ಪಠ್ಯದಲ್ಲಿ ಟಿಪ್ಪು ಸುಲ್ತಾನ್ ಮೈಸೂರು ಹುಲಿ ಬಿರುದನ್ನು ಕೈ ಬಿಡುವಂತೆ ಸರಕಾರಕ್ಕೆ ಶಿಫಾರಸು

ಬೆಂಗಳೂರು : ಶಾಲಾ ಪಠ್ಯದಲ್ಲಿ ‘ಮೈಸೂರು ಹುಲಿ’ ಟಿಪ್ಪುಸುಲ್ತಾನ್ ಎಂಬ ಬಿರುದನ್ನು ಕೈಬಿಡುವಂತೆ ಪಠ್ಯ ಪರಿಷ್ಕರಣೆ ಸಮಿತಿ ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿದೆ. ಈ ಹಿನ್ನೆಲೆಯಲ್ಲಿ ‘ಮೈಸೂರು ಹುಲಿ’ ಎಂಬ ಬಿರುದನ್ನು ಕೈಬಿಡುವ ಸಾಧ್ಯತೆಯಿದೆ ಎಂದು ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಬೆಂಗಳೂರಿನಲ್ಲಿ ತಿಳಿಸಿದ್ದಾರೆ.

ಟಿಪ್ಪುಗೆ ‘ಮೈಸೂರು ಹುಲಿ’ ಎಂದು ಬಿರುದು ಕೊಟ್ಟಿದ್ಯಾರು? ಬಿರುದು ಕೊಟ್ಟಿರುವ ಬಗ್ಗೆ ಮಾಹಿತಿ ಎಲ್ಲೂ ಅಡಕವಾಗಿಲ್ಲ. ಉಲ್ಲೇಖವಾಗಿಲ್ಲ, ದಾಖಲೆಗಳೂ ಇಲ್ಲ. ಸುಖಾ ಸುಮ್ಮನೇ ಮೈಸೂರು ಹುಲಿ ಎಂದು ವೈಭವೀಕರಣ ಮಾಡಲಾಗುತ್ತಿದೆ. ಜಾತಿ ಮತಗಳ ಬಗ್ಗೆ ಟಿಪ್ಪು ಬೇಕಾಬಿಟ್ಟಿಯಾಗಿ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.

ಈ ಹಿಂದೆ ಪ್ರೊ. ಬರಗೂರು ರಾಮಚಂದ್ರಪ್ಪ ಪಠ್ಯ ಪರಿಷ್ಕರಣೆ ಮಾಡಿದ್ದಾರೆ. ಟಿಪ್ಪುವಿನ ಬಗ್ಗೆ ಬರಗೂರು ರಾಮಚಂದ್ರಪ್ಪಗೆ ಸ್ಪಷ್ಟ ಮಾಹಿತಿ ಇಲ್ಲ. ಮನಸ್ಸಿಗೆ ಬಂದಂತೆ ಟಿಪ್ಪುವಿನ ವೈಭವೀಕರಣ ಮಾಡಲಾಗಿದೆ. ಮುಖ್ಯವಾಗಿ ಈಗ ಟಿಪ್ಪು ಬಿರುದು ತೆಗೆಯುವಂತೆ ವರದಿ ನೀಡಿದ್ದೇವೆ ಎಂದು ರೋಹಿತ್ ಚಕ್ರತೀರ್ಥ ಹೇಳಿದ್ದಾರೆ.

ಜಾತಿ ಮತಗಳ ಬಗ್ಗೆ ಟಿಪ್ಪುವಿನ ಮಾತನ್ನೂ ಪಠ್ಯದಿಂದ ತೆಗೆಯಬೇಕು. ಮುಖ್ಯವಾಗಿ ಎರಡು ವಿಚಾರಗಳ ಬಗ್ಗೆ ಸರಕಾರಕ್ಕೆ ವರದಿ ನೀಡಿದ್ದೇವೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. 15 ದಿನಗಳ ಹಿಂದೆ ಸರಕಾರಕ್ಕೆ ವರದಿ ನೀಡಿದ್ದೇವೆ. ಕೇವಲ ಟಿಪ್ಪು ವಿಚಾರ ಮಾತ್ರವಲ್ಲ, ಅನೇಕ ವಿಚಾರಗಳು ಪರಿಷ್ಕರಣೆ ಆಗಿವೆ. ಮುಂದಿನ ಶೈಕ್ಷಣಿಕ ವರ್ಷದಿಂದಲೇ ಪರಿಷ್ಕರಣೆ ಪಠ್ಯ ಜಾರಿಯಾಗಲಿದೆ. ಒಟ್ಟು 1 ರಿಂದ 10ನೇ ತರಗತಿಯ ಪಠ್ಯವನ್ನು ಪರಿಷ್ಕರಣೆ ಮಾಡಿದ್ದೇವೆ. ಈ ಪೈಕಿ 1 ರಿಂದ 5ನೇ ತರಗತಿಯ ಭಾಷಾ ವಿಷಯಗಳು ಹಾಗೂ 6 ರಿಂದ 10ನೇ ತರಗತಿಯ ಸಮಾಜ ವಿಜ್ಞಾನ ವಿಷಯಗಳ ಪರಿಷ್ಕರಣೆಯಾಗಿದೆ ಎಂದು ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ತಿಳಿಸಿದ್ದಾರೆ.

Leave A Reply

Your email address will not be published.