ರಾಜ್ಯ ಸರಕಾರದಿಂದ ಗುಡ್ ನ್ಯೂಸ್ : ವಾಸ್ತವ್ಯ ಪ್ರಮಾಣ ಪತ್ರ ಇಲ್ಲದವರಿಗೂ ಇನ್ನು ಮುಂದೆ ವಿದ್ಯುತ್ ಸಂಪರ್ಕ

ಬೆಂಗಳೂರು: ವಾಸ್ತವ್ಯ ಪ್ರಮಾಣ ಪತ್ರ (OC) ಇಲ್ಲದ ಕಾರಣಕ್ಕೆ ವಿದ್ಯುತ್ ಸಂಪರ್ಕ ನಿರಾಕರಿಸಲ್ಪಟ್ಟಿದ್ದ ಬೆಂಗಳೂರಿನ ನಾಗರಿಕರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿಯೊಂದನ್ನು ನೀಡಿದೆ. ಓಸಿ ಇಲ್ಲದವರಿಗೂ ವಿದ್ಯುತ್ ಸಂಪರ್ಕ ನೀಡಲು ಸರ್ಕಾರ ಮುಂದಾಗಿದೆ. ಸುಮಾರು ಐದು ಲಕ್ಷ ಜನರ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲು ನಿರ್ಧಾರ ಮಾಡಿದೆ. ನಿರ್ಮಾಣ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಲಾಗಿದೆ ಎಂಬ ಕಾರಣಕ್ಕೆ ಮನೆ, ವಸತಿ ಸಮುಚ್ಚಯಗಳಿಗೆ ಬಿಬಿಎಂಪಿಯಿಂದ ವಾಸ್ತವ್ಯ ಪ್ರಮಾಣ ಪತ್ರ ನಿರಾಕರಿಸಿದ್ದರೆ ಅಂತಹ ಮನೆ ಹಾಗೂ ಫ್ಲಾಟ್‌ಗಳಿಗೆ ನಿರಾಕರಿಸಲ್ಪಟ್ಟಿದ್ದ ವಿದ್ಯುತ್ ಸಂಪರ್ಕ ನೀಡಲಾಗುತ್ತದೆ.

ಇಂಧನ ಸಚಿವ ಸುನೀಲ್ ಕುಮಾರ್ ನಿಯಮ ಬದಲಾವಣೆ ಮಾಡುವಂತೆ ಮನವಿ ಸಲ್ಲಿಸಿದ್ದರು. ಬೆಂಗಳೂರಿನ ಬಿಜೆಪಿ ಶಾಸಕರು, ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಇಂಧನ ಸಚಿವ ಸುನೀಲ್ ಕುಮಾರ್ ಚರ್ಚೆ ನಡೆಸಿ, ವಾಸ್ತವ್ಯ ಪ್ರಮಾಣ ಪತ್ರ ಇಲ್ಲದೇ ಇರುವವರಿಗೂ ವಿದ್ಯುತ್ ಸಂಪರ್ಕ ನೀಡುವ ಪ್ರಸ್ತಾಪಕ್ಕೆ ಸಿಎಂ ಒಪ್ಪಿಗೆ ನೀಡಿದ್ದಾರೆ. ನಿನ್ನೆ ಸಂಬಂಧಪಟ್ಟ ಕಡತ ಕೆಇಆರ್‌ಸಿಗೆ ರವಾನೆ ಮಾಡಿದ್ದು, ಶೀಘ್ರದಲ್ಲೇ ರಾಜ್ಯ ಸರ್ಕಾರದ ಅಧಿಕೃತ ಆದೇಶ ಹೊರಬೀಳಲಿದೆ.

Leave A Reply

Your email address will not be published.