ಪುತ್ತೂರು | ಮಗುವನ್ನು ಅದುಮಿ ಹಿಡಿದು ಇಂಜೆಕ್ಷನ್ ಚುಚ್ಚಿದಳಾ ನರ್ಸ್ ?! ದಾದಿಯ ನಿರ್ಲಕ್ಷ್ಯಕ್ಕೆ ಹಸುಗೂಸು ಬಲಿ, ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲು

ಪುತ್ತೂರಿನಲ್ಲಿ ದಾದಿಯೊಬ್ಬಳ ನಿರ್ಲಕ್ಷ್ಯಕ್ಕೆ ಇದೀಗ ತಾನೇ ಕಣ್ಣು ಬಿಟ್ಟು, ಬಾಳು ಬದುಕಬೇಕಿದ್ದ ಪುಟ್ಟ ಮಗುವೊಂದು ವಿಲವಿಲ ಒದ್ದಾಡಿ ಪ್ರಾಣ ಬಿಟ್ಟಿದೆ.

ಕಳೆದ ವಾರ ಗಣೇಶ್ ಮತ್ತು ಚೈತ್ರ ದಂಪತಿಗಳ ಕೆಲವೇ ವಾರಗಳ ಪ್ರಾಯದ ಮಗುವನ್ನೂ ಪುತ್ತೂರಿನ ಚೇತನಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿನ ಡಾಕ್ಟರ್ ಶ್ರೀಕಾಂತ್ ಅವರ ಆರೈಕೆಯಲ್ಲಿ ಮಗು ಹುಷಾರಾಗಿತ್ತು. ಮಗು ಇನ್ನೇನು ಡಿಸ್ಚಾರ್ಜ್ ಆಗಬೇಕಿತ್ತು.

ಮೊನ್ನೆ ಭಾನುವಾರ, ಡಿಸ್ಚಾರ್ಜ್ ಮಾಡುವುದು ಬೇಡ, ಮಗು ಆಸ್ಪತ್ರೆಯಲ್ಲಿ ಇದ್ದು ಇನ್ನೊಂದೆರಡು ದಿನ ಆರಾಮ ಮಾಡಿಕೊಳ್ಳಲಿ ಎಂದು ಮನೆಯವರು ಮಗುವಿನ ಅಮ್ಮನ ಸಮೇತ ಆಸ್ಪತ್ರೆಯಲ್ಲಿ ಉಳಿದುಕೊಂಡಿದ್ದರು.
ಭಾನುವಾರ ಮಧ್ಯಾಹ್ನದ ಹೊತ್ತಿಗೆ ಆಸ್ಪತ್ರೆಯ ನರ್ಸ್ ಚೇತನಾ ಕುಮಾರಿ ಎನ್ನುವವಳು ಬಂದಿದ್ದಳು. ಬಂದು ಮಗುವಿಗೆ ಮೂರು ಡೋಸ್ ಇಂಜೆಕ್ಷನ್ ನೀಡಿದ್ದಳು. ಅಲ್ಲದೆ, ಮಗುವಿನ ಕಫ ತೆಗೆಯಲು ನೇಬುಲೈಸರ್ ಅಳವಡಿಸಿದ್ದಾಳೆ.

ಆಗ ತಾನೇ ಹಾಲು ಕುಡಿದು ಮಲಗಿದ ಮಗು ಗೆಲುವಾಗಿಯೆ ಇತ್ತು. ಈಗ ನೇಬುಳೈಸರ್ ಬೇಡ, ಸ್ವಲ್ಪ ಹೊತ್ತು ಮಗು ಮಲಗಲಿ ಎಂದರೂ ಕೇಳದ ನರ್ಸ್ ಚೇತನಾ ಕುಮಾರಿ ಪೈಪು ಅಳವಡಿಸಿದ್ದಾರೆ. ಬೇಡ ಅಂದರೂ ಕೇಳದೇ ಪೈಪು ಸಿಕ್ಕಿಸಿ ಮಗು ಚೀರಿಕೊಂಡು ಅಳುತ್ತಿದ್ದರೂ ಸೀದಾ ನಿರ್ಲಕ್ಷದಿಂದ ಹೊರ ಹೋಗಿದ್ದಾಳೆ.

ಅಷ್ಟರಲ್ಲಿ ಮಗುವಿಗೆ ಉಸಿರಾಟಕ್ಕೆ ತೊಂದರೆ ಆಗಿದೆ. ಮಗು ಚಡಪಡಿಸಿ ಅತ್ತಿದೆ. ಅತ್ತರೂ, ಕ್ಯಾರೇ ಅನ್ನದ ನರ್ಸಮ್ಮ ” ಮಗು ಅತ್ತರೆ ಒಳ್ಳೇದು” ಎಂದು ಹೇಳಿ ನೆಗ್ಲೆಕ್ಟ್ ಮಾಡಿದ್ದಾಳೆ. ಅಲ್ಲಿ ಉಸಿರಾಡಲು ಒದ್ದಾಡಿದ ಮಗು ನೋವಿನಿಂದ ಅತ್ತು ಉಚ್ಚೆ ಮಾಡಿಕೊಂಡಿದೆ. ಅಷ್ಟರಲ್ಲಿ ಮಗುವಿನಲ್ಲಿ ಚಟುವಟಿಕೆಗಳು ಕಮ್ಮಿಯಾಗಿವೆ. ಹೆದರಿಕೊಂಡ ಮನೆಯವರು ಕೂಡಲೇ ಆಸ್ಪತ್ರೆಯ ಕೌಂಟರ್ ಗೆ ಮಗುವನ್ನು ಎತ್ತಿಕೊಂಡು ಓಡಿದ್ದಾರೆ. ಅಲ್ಲಿ ಮಗುವನ್ನು ಪರೀಕ್ಷಿಸಿದ ಇತರ ನಷ್ಟಗಳು ಅದಾಗಲೇ ಮಗು ತೀರಿಕೊಂಡ ವಿಷಯವನ್ನು ಮನೆಯವರಿಗೆ ತಿಳಿಸಿದ್ದಾರೆ.

ಸತ್ತ ಮಗುವಿನ ಪೋಸ್ಟ್ ಮಾರ್ಟಂ ಅನ್ನು ಅರ್ಜೆಂಟ್ ಆಗಿ ಮಾಡಬೇಕಿತ್ತು. ಆದರೆ ಬಡ ದಂಪತಿಗಳ ಕೂಗಿಗೆ ಯಾರೂ ತಕ್ಷಣ ಸ್ಪಂದಿಸಲಿಲ್ಲ. ಭಾನುವಾರ ವೆನ್ಲಾಕ್ ನಲ್ಲಿ ಪೋಸ್ಟ್ ಮಾರ್ಟಂ ಮುಗಿದಿದೆ. ಆದರ ರಿಪೋರ್ಟ್ ಕೈ ಸೇರಲು ಇನ್ನೂ 15 ದಿನಗಳೇ ಬೇಕು. ಅಷ್ಟರಲ್ಲಿ ವಿಷಯ ಹಳೆತಾಗಲಿದೆ. 

ಈ ಮಧ್ಯೆ ಅಂದು ಮಗುವನ್ನು ಅದುಮಿ ಹಿಡಿದು ಸೂಜಿ ಚುಚ್ಚಿ ಪೈಪು ಸಿಕ್ಕಿಸಿ ಕ್ಯಾರ್ ಲೆಸ್ ಆಗಿ ಹೊರ ನಡೆದ ಚೇತನಾ ಮತ್ತೆ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿಲ್ಲ. ಅದೇ ಕೊನೆ: ಆಸ್ಪತ್ರೆಯ ತಂಡ ಚೇತನಾ ಕುಮಾರಿಯನ್ನು ಯಾರ ಕೈಗೂ ಸಿಗದಂತೆ ರಕ್ಷಿಸಿ ಇಟ್ಟಿದ್ದಾರೆ. ಆಕೆಯ ಯಾವುದೆ ಸುಳಿವು ಸಿಗದಂತೆ ಮ್ಯಾನೇಜ್ಮೆಂಟ್ ಎಲ್ಲವನ್ನೂ ಮ್ಯಾನೇಜ್ ಮಾಡಿದೆ.
ಮಗು ತೀರಿ ಹೋಗಿದ್ದರು ಪೋಲಿಸ್ ಇಲಾಖೆಯ ಗಮನಕ್ಕೆ ತರುವಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು ಹಿಂಜರಿದಿದ್ದರು ಹಾಗೂ ಮಗು ಸಾವನ್ನಪ್ಪಿದ 4 ಗಂಟೆಯ ನಂತರ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿರುತ್ತಾರೆ ಎಂದು ಮನೆಯವರು ಆಪಾದಿಸಿದ್ದಾರೆ.

ಸಂಬಂಧಪಟ್ಟ ಇಲಾಖೆಗಳು ಸದರಿ ಆಸ್ಪತ್ರೆಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ಈ 21 ರ ಪ್ರಾಯದ ಚೇತನಾ ಮೇಲೆ ಇದಕ್ಕೂ ಮೊದಲು ಇಂತದ್ದೇ 3 ಆಪಾದನೆ ಹಿಂದೆಯೂ ಬಂದಿತ್ತು. ಆದರೂ ಆಡಳಿತ ವರ್ಗ ಆಕೆಯ ಮೇಲೆ ಯಾವುದೇ ಕ್ರಮ ಕೈಗೊಳ್ಳಲು ವಿಫಲವಾಗಿತ್ತು. ಅದು ಮತ್ತೀಗ ದುಬಾರಿಯಾಗಿ ಪರಿಣಮಿಸಿದೆ. ಪುಟ್ಟ ಮಗು ತೀರಿಕೊಂಡಿದೆ. ದುರಂತವೆಂದರೆ, ಈ ದಂಪತಿಗಳ ಮೊದಲ ಮಗು ಕೂಡ ಸಣ್ಣ ಪ್ರಾಯದಲ್ಲೇ ದುರಂತ ಅಂತ್ಯ ಕಂಡಿತ್ತು.

ಈಗ ಮಗುವನ್ನು ಕಳೆದುಕೊಂಡ ಕುಟುಂಬದ ರೋದನೆ ಮುಗಿಲು ಮುಟ್ಟಿದೆ. ತಪ್ಪಿತಸ್ಥ ನರ್ಸ್ ಗೆ ತಕ್ಕ ಶಿಕ್ಷೆ ವಿಧಿಸುವಂತೆ ಕೂಗು ಕೇಳಿ ಬಂದಿದೆ. ಅಲ್ಲದೆ ಪೋಷಕರಿಗೆ ಅಗತ್ಯ ಪರಿಹಾರ ನೀಡಬೇಕಿದೆ ಎಂಬ ಒತ್ತಾಯ ಎದ್ದಿದೆ.

ಈ ಕುರಿತು ಪುತ್ತೂರು ನಗರ ಠಾಣೆಯಲ್ಲಿ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.

Leave A Reply

Your email address will not be published.