ಮಂಗಳೂರು: ಸಮವಸ್ತ್ರದೊಂದಿಗೆ ಹಿಜಾಬ್ ಧರಿಸಿದರೆ ಪರೀಕ್ಷೆಗೆ ಅವಕಾಶ!! ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ

ಮಂಗಳೂರು: ರಾಜ್ಯಾದ್ಯಂತ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮವಸ್ತ್ರದ ಭಾಗವಾಗಿ ಹಿಜಾಬ್ ಧರಿಸುತ್ತಿರುವ ಖಾಸಗಿ ಶಾಲಾ ವಿದ್ಯಾರ್ಥಿನಿಯರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆವಿ ರಾಜೇಂದ್ರ ತಿಳಿಸಿದ್ದಾರೆ.

ಸಮವಸ್ತ್ರದ ಭಾಗವಾಗಿ ಹಿಜಾಬ್ ಧರಿಸುತ್ತಿರುವ ಖಾಸಗಿ ಶಾಲಾ ವಿದ್ಯಾರ್ಥಿನಿಯರಿಗೆ ಮಾತ್ರ ಅನ್ವಯವಾಗಲಿದ್ದು, ಸರಕಾರಿ ಶಾಲಾ ವಿದ್ಯಾರ್ಥಿನಿಯರು ಸರಕಾರದ ಸುತ್ತೋಲೆಯನ್ನು ಪರಿಗಣಿಸಿ ಸರಕಾರ ಅದೇಶಿಸಿದಂತೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಹಿಜಾಬ್ ಸಮವಸ್ತ್ರವಿರುವ ಶಾಲಾ ವಿದ್ಯಾರ್ಥಿಗಳು ಯಾವ ಪರೀಕ್ಷಾ ಕೇಂದ್ರದಲ್ಲಿ ಹಾಜರಾಗುತ್ತಾರೆ ಹಾಗೂ ಈ ಬಗ್ಗೆ ಶಾಲಾ ಮುಖ್ಯಸ್ಥರ ಸಹಿ ಹೊಂದಿರುವ ದೃಢಿಕರಣ ಪತ್ರ ಹೊಂದಿರಬೇಕಾಗಿದ್ದು, ಉಳಿದಂತೆ ಖಾಸಗೀ ಹಾಗೂ ಸರಕಾರಿ ಶಾಲಾ ವಿದ್ಯಾರ್ಥಿಗಳು ಶಾಲಾ ಆಡಳಿತ ಮಂಡಳಿ ನಿಗದಿ ಪಡಿಸಿದ ಸಮವಸ್ತ್ರ ಧರಿಸಿ ಹಾಜರಾಗುವಂತೆ ಕೋರಲಾಗಿದ್ದು, ಈ ಬಗ್ಗೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಹಿತಿ ಪಡೆದು ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಗೆ ಮಾಹಿತಿ ನೀಡಲು ಸೂಚಿಸಲಾಗಿದೆ.

ಇನ್ನು ಕೇರಳದಲ್ಲಿ ಮಾರ್ಚ್ 28,29 ರಂದು ಹರತಾಳವಿದ್ದು ಈ ಹಿನ್ನೆಲೆಯಲ್ಲಿ ತಲಪಾಡಿ ಗಡಿಯಲ್ಲಿ ವಿದ್ಯಾರ್ಥಿಗಳಿಗಾಗಿ ಎರಡು ವಾಹನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.

Leave A Reply

Your email address will not be published.