ಖಾಕಿ ಅಂಗಿ ತೊಟ್ಟು, ಸ್ಟೇರಿಂಗ್ ಹಿಡಿದು ದಿನವಿಡೀ ರಸ್ತೆಯಲ್ಲಿ ಸಂಚಾರ !! | ವಿಚಿತ್ರವಾಗಿ ಓಡಾಡುತ್ತಾ ಜನರ ಗಮನ ಸೆಳೆವ ಯುವಕನ ಹಿಂದಿದೆ ಬಹುದೊಡ್ಡ ನೋವಿನ ಕಥೆ

ಜೀವನ ನಿಂತ ನೀರಲ್ಲ. ಅದು ಸದಾ ಹರಿಯುತ್ತಲೇ ಇರಬೇಕು. ಇದು ಪ್ರತಿಯೊಬ್ಬರ ಜೀವನಕ್ಕೆ ಅನ್ವಯವಾಗುವಂತಹದ್ದು. ಆದರೆ ನಾವು ಆಸೆಪಟ್ಟಿದ್ದೆಲ್ಲಾ ಜೀವನದಲ್ಲಿ ನಡೆಯದು. ಜೀವನ ಯಾವ ರೀತಿಯಲ್ಲಿ ಸಾಗುತ್ತದೆಯೋ ಆ ದಾರಿಯಲ್ಲಿ ಸಿಗುವ ಪ್ರತಿಯೊಂದು ಕ್ಷಣವನ್ನು ಖುಷಿಯಿಂದ ಸ್ವೀಕರಿಸಿ ಮುಂದುವರಿಯಬೇಕು. ಆದರೆ ಕೆಲವೊಬ್ಬರ ಜೀವನದಲ್ಲಿ ವಿಧಿ ತುಂಬಾ ಘೋರವಾಗಿರುತ್ತದೆ. ನಾವು ಖುಷಿಯಿಂದ ಜೀವಿಸಬೇಕು ಎಂದುಕೊಂಡರೂ, ಅದು ನಮ್ಮನ್ನು ನೋವಿನ ಕೂಪಕ್ಕೆ ತಳ್ಳುತ್ತದೆ. ಅಂತಹ ನೋವಿನ ಕಥೆ ಇಲ್ಲಿದೆ ನೋಡಿ.

ಈ ಕಥೆಯ ಕಥಾನಾಯಕ ಖಾಸಗಿ ಬಸ್ ನಲ್ಲಿ ಕ್ಲೀನರ್ ಆಗಿ ತನ್ನ ಜೀವನ ಸಾಗಿಸುತ್ತಿದ್ದ. ಕ್ಲೀನರ್ ಆಗಿದ್ದವ, ಮುಂದೆ ಅದೇ ಬಸ್‍ನ ಚಾಲಕನಾಗಬೇಕು ಎಂಬ ಆಸೆ ಹೊಂದಿದ್ದನು. ಆದರೆ ಆತನ ಜೀವನದಲ್ಲಿ ನಡೆದ ಒಂದು ಘಟನೆ ಆತನ ಜೀವನ ದಿಕ್ಕನ್ನೆ ಬದಲಾಯಿಸಿ ಬಿಟ್ಟಿದೆ.

ಹೌದು. ಮಂಜುನಾಥ್ ಎಂಬಾತ ಖಾಸಗಿ ಬಸ್‍ನಲ್ಲಿ ಕ್ಲೀನರ್ ಆಗಿದ್ದನು. ಮುಂದೆ ಅದೇ ಬಸ್‍ನ ಚಾಲಕನಾಗಬೇಕು ಎಂದು ಕನಸು ಕೂಡ ಕಂಡಿದ್ದನು. ಆದರೆ ಅಪಘಾತವೊಂದರಲ್ಲಿ ಗಾಯಗೊಂಡು ಮಾನಸಿಕ ಅಸ್ವಸ್ಥತೆಗೆ ತುತ್ತಾದನು. ಯುವಕ ಈಗಲೂ ತಾನು ಬಸ್ ಚಾಲಕ ಎಂಬಂತೆ ಪ್ರತಿದಿನ ಬಸ್‍ನ ಸ್ಟೇರಿಂಗ್, ವ್ಹೀಲ್‍ಗೆ ಪೂಜೆ ಪುನಸ್ಕಾರ ಮಾಡಿ ಪ್ರತಿ ದಿನ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ವಿಚಿತ್ರವಾಗಿ ವರ್ತನೆ ಮಾಡುತ್ತಾ ಬಸ್ ಚಾಲನೆ ಮಾಡುವವನಂತೆ ಓಡಾಡುತ್ತಿದ್ದಾನೆ.

ಮೇಲ್ನೋಟಕ್ಕೆ ನೋಡಲು ಆರೋಗ್ಯವಾಗಿರೋ ಯುವಕ ಪ್ರತಿ ದಿನ ಖಾಕಿ ಶರ್ಟ್ ಧರಿಸಿ, ಬೆಳಿಗ್ಗೆ ಹೂ ಇಟ್ಟು ಪೂಜೆ ಮಾಡಿ ಬಸ್ ಚಾಲನೆ ಮಾಡೋವವನ ತರ ಪ್ರಮುಖ ರಸ್ತೆಗಳಲ್ಲಿ ಓಡಾಡುತ್ತಿರುತ್ತಾನೆ. ಬಸ್‍ನ ಸ್ಟೇರಿಂಗ್ ವ್ಹೀಲ್‍ಗೆ ಮಿರರ್ ಹಾಗೂ ಹಾರ್ನ್ ಸಹ ಆಳವಡಿಕೆ ಮಾಡಿಕೊಂಡಿದ್ದಾನೆ. ಮಿರರ್ ಮೇಲೆ ಚಿಂತಾಮಣಿ-ಮುರಗಮಲ್ಲ-ಬೆಂಗಳೂರು ಮಾರ್ಗದ ಜಿ.ಆರ್ ಟ್ರಾವೆಲ್ಸ್ ಬಸ್ ಎಂದು ಹೆಸರು ಹಾಕಿಸಿಕೊಂಡಿದ್ದಾನೆ.

ಮುರಗಮಲ್ಲ ಕಡೆಯಿಂದ ಚಿಂತಾಮಣಿ ನಗರದ ಕಡೆಗೆ, ಕಾಲ್ನಡಿಗೆಯಲ್ಲಿ ಕೈಯಲ್ಲಿ ಸ್ಟೇರಿಂಗ್ ವ್ಹೀಲ್ ಹಿಡಿದು ಬಸ್ ಚಾಲನೆ ಮಾಡುವವನಂತೆ ನಟನೆ ಮಾಡುತ್ತಾನೆ. ಗೇರ್ ಬದಲಾಯಿಸೋದು, ನಿಲ್ದಾಣಗಳ ಬಳಿ ಬಂದು ಬ್ರೇಕ್ ಹಾಕಿ ಬಸ್ ನಿಲ್ಲಿಸೋದು, ಪ್ರಯಾಣಿಕರನ್ನು ಹತ್ತಿಸಿಕೊಳ್ಳುವಂತೆ ನಟನೆ ಮಾಡ್ತಾನೆ. ಚಿಂತಾಮಣಿ ನಗರದ ಪ್ರಮುಖ ರಸ್ತೆಗಳಲ್ಲಿ ಈ ಯುವಕ ವಿಚಿತ್ರವಾಗಿ ಓಡಾಡುತ್ತಾ ಜನರ ಗಮನ ಸೆಳೆಯುತ್ತಿದ್ದಾನೆ.

Leave A Reply

Your email address will not be published.