ವಿದ್ಯಾರ್ಥಿಗಳೇ ಗಮನಿಸಿ : ಇನ್ನು ಮುಂದೆ ಅಂಕಪಟ್ಟಿಯಲ್ಲಿಯೂ ಇರಲಿದೆ ಕ್ಯೂ ಆರ್ ಕೋಡ್ !

ಮಂಗಳೂರು: ಪದವಿ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ
ಹೊಸದಾದ ಬೆಳವಣಿಗೆಯೊಂದು ಬಂದಿದೆ. ಅದೇ ಕ್ಯು ಆರ್ ಕೋಡ್ . ರಾಜ್ಯದಲ್ಲೇ ಮೊದಲ ಬಾರಿಗೆ ಮಂಗಳೂರು ವಿಶ್ವವಿದ್ಯಾನಿಲಯವು ಈ ಕಾರ್ಯ ಮಾಡಿದೆ.

ಪದವಿ ವಿದ್ಯಾರ್ಥಿಗಳು ಸದ್ಯ ಪಡೆಯುತ್ತಿರುವ ಅಂಕಪಟ್ಟಿಯು ಕ್ಯುಆರ್ ಕೋಡ್ ನ್ನು ಒಳಗೊಂಡಿದೆ.

ಮುಂದೆ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿಯಲ್ಲಿ ಕೂಡಾ ಕ್ಯುಆರ್ ಕೋಡ್ ಜಾರಿಗೆ ಬರಲಿದೆ. ಅಂಕಪಟ್ಟಿಯ ಜತೆಗೆ ವಿದ್ಯಾರ್ಥಿಯ ಪದವಿ ಪ್ರದಾನ ಸರ್ಟಿಫಿಕೇಟ್‌ನಲ್ಲಿಯೂ ಕ್ಯುಆರ್ ಕೋಡ್ ಸಿಸ್ಟಮ್ ಜಾರಿಯಾಗಲಿದೆ. ಜತೆಗೆ ಸರ್ಟಿಫಿಕೇಟ್ ಹಾಗೂ ಡಿಪ್ಲೊಮಾ ಕೋರ್ಸ್ ಸರ್ಟಿಫಿಕೇಟ್‌ನಲ್ಲಿ ಮುಂದೆ ಇದನ್ನು ಕಾಣಬಹುದು. ಈ ಮೂಲಕ ಮೊದಲ ಬಾರಿಗೆ ಮಂಗಳೂರು ವಿ.ವಿ.ಯಲ್ಲಿ “ಬಾರ್‌ಕೋಡ್’ ಬದಲು ಭದ್ರತಾ ದೃಷ್ಟಿಯಿಂದ ಕ್ಯುಆರ್ ಕೋಡ್ ಜಾರಿಗೆ ಬಂದಿದೆ.

ಈ ಹಿಂದೆ ಅಂಕಪಟ್ಟಿಯಲ್ಲಿ ಬಾರ್‌ಕೋಡ್ ಡಿಸ್‌ಪ್ಲೇ ಆಗುತ್ತಿತ್ತು. ಅದರಲ್ಲಿ ವಿದ್ಯಾರ್ಥಿಯ ಕ್ರಮಸಂಖ್ಯೆ ಮಾತ್ರ ಇರುತ್ತಿತ್ತು. ಅದನ್ನು ಬಾರ್‌ಕೋಡ್ ಮೂಲಕವೇ ಪರಿಶೀಲಿಸ ಬಹುದಿತ್ತು. ಆದರೆ, ಕ್ಯುಆರ್ ಕೋಡ್‌ನಿಂದ ವಿದ್ಯಾರ್ಥಿಯ ಸಂಕ್ಷಿಪ್ತ ಮಾಹಿತಿಯನ್ನು ಮೊಬೈಲ್ ಮೂಲಕ ಪಡೆಯಲು ಸಾಧ್ಯ. ಮೊದಲ ಬಾರಿಗೆ ಅಂಕಪಟ್ಟಿಯನ್ನು ಮಂಗಳೂರು ವಿ.ವಿ. ವತಿಯಿಂದಲೇ ಮುದ್ರಿಸಲಾಗಿದೆ. ಭದ್ರತೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಜೊತೆಗೆ ಅಂಕಪಟ್ಟಿಯಲ್ಲಿ ಈ ಹಿಂದೆ ಪರೀಕ್ಷಾಂಗ ಕುಲಸಚಿವರು ಖುದ್ದು ಸಹಿ ಹಾಕುತ್ತಿದ್ದರು. ಆದರೆ ಮೊದಲ
ಬಾರಿಗೆ ಕಂಪ್ಯೂಟರೀಕೃತ ಸಹಿ ಇದೆ.

ಕ್ಯುಆರ್ ಕೋಡ್ ಅನ್ನು ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿದ ಅಂಶಗಳನ್ನು ಉದ್ಯೋಗ/ಇತರ ಸಂದರ್ಭದಲ್ಲಿ ವಿದ್ಯಾರ್ಥಿಯ ಅಂಕಪಟ್ಟಿಯ ಪರಿಶೀಲನೆ ಅಥವಾ ಆನ್‌ಲೈನ್ ಮುಖೇನ ಈ ಮಾಹಿತಿಯನ್ನು ಪರಿಶೀಲನೆ ಮಾಡಲು ಸಹಾಯಕವಾಗಲಿದೆ. ಒಂದು ವೇಳೆ ನಕಲು ಅಂಕಪಟ್ಟಿ ಆಗಿದ್ದರೆ ಕಂಡು ಹಿಡಿಯಬಹುದು‌.

ಅಂಕಪಟ್ಟಿಯಲ್ಲಿರುವ ಕ್ಯುಆರ್ ಕೋಡ್ ಅನ್ನು ಮೊಬೈಲ್‌ನಲ್ಲಿ ಸ್ಕ್ಯಾನ್ ಮಾಡಿದಾಗ ವಿದ್ಯಾರ್ಥಿಯ ಹೆಸರು, ಕಾಲೇಜು ಹೆಸರು, ವಿಭಾಗ, ಪರೀಕ್ಷೆಯಲ್ಲಿ ಬಂದ ಅಂಕ, ಗ್ರೇಡ್ ಪಾಯಿಂಟ್ಸ್ ಕಾಣಬಹುದು.

ರಾಜ್ಯದಲ್ಲಿಯೇ ಇದೇ ಮೊದಲ ಬಾರಿಗೆ ಪದವಿ ಅಂಕಪಟ್ಟಿಯಲ್ಲಿ
ಕ್ಯುಆರ್ ಕೋಡ್ ಕ್ರಮವನ್ನು ಮಂಗಳೂರು ವಿ.ವಿ.ಯು ಮಾಡಿದೆ. ಈ ಮೂಲಕ ವಿದ್ಯಾರ್ಥಿಯ ಅಂಕ ಒಳಗೊಂಡಂತೆ ಸಂಕ್ಷಿಪ್ತ ಮಾಹಿತಿಯನ್ನು ಮೊಬೈಲ್‌ನಲ್ಲಿ ಪರಿಶೀಲಿಸಲು ಸಾಧ್ಯವಿದೆ. ಈಗಾಗಲೇ ಬಹುತೇಕ ಕಾಲೇಜಿಗೆ ಅಂಕಪಟ್ಟಿ ವಿತರಿಸಲಾಗಿದೆ. ಅಂಕಪಟ್ಟಿಯ ಸಮಸ್ಯೆ ಇದ್ದರೆ ವಿ.ವಿ. ವೆಬ್‌ಸೈಟ್‌ನಲ್ಲಿರುವ ಇಮೈಲ್ ಮುಖೇನ ವಿ.ವಿ.ಯನ್ನು ಸಂಪರ್ಕಿಸಬಹುದು.

Leave A Reply

Your email address will not be published.