ಎರಡು ದಿನ ಇಡೀ ದೇಶ ವಿದ್ಯುತ್ ಇಲ್ಲದೆ ಕತ್ತಲಲ್ಲಿ ಮುಳುಗುವ ಸಾಧ್ಯತೆ !! | ಕಾರಣ !?

ಇಡೀ ದೇಶಾದ್ಯಂತ ಎರಡು ದಿನ ವಿದ್ಯುತ್ ಇಲ್ಲದೆ ಕತ್ತಲು ಆವರಿಸಲಿದೆ. ಇದಕ್ಕೆ ಕಾರಣ ವಿದ್ಯುತ್ ವಲಯದ ನೌಕರರ ಮುಷ್ಕರ. ಹೌದು. ಕೇಂದ್ರ ಸರ್ಕಾರದ ಖಾಸಗೀಕರಣ ನೀತಿಯನ್ನು ವಿರೋಧಿಸಿ ದೇಶಾದ್ಯಂತ ವಿದ್ಯುತ್ ವಲಯದ ನೌಕರರು ಮಾರ್ಚ್ 28 ಮತ್ತು 29 ರಂದು ಮುಷ್ಕರ ನಡೆಸಲು ನಿರ್ಧರಿಸಿದ್ದು, ಈ ಎರಡು ದಿನ ದೇಶಾದ್ಯಂತ ವಿದ್ಯುತ್ ಸಮಸ್ಯೆ ಎದುರಾಗಬಹುದು ಎಂದು ಹೇಳಲಾಗುತ್ತಿದೆ.

ಬುಧವಾರ ನಡೆದ ವಿದ್ಯುತ್ ನೌಕರರು ಮತ್ತು ಎಂಜಿನಿಯರ್‌ಗಳ ರಾಷ್ಟ್ರೀಯ ಸಮನ್ವಯ ಸಮಿತಿ (NCCOEEE)ಸಭೆಯಲ್ಲಿ ಈ ರಾಷ್ಟ್ರವ್ಯಾಪಿ ಮುಷ್ಕರದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಹಾಗಾಗಿಯೇ ಈ ಎರಡು ದಿನಗಳಲ್ಲಿ ದೇಶಾದ್ಯಂತ ವಿದ್ಯುತ್ ಸಮಸ್ಯೆ ಎದುರಾಗಬಹುದು.

ವಿದ್ಯುತ್ ನೌಕರರೊಂದಿಗೆ ದೇಶಾದ್ಯಂತ ಕಾರ್ಮಿಕ ಸಂಘಟನೆಗಳ ಕಾರ್ಮಿಕರು ಕೂಡ ಎರಡು ದಿನಗಳ ಕಾಲ ಮುಷ್ಕರ ನಡೆಸಲಿದ್ದಾರೆ. ಕೇಂದ್ರ ಸರ್ಕಾರದ ಖಾಸಗೀಕರಣ ನೀತಿ ವಿರೋಧಿಸಿ ಎಲ್ಲಾ ರಾಜ್ಯಗಳ ವಿದ್ಯುತ್ ನೌಕರರು ಕೂಡ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಆಲ್ ಇಂಡಿಯಾ ಪವರ್ ಎಂಜಿನಿಯರ್ಸ್ ಫೆಡರೇಶನ್ ಅಧ್ಯಕ್ಷ ಶೈಲೇಂದ್ರ ದುಬೆ ತಿಳಿಸಿದ್ದಾರೆ.

ಕೇಂದ್ರದ ಖಾಸಗೀಕರಣ ನೀತಿಯಿಂದ ನೌಕರರಲ್ಲಿ ನಿರಾಸೆ ಉಂಟಾಗಿದೆ ಎಂದು ಶೈಲೇಂದ್ರ ದುಬೆ ಹೇಳಿದ್ದಾರೆ. ವಿದ್ಯುತ್ (ತಿದ್ದುಪಡಿ) ಮಸೂದೆ 2021 ಹಿಂಪಡೆಯಬೇಕು ಮತ್ತು ಎಲ್ಲಾ ರೀತಿಯ ಖಾಸಗೀಕರಣ ಪ್ರಕ್ರಿಯೆಯನ್ನು ನಿಲ್ಲಿಸಬೇಕು ಎಂಬುದು ವಿದ್ಯುತ್ ನೌಕರರು ಮತ್ತು ಎಂಜಿನಿಯರ್‌ಗಳ ಪ್ರಮುಖ ಬೇಡಿಕೆಗಳಾಗಿವೆ. ಇದಲ್ಲದೇ ಕೇಂದ್ರಾಡಳಿತ ಪ್ರದೇಶಗಳಲ್ಲಿ ಅದರಲ್ಲೂ ಲಾಭ ಗಳಿಸುತ್ತಿರುವ ಚಂಡೀಗಢ, ದಾದ್ರಾ ನಗರ, ಹವೇಲಿ, ದಮನ್ ದಿಯು ಮತ್ತು ಪುದುಚೇರಿಯಲ್ಲಿ ವಿದ್ಯುತ್ ಖಾಸಗೀಕರಣ ಮಾಡುವ ನಿರ್ಧಾರವನ್ನು ತಕ್ಷಣವೇ ರದ್ದುಗೊಳಿಸಬೇಕು. ವಿದ್ಯುತ್ ಮಂಡಳಿಗಳ ವಿಸರ್ಜನೆಯ ನಂತರ ನೇಮಕಗೊಂಡ ಎಲ್ಲಾ ವಿದ್ಯುತ್ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯ ಲಾಭ ನೀಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ನೌಕರರು ಮುಷ್ಕರ ನಡೆಸುತ್ತಿದ್ದಾರೆ.

Leave A Reply

Your email address will not be published.