ಪ್ರಪಂಚದಲ್ಲಿ ಒಂದೊಂದು ರೀತಿಯಲ್ಲಿ ಬದುಕು ಸಾಗಿಸುವ ಮನುಷ್ಯರಿರುತ್ತಾರೆ. ಕೆಲವರಿಗೆ ಐಷಾರಾಮಿ ಬಂಗಲೆ ಇದ್ದರೆ, ಇನ್ನೂ ಕೆಲವರಿಗೆ ಸ್ವಂತ ಸೂರೇ ಇಲ್ಲ. ಹೀಗಿರುವಾಗ ಇಲ್ಲಿ ಯುವತಿಯೊಬ್ಬಳು ಸತತ ಎರಡು ವರ್ಷಗಳಿಂದ ಕೆಟ್ಟುನಿಂತ ಕಾರಿನಲ್ಲೇ ವಾಸ ಮಾಡುತ್ತಿರುವ ಘಟನೆ ಹೈದರಾಬಾದ್ನ ಎಸ್ಆರ್ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಧುರಾನಗರದಲ್ಲಿ ಬೆಳಕಿಗೆ ಬಂದಿದೆ.
ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಪ್ರಕರಣ ಗೊತ್ತಾಗಿದೆ. ವಿಶೇಷ ಅಂದರೆ ಈ ಯುವತಿಯ ಹೆಸರಿನಲ್ಲೇ ಕಾರು ನೋಂದಣಿಕೆಯಾಗಿದ್ದು, 30 ವರ್ಷದ ಗುರಂ ಅನಿತಾ ಎಂಬುವರೇ ಮಾರುತಿ ಓಮ್ಮಿ (ಎಪಿ31ಕ್ಯೂ-6434) ಕಾರಿನಲ್ಲಿ ವಾಸ ಮಾಡುತ್ತಿರುವ ಯುವತಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈಕೆಯ ಕುರಿತು ಇನ್ನೂ ಹೆಚ್ಚಿನ ಮಾಹಿತಿ ಸಂಗ್ರಹಕ್ಕೆ ಪೊಲೀಸರು ಮುಂದಾಗಿದ್ದಾರೆ.
ಅನಿತಾ ರಾಜದೂತ್ ಹಾಸ್ಟೆಲ್ನಲ್ಲಿ ಇದ್ದರು. ಎರಡು ವರ್ಷಗಳ ಹಿಂದೆ ಶುಲ್ಕ ಪಾವತಿಸದ ಕಾರಣ ಹಾಸ್ಟೆಲ್ ಮ್ಯಾನೇಜರ್ ಈಕೆಯನ್ನು ಹಾಸ್ಟೆಲ್ನಿಂದ ಹೊರ ಕಳುಹಿಸಿದ್ದಾರೆ. ಇದರಿಂದಾಗಿ ತನ್ನ ವಸ್ತುಗಳನ್ನು ತೆಗೆದುಕೊಂಡು ಬಂದ ಅನಿತಾ ಕಾರಿನಲ್ಲಿ ವಾಸಿಸುತ್ತಿದ್ದಾಳೆ. ಸ್ಥಳೀಯರು ಈಕೆಗೆ ಅನ್ನ ನೀಡುತ್ತಿದ್ದಾರೆ. ಕಾರಿನಲ್ಲೇ ಮಲಗುವ ಮೂಲಕ ಎರಡು ವರ್ಷಗಳನ್ನು ಕಳೆದಿದ್ದಾಳೆ.
ಸದ್ಯ ರಸ್ತೆಯಲ್ಲಿ ಕಾರು ನಿಲ್ಲಿಸಿದ್ದಕ್ಕಾಗಿ ಸಂಚಾರ ಪೊಲೀಸರು ಆಕೆಗೆ ದಂಡ ವಿಧಿಸಿ ಕೌನ್ಸೆಲಿಂಗ್ ಮಾಡಲಾಗುವುದು ಎಂದು ಹೇಳಿಕೆ ನೀಡಿದ್ದಾರೆ. ಆದರೂ ಎರಡು ವರ್ಷ ಕಾರಿನಲ್ಲಿಯೇ ಏಕಾಂಗಿಯಾಗಿ ಕಾಲಕಳೆದ ಆಕೆಯ ಧೈರ್ಯವನ್ನು ಮೆಚ್ಚಲೇಬೇಕು.