ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಪಠ್ಯ ಕ್ರಮ ರಚನೆಗೆ ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಆಧಾರದ ಮೇಲೆ ರಾಜ್ಯದಲ್ಲಿ ಪಠ್ಯಕ್ರಮದ ಚೌಕಟ್ಟನ್ನು ಸಿದ್ಧಪಡಿಸಲು ಚಾಲನ ಸಮಿತಿಯನ್ನು ರಚಿಸಿ, ರಾಜ್ಯ ಸರ್ಕಾರ ಆದೇಶಿಸಿದೆ.

ಈ ಬಗ್ಗೆ ಪ್ರಾಥಮಿಕ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಗಳನ್ನು ಹೊರಡಿಸಿದ್ದು, ಶಾಲಾ ಶಿಕ್ಷಣ ( ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣ ಹಂತ), ಶಿಕ್ಷಕರ ಶಿಕ್ಷಣ ಮತ್ತು ವಯಸ್ಕ ಶಿಕ್ಷಣದ ಚಾಲನಾ ಸಮಿತಿ ಹಾಗೂ ಮೂರು ಕ್ಷೇತ್ರಗಳ ಪಠ್ಯಕ್ರಮ ರಚನೆ ಜವಾಬ್ಧಾರಿಯನ್ನು ಹಂಚಿಕೆ ಮಾಡಿ, ರಾಜ್ಯ ಮಟ್ಟದ ಚಾಲನಾ ಸಮಿತಿಗಳನ್ನು ರಚಿಸಿ ಆದೇಶಿಸಿದ್ದಾರೆ.

ರಾಜ್ಯ ಚಾಲನಾ ಸಮಿತಿಗೆ ರಿಷಿಕೇಷ್ ಅಸೋಸಿಯೇಟ್ ಪ್ರೊಫೇಸರ್, ಅಜೀಂ ಪ್ರೇಮ್ ಜಿ ವಿವಿಯವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ನೋಡಲ್ ಅಧಿಕಾರಿಗಳು, ಸಮನ್ವಯಾಧಿಕಾರಿ, ಸದಸ್ಯರು ಸೇರಿದಂತೆ 21 ಮಂದಿಯನ್ನು ನೇಮಿಸಲಾಗಿದೆ.

ಈ ಸಮಿತಿ 3 ರಿಂದ 5ನೇ ತರಗತಿಯ ಪ್ರಾಥಮಿಕ, 6 ರಿಂದ 8ನೇ ತರಗತಿಯ ಮಾಧ್ಯಮಿಕ ಮತ್ತು 9 ರಿಂದ 12ನೇ ತರಗತಿಯ ಪ್ರೌಢ ಹಂತದ ಶಿಕ್ಷಣಕ್ಕೆ ಸಂಬಂಧಿಸಿದಂತೆ ಪಠ್ಯಕ್ರಮವನ್ನು ರಚಿಸಲಿದೆ.

ಶಿಕ್ಷಕರ ಶಿಕ್ಷಣ ಪಠ್ಯಕ್ರಮ ರಾಜ್ಯ ಚಾಲನಾ ಸಮಿತಿಗೆ ಸೆಂಟರ್ ಫಾರ್ ಎಜುಕೇಷನ್ ನ ಶಿಕ್ಷಣ ವಿಭಾಗದ ಮುಖ್ಯಸ್ಥೆ ಪದ್ಮಾವತಿ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಡಿಎಸ್‌ಇ ಆರ್ ಟಿ ನಿರ್ದೇಶಕಿ ಸುಮಂಗಲಾ ವಿ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ಮುಕ್ಕುಳಿದಂತೆ ಸಮನ್ವಯಾಧಿಕಾರಿಗಳು, ಸದಸ್ಯರು ಸೇರಿದಂತೆ 22 ಮಂದಿಯನ್ನು ನಿಯೋಜಿಸಲಾಗಿದೆ.

ಈ ಶಿಕ್ಷಕರ ಶಿಕ್ಷಣ ಪಠ್ಯಕ್ರಮ ಸಮಿತಿಯು, ಇಸಿಸಿಇ, ಶಾಲಾ ಶಿಕ್ಷಣದ ವಿವಿಧ ಹಂತಗಳಿಗೆ ಪಠ್ಯಕ್ರಮವನ್ನು ರಚಿಸಲಿದೆ. ಪಠ್ಯಕ್ರಮ ರಚನೆಗೆ 10 ಸದಸ್ಯರನ್ನು ಒಳಗೊಂಡಂತೆ 4 ಉಪ ಸಮಿತಿಗಳನ್ನು ರಚಿಸಿ, ಪಠ್ಯಕ್ರಮ ರಚನಾ ಕಾರ್ಯವನ್ನು ನಿರ್ವಹಿಸಲಿದೆ.

ವಯಸ್ಕರ ಶಿಕ್ಷಣ ರಾಜ್ಯ ಚಾಲನಾ ಸಮಿತಿಗೆ ಭಾರತ ಸರ್ಕಾರದ ವಯಸ್ಕರ ಶಿಕ್ಷಣದ ನಿವೃತ್ತ ಜಂಟಿ ನಿರ್ದೇಶಕ ಎ ಎಂ ರಾಜಶೇಖರ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ನೋಡಲ್ ಅಧಿಕಾರಿಗಳು, ಸಮನ್ವಯಾಧಿಕಾರಿ, ಸದಸ್ಯರು ಸೇರಿದಂತೆ 21 ಮಂದಿಯನ್ನು ನಿಯೋಜಿಸಲಾಗಿದೆ. ಈ ಸಮಿತಿಯು ವಯಸ್ಕರ ಶಿಕ್ಷಣ ಪಠ್ಯಕ್ರಮ ರಚನೆಯ ಕಾರ್ಯ ಮಾಡಲಿದೆ.

Leave A Reply

Your email address will not be published.