ತಾನೇ ತೋಡಿದ ಖೆಡ್ಡಾಕ್ಕೆ ತಾನೇ ಬೀಳುವುದೆಂದರೆ ಇದೇ ಇರಬೇಕು. ಯಾಕೆಂದರೆ ಇಲ್ಲಿ ಕಳ್ಳನೊಬ್ಬ ಚಿನ್ನಾಭರಣ ಕದಿಯಲೆಂದು ದೇವಾಲಯದ ಗೋಡೆಯನ್ನು ಕೊರೆದ ಬಳಿಕ ಅದೇ ರಂಧ್ರದಲ್ಲಿ ಸಿಲುಕಿಕೊಳ್ಳುವ ಮೂಲಕ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.
ಆಂಧ್ರಪ್ರದೇಶದ ಶ್ರೀಕಾಕುಳಂನ ಕರಾವಳಿ ಜಿಲ್ಲೆಯ ಜಾಮಿ ಯಲಮ್ಮ ದೇವಸ್ಥಾನದ ಆಭರಣಗಳನ್ನು ಕದಿಯಲು ಯತ್ನಿಸುತ್ತಿದ್ದ ಆರೋಪಿ, ತಾನೇ ಕೊರೆದಿದ್ದ ರಂಧ್ರದಲ್ಲಿ ಸಿಲುಕಿಕೊಂಡಿದ್ದಾನೆ. ಆರೋಪಿಯನ್ನು 30 ವರ್ಷದ ಪಾಪ ರಾವ್ ಎಂದು ಗುರುತಿಸಲಾಗಿದ್ದು, ಈತ ದೇವಸ್ಥಾನದ ಚಿಕ್ಕ ಕಿಟಕಿ ಮುರಿದು ದೇವರ ವಿಗ್ರಹಗಳಲ್ಲಿದ್ದ ಆಭರಣಗಳನ್ನು ದೋಚಿದ್ದಾನೆ.
ನಂತರ ಅಲ್ಲಿಂದ ಪರಾರಿಯಾಗುವ ವೇಳೆ ಗೋಡೆಯಲ್ಲೇ ಸಿಲುಕಿಕೊಂಡಿದ್ದಾನೆ. ಕೊನೆಗೆ ಹೊರ ಬರಲು ಆಗದೇ ಪಾಪ ರಾವ್ ಸಹಾಯಕ್ಕಾಗಿ ಅಳಲು ಪ್ರಾರಂಭಿಸಿದ್ದಾನೆ. ನಂತರ ಗ್ರಾಮಸ್ಥರು ಆತನಿಗೆ ಹೊರತೆಗೆದು ರಕ್ಷಿಸಿ, ಆತನನ್ನು ಪೊಲೀಸರಿಗೊಪ್ಪಿಸಿದ್ದಾರೆ.