ಮಾಗಿದರೂ ಬೀಗದೆ ಬಾಗುವ ಕಲಾಚೇತನ – ಚೇತನ್ ರೈ ಮಾಣಿ

        ಮಾನವನ ಪ್ರಗತಿಯ ಬೆಳವಣಿಗೆ ಪೂರ್ವಾಹ್ನದ ನೆರಳಿನಂತಿರದೆ ಮಧ್ಯಾಹ್ನದ ನೆರಳಿನಂತಿರಬೇಕು ಎಂದು ದಾರ್ಶನಿಕರು ಅಭಿಪ್ರಾಯ ಪಡುತ್ತಾರೆ. ಪೂರ್ವಾಹ್ನದ ನೆರಳು ದೈತ್ಯಾಕಾರದಲ್ಲಿದ್ದರೂ ಸಮಯ ಸರಿದು ಮಧ್ಯಾಹ್ನವಾದಾಗ ಕಾಲಬುಡಕ್ಕೆ ಸ್ತಿಮಿತಗೊಳ್ಳುತ್ತದೆ. ಮಧ್ಯಾಹ್ನದ ನಂತರದ ನೆರಳು ಕಾಲಬುಡದಿಂದ ಬೆಳೆಯುತ್ತ  ಬೆಳೆಯುತ್ತ ಸಂಧ್ಯಾಕಾಲಕ್ಕೆ ವಿಶಾಲವಾಗಿ ವ್ಯಾಪಿಸುತ್ತದೆ. ಅರ್ಥಾತ್ ಶೂನ್ಯದಿಂದ ಮೇಲೆರಿ ಮಾನ್ಯರಾಗಬೇಕು. ಮೇಲೆರಿದಂತೆ ಬದುಕು ಕಲಿಸುವ ಪಾಠಗಳಿಂದ ಪರಿಪಕ್ವತೆಯನ್ನು ಪಡೆದು ಮಾಗಬೇಕು. ಮಾಗಿ ಬಾಗಬೇಕು. ಬೀಗಬಾರದು. ಮಾಗಿದಷ್ಟು ಬಾಗುತ್ತ ಹೋಗಿರುವ ಅನೇಕ ಸುಪ್ರಸಿದ್ಧ ವ್ಯಕ್ತಿಗಳ ಜೀವನಗಾಥೆ ನಮ್ಮ ಮುಂದೆ ಆದರ್ಶವಾಗಿ ನಿಲ್ಲುತ್ತದೆ. ತಮ್ಮ ನಿಷ್ಕೃಷ್ಟ 

ಪರಿಸ್ಥಿತಿಯಿಂದ ಉತ್ಕೃಷ್ಟ ಸ್ಥಿತಿಗೆ ಏರಿದವರಿದ್ದಾರೆ. ಅಭಿನಯ ಕಲೆಯನ್ನೇ ಉಸಿರಾಗಿ ಬಾಳಿ ಮೇರುಗಿರಿಯ ಶಿಖರದಲ್ಲಿ ಧ್ರುವ ನಕ್ಷತ್ರದಂತೆ ರಾರಾಜಿಸಿದ್ದವರಿದ್ದಾರೆ. ಜಗತ್ತಿನ ಜನರು ಎರಡು ಜಾಗತಿಕ ಯುದ್ಧಗಳಲ್ಲಿ ನಲುಗಿ, ಆರ್ಥಿಕ ಅಧಪತನದಿಂದಾಗಿ ಕನಲುತ್ತಿದ್ದಾಗ ಜಗತ್ತಿಗೆ ನಗಲು ಕಲಿಸಿದ್ದ, ಆಂಗ್ಲ ನಟ, ನಿರ್ದೇಶಕ, ನಿರ್ಮಾಪಕ, ಚಿತ್ರ ಸಂಭಾಷಣೆಗಾರ ಹಾಸ್ಯ ಚಕ್ರವರ್ತಿ ಚಾರ್ಲಿ ಚಾಪ್ಲಿನ್.


ಕನ್ನಡ ರಂಗಭೂಮಿಯ ನಾಯಕ, ಗಾಯಕ ಕಾಯಕದ ಜೊತೆಗೆ ನಾಟಕ ನಿರ್ದೇಶಕ, ನಾಟಕ ಕಂಪನಿಗಳ ಮಾಲೀಕ ಅಭಿನಯ ಚಕ್ರವರ್ತಿ ಏಣಗಿ ಬಾಳಪ್ಪನವರು. ಕನ್ನಡ ಚಲನಚಿತ್ರದ ನಾಯಕ, ಗಾಯಕ, ನಿರ್ಮಾಪಕ ವರನಟ ಡಾ. ರಾಜ್ ಕುಮಾರ್. ಇವರೆಲ್ಲ ತಮ್ಮ ವೈಯಕ್ತಿಕ ಬದುಕು ಹಾಗೂ ವೃತ್ತಿ ಬದುಕಿನಲ್ಲಿಯೂ ಮಾಗಿದರೂ ಬೀಗದೆ ಬಾಗಿದವರು. ತುಳು, ಕನ್ನಡ ರಂಗಭೂಮಿ, ಕಿರುತೆರೆ, ಬೆಳ್ಳಿತೆರೆ, ಯಕ್ಷಗಾನ ಕಲಾವಿದ ಚೇತನ್ ರೈ ಮಾಣಿ ಅವರ ವೃತ್ತಿ ಬದುಕು ಮತ್ತು ವೈಯುಕ್ತಿಕ ಬದುಕನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಾಗಿದಷ್ಟು ಬಾಗುವಿಕೆ ಕಂಡು ಬರುತ್ತದೆ. ಅವರೆಂದೂ ಬೀಗಿದವರಲ್ಲ. ಸಹ ಕಲಾವಿದರನ್ನೂ, ಸಹೃದಯ ಕಲಾಭಿಮಾನಿಗಳನ್ನೂ "ದೇವೆರೇ" ಎಂದೇ ಸಂಬೋಧಿಸಿ ಸಂಭಾಷಣೆಗೆ ತೊಡಗುತ್ತಾರೆ.
         ಪುತ್ತೂರು ಬೆಳ್ಳಿಪಾಡಿ ಮನೆತನದ ಸರ್ವತ್ತೋಡಿ ಶ್ರೀ ಸಂಕಪ್ಪ ರೈ ಹಾಗೂ ಕುದ್ರೆಪ್ಪಾಡಿ ಮನೆತನದ ದಿವಂಗತ ಭಾರ್ಗವಿ ರೈ ದಂಪತಿಗಳ ಜೇಷ್ಠ ಪುತ್ರ ಚೇತನ್ ರೈ. ಇವರು ಅಭಿನಯಿಸಿದ ನಾಟಕಗಳ ಸಂಖ್ಯೆ ಎಂಟು ಶತಕಗಳ ಗಡಿ ದಾಟಿದೆ. ಪ್ರದರ್ಶನಗಳ ಸಂಖ್ಯೆ ಆರು ಸಹಸ್ರವನ್ನು ಮೀರಿದೆ. ನಿರ್ದೇಶಿಸಿದ ನಾಟಕಗಳ ಸಂಖ್ಯೆ ನೂರೈವತ್ತಕ್ಕಿಂತಲೂ ಅಧಿಕ. 

ಬಾಲ್ಯದಿಂದಲೇ ಅಭಿನಯ ಕಲೆಯತ್ತ ವಾಲಿದವರು. ಮೂರನೆ ತರಗತಿಯಲ್ಲಿರುವಾಗ ಉಪ್ಪಳ ಕೃಷ್ಣ ಮಾಸ್ತರ್ ಅವರಿಂದ ಯಕ್ಷಗಾನದ ಹೆಜ್ಜೆಗಳನ್ನು ಕಲಿತು ಕಂಸನ ಪಾತ್ರ ನಿರ್ವಹಿಸಿದವರು. ಪೌರಾಣಿಕ ನಾಟಕ ಚಕ್ರವ್ಯೂಹದ ಅಭಿಮನ್ಯು, ಐತಿಹಾಸಿಕ ನಾಟಕದ ವೀರ ಶಿವಾಜಿಯ ಪಾತ್ರಗಳಿಗೆ ಜೀವತುಂಬಿ ಗುರುಗಳ, ಹಿರಿಯರ ಪ್ರಶಂಸೆಗೆ ಪಾತ್ರರಾದವರು. ಚೇತನ್ ರೈ ಅವರ ದೊಡ್ಡಪ್ಪ ರಾಮಣ್ಣ ರೈ ಪುತ್ತೂರು ನಾಟಕದ ಪ್ರೌಢ ಕಲಾವಿದರಾಗಿದ್ದವರು. ಅವರ ಸಲುಗೆ ಮತ್ತು ಪ್ರೇರಣೆಯಿಂದ ನಾಟಕಗಳಲ್ಲಿ ಅಭಿನಯಿಸ ತೊಡಗಿದವರು. ವರನಟ ಡಾ. ರಾಜ್ ಕುಮಾರ್ ಮತ್ತು ಖಳನಟ ವಜ್ರಮುನಿಯವರ ಅಭಿನಯವನ್ನು ಮೆಚ್ಚುವ ರೈ ಅವರು ಪ್ರತಿನಾಯಕನ ಪಾತ್ರಗಳನ್ನು ಹೆಚ್ಚು ಇಷ್ಟಪಟ್ಟು ಅಭಿನಯಿಸಿದವರು. ಊರಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಎಲ್ಲರಂತೆ ವಲಸಿಗರ ನಗರಿ ಮುಂಬೈಗೆ ಪಾದಾರ್ಪಣೆ ಮಾಡಿದವರು. ತುಳು ಕನ್ನಡ ರಂಗಭೂಮಿ ಸಕ್ರಿಯವಾಗಿರುವ ಮುಂಬೈಯಲ್ಲಿ ಅಭಿನಯ ಮಂಟಪ ಸಂಸ್ಥೆಯ ಪ್ರಮುಖ ಕಲಾವಿದರಲ್ಲಿ ಒಬ್ಬರಾಗಿ ಹಲವು ಚಾರಿತ್ರಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಕೋಟಿ ಚೆನ್ನಯದ ಪೆರುಮಳ ಬಲ್ಲಾಳ, ಕಲ್ಕುಡೆ ಕಲ್ಲುರ್ಟಿಯ ವೀರ ಶಂಬು ಕಲ್ಕುಡೆ, ಕೋಡ್ದಬ್ಬು ತನ್ನಿಮಾನಿಗದ ಬಬ್ಬುಸ್ವಾಮಿ ಪಾತ್ರಗಳು ನಾಟಕ ರಸಿಕರ ಮನ ರಂಜಿಸಿವೆ. ಮಾಯಾನಗರಿಯಲ್ಲಿ ತನಗೆ ಅರಿಯದಂತೆ ಒಳಸುಳಿಗಳಿಗೆ ಸಿಕ್ಕಿ ಭೂಗತ ಲೋಕದ ಬಾಗಿಲ ತನಕ ಪಯಣ ಬೆಳೆಸಿದವರು. ಸಮಾಜ ಬಾಂಧವರಾದ ಪೋಲೀಸ್ ಅಧಿಕಾರಿ ಪ್ರಕಾಶ್ ಭಂಡಾರಿಯವರ ಹಿತವಚನದಂತೆ ಮುಂಬೈಗೆ ನಮಿಸುತ್ತ ಶಾಶ್ವತವಾಗಿ ಊರಿಗೆ ಬಂದು ನೆಲೆನಿಂತವರು.

            ಮುಂಬೈಯಿಂದ ತನ್ನೂರಿಗೆ ಬಂದ ರೈಗಳು ಹಲವು ನಾಟಕ ತಂಡಗಳಲ್ಲಿ ಗುರುತಿಸಿಕೊಳ್ಳುತ್ತ ಅಭಿನಯಿಸತೊಡಗಿದರು. ಅದರಲ್ಲಿ ಮುಖ್ಯವಾಗಿ 

ಧರಿತ್ರಿ ಕಲಾವಿದೆರ್ ಮಂಗಳೂರು, ಮಹಾಲಕ್ಷ್ಮಿ ಕಲಾವಿದೆರ್ ಪುತ್ತೂರು, ನಮ್ಮ ಬೆದ್ರ ಕಲಾವಿದೆರ್ ಮೂಡಬಿದ್ರೆ, ವಿಜಯ ಕಲಾವಿದೆರ್ ಕಿನ್ನಿಗೋಳಿ ಮೊದಲಾದವುಗಳು. ಜಗದೀಶ್ ಶೆಟ್ಟಿ ಕೆಂಚನಕೆರೆ ಅವರುಗಳಂಥ ಶ್ರೇಷ್ಠ ನಿರ್ದೇಶಕರುಗಳ ಗರಡಿಯಲ್ಲಿ ಪಳಗುವ ಅವಕಾಶಗಳು ಪ್ರಾಪ್ತವಾದವು. ಬೈರಾಸ್ ಭಾಸ್ಕರೆ, ಬುದ್ದಿ ಬುಡಯೇ ಮುಂತಾದ ನಾಟಕಗಳ ಪಾತ್ರಗಳು ನಾಟಕ ರಸಿಕರ ಮನ ಸೂರೆಗೊಂಡವು. ಬುದ್ದಿ ಬುಡಯೇ ನಾಟಕದ ಪಾತ್ರದಲ್ಲಿ ಪರಕಾಯ ಪ್ರವೇಶಮಾಡಿ ತಾಳಿ ಕಿತ್ತುಕೊಳ್ಳುವ ಸನ್ನಿವೇಶವನ್ನು
ಅಭಿನಯಿಸುತ್ತಿರುವಾಗ ಪ್ರೇಕ್ಷಕರ ಸಾಲಿನಲ್ಲಿ ಕುಳಿತ್ತಿದ್ದ ಮಹಿಳೆಯೊಬ್ಬರು ಕಲ್ಲು ಬಿಸಾಡಿದ್ದರಂತೆ. ಈ ಪಾತ್ರಗಳ ಜನಪ್ರಿಯತೆಯಿಂದಾಗಿ ರೈ ಅವರಿಗೆ ರಂಗದಂಗಳವೇ ಬದುಕಾಯಿತು. ಅಭಿನಯವೇ ಕಾಯಕವಾಯಿತು.

      ದೈಹಿಕ ಸದೃಢತೆ, ಗಡುಸಾದ ಧ್ವನಿಯಿಂದಾಗಿ ಖಳನಾಯಕನ ಪಾತ್ರಗಳು ಹೆಚ್ಚು ಹೆಚ್ಚಾಗಿ ಸಿಗತೊಡಗಿದವು. ಕನ್ನಡ ಚಲನಚಿತ್ರ ಕಲಾವಿದರಾದ ವೈಜನಾಥ್ ಬಿರಾದರ್ ಅವರು ಹೇಳುವಂತೆ "ಪಾತ್ರ ಯಾವುದಾದರೇನು? ಜೀವ ತುಂಬಿ ನಟಿಸುವುದಷ್ಟೇ ನನ್ನ ಕಾಯಕ" ಎಂದು ನಂಬಿದ ಚೇತನ್ ರೈ ಅವರನ್ನು ಕಲಾದೇವಿ ಕೈಹಿಡಿದು ಸಲಹಿದಳು. ನಾಟಕದ ಖ್ಯಾತಿ ಮತ್ತು ಸರಳ ಸಜ್ಜನಿಕೆಯ ವ್ಯಕ್ತಿತ್ವದಿಂದಾಗಿ ಕನ್ನಡ ತುಳು ಎರಡೂ ಭಾಷೆಯ ಬೆಳ್ಳಿ ಪರದೆ ಹಾಗೂ ಕಿರುತೆರೆಗಳಲ್ಲೂ ವಿಶಿಷ್ಟವಾದ ಪಾತ್ರಗಳು ರೈ ಅವರನ್ನು ಹುಡುಕಿಕೊಂಡು ಬಂದವು. ಕೋಟಿ ಚೆನ್ನಯ -2 ಒರಿಯಡ್ದ್ ಒರಿ ಅಸಲ್, ಚಂಡಿ ಕೋರಿಲು, ಒರಿಯನ್ ತೂಂಡ ಒರಿಯಾಗಾಪುಜಿ, ಅರೆ ಮರ್ಲೆರ್, ಬರ್ಸ, ಚಾಲಿಪೋಲಿಲು, ಮದಿಮೆ, ಏರಾ ಉಲ್ಲೇರ್, ಮದಿಪು, ದೇವೆರ್, ದೇಯಿ ಬೈದೆದಿ, ಪತ್ತನಾಜೆ, ಜಬರ್ದಸ್ತ್ ಶಂಕರ್, ಮೈ ನೇಮ್ ಈಸ್ ಅಣ್ಣಪ್ಪೆ, ಉಮಿಲ್, ಐಸ್ ಕ್ರೀಂ ಮೊದಲಾದ ಹದಿನೇಳು ತುಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಚೇತನ್ ಮಂಡಾಡಿ ನಿರ್ದೇಶನದ 'ಮದಿಪು' ಚಿತ್ರಕ್ಕೆ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಅದರಲ್ಲಿ ಗುತ್ತಿನ ಗುರ್ಕಾರನ ಪಾತ್ರ ಚೇತನ್ ರೈ ಅವರದ್ದು. ಮನ್ಮಥ, ಬಣ್ಣದ ಬದುಕು, ರಂಗೋಲು, ಶ್ರೀಮೋಕ್ಷ, ಸಿಹಿಗಾಳಿ, ಒಂದು ಪ್ರೀತಿಯ ಕಥೆ, ಜರಾಸಂಧ, ಕೆಂಪೇಗೌಡ -2, ಕಬ್ಬಾಳಮ್ಮ ಮಹಾತ್ಮೆ, ಲುಂಗಿ, ಯೋಗಿ, ರಂಗಿನ ಹುಡುಗರು ಇತ್ಯಾದಿ ಅಭಿನಯಿಸಿದ ಕನ್ನಡ ಚಿತ್ರಗಳು. ಚಂದ್ರಹಾಸ ಆಳ್ವ ನಿರ್ದೇಶನದ ಕನ್ನಡ ಧಾರಾವಾಹಿಗಳಾದ ಕೋಟಿ ಚೆನ್ನಯದ ಬುದ್ದಿವಂತ ಉಲ್ಲಾಯೆ, ಕಟೀಲು ಶ್ರೀದೇವಿ ಚರಿತೆಯ ಅರುಣಾಸುರ ಪಾತ್ರಗಳಲ್ಲಿ ಮಿಂಚಿದ್ದಾರೆ. ಮಹಾಭಾರತ ಧಾರಾವಾಹಿಯ ದ್ರೋಣ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಕಿಚ್ಚು, ಪ್ರೀತಿ ಎಂಬ ಮಾಯೆ, ನಾಗಕನ್ನಿಕೆ ಅಭಿನಯಿಸಿದ ಕನ್ನಡ ಧಾರಾವಾಹಿಗಳು. ಗೊತ್ತಾನಗ ಪೊರ್ತಾಂಡ್, ಧರ್ಮ ಇತ್ತಿ ಮಣ್ಣ್ ತುಳು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 

    2020 ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಅಭಿನಯ ಮಂಟಪ ಮುಂಬಯಿ ಇವರ ಅಪ್ರಿಶಿಯೇಶನ್ ಪ್ರಶಸ್ತಿ, 2019ರಲ್ಲಿ ಕನ್ನಡ ನಾಡು ಸಂಸ್ಕೃತಿ ಸಮ್ಮೇಳನದಲ್ಲಿ ವರುಣ್ ಕಲಾರತ್ನ ಪ್ರಶಸ್ತಿ, ಹಾಗೂ ವರುಣ್ ಕಲಾ ತಿಲಕ ಎಂಬ ಬಿರುದು, 2015ರಲ್ಲಿ ಕರ್ನಾಟಕ ರಾಜ್ಯದ ಕಲಾಸಂಪದ ಪ್ರಶಸ್ತಿಗಳು ಲಭಿಸಿವೆ. 

ಶ್ರೀ ಗುರುದೇವದತ್ತ ಸಂಸ್ಥಾನಮ್ ಒಡಿಯೂರು ಇಲ್ಲಿಯ ಪರಮ ಪೂಜ್ಯ ಶ್ರೀಗಳು ಪ್ರತೀ ವರ್ಷ ಲಲಿತಪಂಚಮಿಯಂದು ಕೊಡುವ ಶ್ರೀದೇವಾನುಗ್ರಹ ಪ್ರಶಸ್ತಿ ಯೂ ಲಭಿಸಿದೆ.

ಪ್ರಸ್ತುತ ಪರಮಪದ್ಮ ಕಲಾವಿದರು ಸಸಿಹಿತ್ಲು ತಂಡದಲ್ಲಿ ಖಾಯಂ ಕಲಾವಿದನಾಗಿ ತಂಡದ “ಶಿವಪುರ್ಸಾದ ಬಬ್ಬರ್ಯೆ” ಎಂಬ ನಾಟಕದಲ್ಲಿ ಅಭಿನಯಿಸುತ್ತಿದ್ದಾರೆ. ವಿಜಯ ಕುಮಾರ್ ಕೊಡಿಯಾಲ್ ಬೈಲ್ ಇವರ ತಂಡದ ಶಿವದೂತೆ ಗುಳಿಗೆ ಎಂಬ ಸೂಪರ್ ಹಿಟ್ ನಾಟಕದಲ್ಲಿ ‘ಶಿವ’ ಮತ್ತು ‘ಬಬ್ಬುಸ್ವಾಮಿ’ ಪಾತ್ರಗಳಿಗೆ ಕಂಠ ದಾನ ಮಾಡಿದ್ದಾರೆ. ದೇವದಾಸ್ ಕಾಪಿಕಾಡ್ ನಿರ್ದೇಶನದ ಅಬತರ, ಹಾಗೂ ಪುರುಷೋತ್ತಮ ಪ್ರಸಂಗ ಚಿತ್ರಗಳು ತೆರೆಗರೇಲು ಸಿದ್ಧವಾಗಿವೆ. ಹೆಸರಾಂತ ನಿರ್ದೇಶಕ ಡಾ.ರಾಜೇಂದ್ರಸಿಂಗ್ ಬಾಬು ಇವರ ನಿರ್ದೇಶನ ದಲ್ಲಿ ಕನ್ನಡ ಹಾಗೂ ತುಳು ಭಾಷೆಯಲ್ಲಿ ಬರಲಿರುವ ಕಂಬಳ ಹಾಗೂ ತುಳುವಿನ ‘ಪಿಲಿ’ ಎಂಬ ಚಿತ್ರಗಳಿಗೆ ಚಿತ್ರೀಕರಣ ನಡೆಯುತ್ತಿದೆ.

     ಚೇತನ್ ರೈ ಮಾಣಿ ಅವರದ್ದು ಸುಖ ಸಂಸಾರ. ಮಡದಿ ಶ್ರೀಮತಿ ರಶ್ಮಿ ರೈ. ವೆನ್ಯ ಮತ್ತು ಮಾನ್ಯ ಎಂಬ ಇರ್ವರು ಸುಪುತ್ರಿಯರು. ರೈಗಳನ್ನು ಲೆಕ್ಕವಿಲ್ಲದಷ್ಟು ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಪತ್ರಿಕಾ ಮಾಧ್ಯಮ ಹಾಗೂ ಇಲೆಕ್ಟ್ರಾನಿಕ್ ಮಾಧ್ಯಮಗಳು ಗುರುತಿಸಿವೆ. ಕಲಾಭಿಮಾನಿಗಳು ಅಭಿಮಾನದಿಂದ ಕಲಾಶ್ರೀ, ಕಲಾ ಸಾಮ್ರಾಟ್, ಅಭಿನಯ ಭಾರ್ಗವ, ನಟಸಾರ್ವಭೌಮ ಮುಂತಾದ ಬಿರುದುಗಳನ್ನು ನೀಡಿ ಗೌರವಿಸಿದ್ದಾರೆ. ಎಷ್ಟೇ ಎತ್ತರಕ್ಕೇರಿದರೂ ತನಗಿಂತ ಕಿರಿಯರಿಲ್ಲ ಎಂದು ನಂಬಿ ವಿನಯದಿಂದ ಬಾಗುತ್ತಿರುವವರು ರೈಗಳು. ಕಲಾದೇವಿ ಅವರನ್ನು ಸದಾ ಹರಸುತ್ತಿರಲಿ.

ಲೇಖನ : ಉದಯ ಶೆಟ್ಟಿ, ಪಂಜಿಮಾರು.

Leave A Reply

Your email address will not be published.