ಸುಖ ಸಂಸಾರದಲ್ಲಿ ‘ಕೊರೊನಾ’ ದ ಹೊಡೆತ | ಮನೆಯ ಆಧಾರಸ್ತಂಭವನ್ನೇ ಕಳೆದುಕೊಂಡ ಕುಟುಂಬ | ಪತಿಯ ಉದ್ಯೋಗಕ್ಕಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದ 34 ವರ್ಷದ ಮಹಿಳೆ

ಕೋವಿಡ್ ಸಾಂಕ್ರಾಮಿಕ ರೋಗವು ಹಲವರ ಬದುಕಿನಲ್ಲಿ ಹಿಂದಿನ 2 ವರ್ಷದಲ್ಲಿ ದೊಡ್ಡ ದೊಡ್ಡ ಆಘಾತವನ್ನೇ ನೀಡಿದೆ. ಹಲವರು ತಮ್ಮ ಕುಟುಂಬದ ಸದಸ್ಯರನ್ನು, ಸಣ್ಣ ಮಕ್ಕಳನ್ನು ಹಿರಿಯರನ್ನು ಕೋವಿಡ್‌ನಿಂದಾಗಿ ಕಳೆದುಕೊಂಡಿದ್ದಾರೆ. ಈ ಮಾಹಾಮಾರಿ ಕೊಟ್ಟ ಆಘಾತದಿಂದ ಜನ ಇನ್ನೂ ಕೂಡಾ ಚೇತರಿಸಿಕೊಳ್ಳುತ್ತಿದ್ದಾರಷ್ಟೇ.

ಈ ಕೋವಿಡ್‌ನಿಂದ ಪತಿಯನ್ನು ಕಳೆದುಕೊಂಡಿದ್ದ ಮಹಿಳೆಯೊಬ್ಬರು ಉದ್ಯೋಗಕ್ಕಾಗಿ ಈಗ ಎಸ್ಎಸ್ಎಲ್‌ಸಿ ಪರೀಕ್ಷೆ ಬರೆಯುತ್ತಿದ್ದಾರೆ. ಗುಜರಾತ್‌ನಲ್ಲಿ ಎಸ್‌ಎಸ್‌ಎಲ್‌ಸಿ ಬೋರ್ಡ್ ಪರೀಕ್ಷೆ ನಡೆಯುತ್ತಿದ್ದು ಈ ಪರೀಕ್ಷೆಯಲ್ಲಿ ಮಹಿಳೆ ಭಾಗಿಯಾಗಿದ್ದಾರೆ.

34 ವರ್ಷದ ಹರ್ಷ ಸೋಲಂಕಿ ಎಂಬ ಮಹಿಳೆಯೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದವರು. ಅಂಚೆ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದ ಮಹಿಳೆಯ ಪತಿ ಕಳೆದ ವರ್ಷ ಮೇ ತಿಂಗಳಲ್ಲಿ ಈ ಮಹಾಮಾರಿ ಕೋವಿಡ್‌ಗೆ ಮೃತಪಟ್ಟಿದ್ದರು. ಉದ್ಯೋಗದಲ್ಲಿದ್ದಾಗಲೇ ಪತಿ ತೀರಿಕೊಂಡ ಕಾರಣ ಅನುಕಂಪದ ನೆಲೆಯಲ್ಲಿ ಸಮರ್ಪಕವಾದ ಶಿಕ್ಷಣವಿದ್ದಲ್ಲಿ ಅವರ ಉದ್ಯೋಗವನ್ನು ಪತ್ನಿಗೆ ನೀಡಲಾಗುತ್ತದೆ. ಆದರೆ ಪತ್ನಿ ಹರ್ಷ ಸೋಲಂಕಿ ಅವರು ಎಸ್ಎಸ್ಎಲ್‌ಸಿಯನ್ನು ಪೂರ್ತಿ ಮಾಡಿಲ್ಲ. ಆದರೆ ಈಗ ಅನಿವಾರ್ಯತೆ ಎದುರಾಗಿದ್ದು, ಪರೀಕ್ಷೆ ಬರೆಯಲು ಬಂದಿದ್ದಾರೆ.

ಹರ್ಷ ಸೋಲಂಕಿ ಅವರು ದಂಡೂಕಾ ನಿವಾಸಿ. 2005 ರಲ್ಲಿ 9 ನೇ ತರಗತಿಯವರೆಗೆ ಕಲಿತಿದ್ದಾರೆ. 2008 ರಲ್ಲಿ ಮೆಹುಲ್ ಅವರೊಂದಿಗೆ ವಿವಾಹವಾಗಿದ್ದಾರೆ. ವಿವಾಹವಾದ ನಂತರ ಹರ್ಷ ಅವರ ಪತಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗ ದೊರಕಿತ್ತು. ಹಾಗಾಗಿ ಹರ್ಷ ಅವರಿಗೆ ಮತ್ತೆ ಓದಬೇಕು ಎಂದು ಅನಿಸಿರಲಿಲ್ಲ. ಶಿಕ್ಷಣದ ಅಗತ್ಯ ಆವಾಗ ಇರಲಿಲ್ಲ ಅನ್ನಿಸಿತ್ತು. ಜೀವನ ಸೆಟ್ ಆಗಿತ್ತು. ಖುಷಿಯಾಗಿಯೇ ಜೀವನ ಸಾಗುತ್ತಿತ್ತು.

ಆದರೆ ಒಂದು ದಿನ ಪತಿ ಕೋವಿಡ್‌ಗೆ ಬಲಿಯಾದರು. ಕುಟುಂಬಕ್ಕೆ ಹಣದ ಆಧಾರವಿಲ್ಲದೆ ಹೋಯಿತು. ನಾನು ಅಂಚೆ ಇಲಾಖೆಯಲ್ಲಿ ಉದ್ಯೋಗದ ಬಗ್ಗೆ ಕೇಳಿದಾಗ, ಇಲಾಖೆಯಲ್ಲಿ ಉದ್ಯೋಗ ಪಡೆಯಲು ಕನಿಷ್ಠ ಹತ್ತನೇ ತರಗತಿ ಶಿಕ್ಷಣ ಬೇಕೆ ಬೇಕು ಎಂದು ತಿಳಿದು ಬಂತು. ಹೀಗಾಗಿ ನಾನು ಪರೀಕ್ಷೆ ಬರೆಯುವ ನಿರ್ಧಾರಕ್ಕೆ ಬಂದೆ. ಇದರಿಂದ ನನ್ನ ಮಕ್ಕಳಾದರೂ ಉತ್ತಮ ಜೀವನ ನಡೆಸಬಹುದು ಎಂದು ಹರ್ಷ ಅವರ ಆಸೆ.

ಜೋಧಪುರದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದ ಹರ್ಷ ಸೋಲಂಕಿ, ಪರೀಕ್ಷೆ ಪಾಸಾಗುವುದೇ ನನ್ನ ಗುರಿ ಹಾಗೂ ಮುಖ್ಯ ಉದ್ದೇಶ. ಈ ಪರೀಕ್ಷೆಯಲ್ಲಿ ಪಾಸಾದರಷ್ಟೇ ನನಗೆ ಉದ್ಯೋಗ ಗಳಿಸಲು ಸಾಧ್ಯ, ನನ್ನ ಮಕ್ಕಳ ಬದುಕು ಕಟ್ಟಲು ಇದು ಅಗತ್ಯ ಎಂದಿದ್ದಾರೆ.

ಹರ್ಷ ಅವರಿಗೆ ಇಬ್ಬರು ಮಕ್ಕಳಿದ್ದು, ಒಂದು ಮಗುವಿಗೆ 12 ಹಾಗೂ ಇನ್ನೊಂದು ಮಗುವಿಗೆ ಆರು ವರ್ಷ. ಈ ಮಕ್ಕಳ ಪೋಷಣೆಯ ಜೊತೆ ಜೊತೆಗೆ ಹರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಸಿದ್ಧರಾಗುತ್ತಿದ್ದಾರೆ.

Leave A Reply

Your email address will not be published.