಖ್ಯೆಯೂ ಸಹ ಲಭಿಸುತ್ತದೆ.

ಇನ್ನು ಕೆಲವರಿಗೆ ತಮ್ಮ ವಾಹನಕ್ಕೆ ವಿಶಿಷ್ಟವಾದ ಅಥವಾ ಗಣ್ಯ ಎಂದು ಪರಿಗಣಿಸಲ್ಪಡುವ ನೋಂದಣಿ ಸಂಖ್ಯೆ ಬೇಕೆಂಬ ಆಸೆ ಇರುವುದು ಸಹಜ. ಅಂತಹ ಸಂದರ್ಭದಲ್ಲೂ ಆನ್‌ಲೈನ್‌ ಮೂಲಕ ಈ ಸೇವೆ ಪಡೆಯಬಹುದಾಗಿದೆ. ಆದರೆ, ಷರತ್ತೇನೆಂದರೆ ಅವರಿಗೆ ಬೇಕಾದ ಆ ವಿಶಿಷ್ಟ ಸಂಖ್ಯೆ ಲಭ್ಯವಿರಬೇಕಷ್ಟೇ. ಈ ಸಂದರ್ಭದಲ್ಲಿ ಗ್ರಾಹಕರಿಗೆ ಬೇಕಾದ ಸಂಖ್ಯೆ ಲಭ್ಯವಿದ್ದಲ್ಲಿ ಅದಕ್ಕೆ ನಿಗದಿಪಡಿಸಲಾದ ಹೆಚ್ಚುವರಿ ಶುಲ್ಕವನ್ನು ಪಾವತಿಸಿ ಆ ಸಂಖ್ಯೆಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿದುಬಂದಿದೆ. ಹೀಗೆ ತತ್ಕಾಲದಲ್ಲಿ ಲಭ್ಯವಾಗುವ ಆ ಸಂಖ್ಯೆಯನ್ನು ಬಳಸಿ ಗ್ರಾಹಕ ತನ್ನ ವಾಹನವನ್ನು ರಸ್ತೆಯ ಮೇಲೆ ನಿರಾಯಾಸವಾಗಿ ಇಳಿಸಿ ಪ್ರಯಾಣಿಸಬಹುದು.

ಮೊದಲಿಗೆ ಶೋರೂಂ ಡೀಲರ್ ತಮ್ಮ ಗ್ರಾಹಕ ವಾಹನ ಕೊಂಡು ಬೆಲೆ ಪಾವತಿಸಿದ ನಂತರ, ಅದಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಗ್ರಾಹಕರಿಂದ ಪಡೆದು ಆನ್ಲೈನ್ ಮೂಲಕ ನೋಂದಣಿಗಾಗಿ ಅರ್ಜಿ ಸಲ್ಲಿಸುತ್ತಾರೆ. ಆರ್‌ಟಿಒ ಕಚೇರಿಗೆ ಬರುವ ಆ ನೋಂದಣಿ ಅರ್ಜಿಗಳ ಸಿಂಧುತ್ವದ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿ ಮನವರಿಕೆಯಾದ ನಂತರ ಅದನ್ನು ಸ್ವೀಕರಿಸಿ ನೋಂದಣಿ ಸಂಖ್ಯೆ ನೀಡುತ್ತಾರೆ. ತದನಂತರ ಖರೀದಿಸಲಾದ ವಾಹನಕ್ಕೆ ಸಂಬಂಧಿಸಿದ ಆರ್‌ಸಿ ದಾಖಲೆಗಳು ನೆಲಮಂಗಲದಲ್ಲಿರುವ ಕೇಂದ್ರೀಯ ಮುದ್ರಣಾ ಘಟಕದಲ್ಲಿ ಪ್ರಿಂಟ್ ಆಗಿ ಇಂಡಿಯಾ ಪೋಸ್ಟ್ ಮೂಲಕ ರವಾನೆ ಮಾಡಲಾಗುತ್ತದೆ.

Leave A Reply

Your email address will not be published.