ಮಾತು ಬಾರದ ಕಿವಿ ಕೇಳದ ಯುವಕನ ಬಾಳಿಗೆ ಆತನ ಧ್ವನಿಯಾಗಿ, ಕಿವಿಯಾಗಿ ಬಂದವಳು ಈ ಪದವೀಧರೆ ಯುವತಿ !

ಹುಟ್ಟಿನಿಂದಲೇ ಮಾತು ಬಾರದ ಕಿವಿಯೂ ಕೇಳದ ಯುವಕನೋರ್ವನ‌ ಬಾಳಿಗೆ ಮಾತಾಗಿ, ಆತನ ಕೇಳುಗಳಾಗಿ ಆತನ ಹೃದಯಕ್ಕೆ ಹೆಜ್ಜೆ ಇಟ್ಟು ಬಂದವಳೇ ಈ ಪದವೀಧರೆ ಯುವತಿ.

ಗದಗ ಜಿಲ್ಲೆ ನರಗುಂದ ಪಟ್ಟಣದ ದಂಡಾಪೂರ ಬಡಾವಣೆಯ ಲಾಲಮಹ್ಮದ್-ಆರೀಫಾಬಾನು ದಂಪತಿ ಪುತ್ರ ಮಹ್ಮದ್ ಸಾದಿಕ್ (25) ಹಾಗೂ ಗದಗಿನ ಗಂಗಿಮಡಿ ಬಡಾವಣೆಯ ಮಲಿಕ್‌ಸಾಬ್ -ಮಮತಾಜಬೇಗಂ ಪಲ್ಲೇದ ದಂಪತಿಯ ಸುಪುತ್ರಿ ಸುಮಯ್ಯಾ (22) ಜೋಡಿಯೇ ನವಜೀವನಕ್ಕೆ ಕಾಲಿಟ್ಟದ್ದು. ಈ ಜೋಡಿಗೆ ಶುಭಾಶಯಗಳ ಸುರಿಮಳೆಯೇ ಹರಿದು‌ ಬಂದಿದೆ.

ನರಗುಂದದ ವರ ಮಹ್ಮದ್ ಸಾದಿಕ್‌ಗೆ ಹುಟ್ಟಿನಿಂದಲೇ ಮಾತು ಬರುವುದಿಲ್ಲ. ಕಿವಿಯೂ ಕೇಳಿಸುವುದಿಲ್ಲ. ಒಳ್ಳೆಯ ಮನಸ್ಸಿದ್ದರೆ ಸಾಕು ಎಂಬ ಮನಸ್ಥಿತಿಯ ಸುಮಯ್ಯಾ, ತನ್ನ ಸ್ವಗೃಹ ಗದಗಿನ ಗಂಗಿಮಡಿ ನಿವಾಸದಲ್ಲಿ ಮುಸ್ಲಿಂ ಧರ್ಮದ ಸಂಪ್ರದಾಯದಂತೆ ಭಾನುವಾರ ಸರಳವಾಗಿ ವಿವಾಹವಾಗಿದ್ದಾರೆ.

ಸೋಮವಾರ ನರಗುಂದದಲ್ಲಿ ಏರ್ಪಾಟಾಗಿದ್ದ ವಲೀಮಾ ಕಾರ್ಯಕ್ರಮಕ್ಕೆ ನೆಂಟರು, ಕುಟುಂಬದವರು, ಸ್ನೇಹಿತರು ಬಂದು ಶುಭ ಹಾರೈಸಿದರು. ಈ ನವ ಜೋಡಿಗಳ ಮದುವೆಯಲ್ಲಿ ವರನ ಕಡೆಯ ಮೂಕ ಮತ್ತು ಕಿವುಡ ಸ್ನೇಹಿತರು ಆಗಮಿಸಿ ಹೃದಯ ತುಂಬಿ ಶುಭ ಕೋರಿದ ದೃಶ್ಯ ಎಲ್ಲರನ್ನೂ ಭಾವುಕರನ್ನಾಗಿಸಿತು.

ಮಹ್ಮದ್ ಸಾದಿಕ್ ನರೇಗಲ್ಲನ ಶ್ರೀ ಅನ್ನದಾನೇಶ್ವರ ಕಿವುಡ ಮತ್ತು ಮೂಕರ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪೊರೈಸಿ, ನಂತರ ಮೈಸೂರಿನ ಜೆಎಸ್ಎಸ್ ಕಾಲೇಜ್‌ನಲ್ಲಿ ಪಿಯುಸಿ ಮುಗಿಸಿ, ಆಟೋ ಇಲೆಕ್ಟ್ರಿಷಿಯನ್ ಆಗಿ ಸ್ವಂತ ಕೆಲಸ ಮಾಡುತ್ತಿದ್ದಾರೆ. ದೂರದ ಸಂಬಂಧಿಯಾಗಿರುವ
ವಧು ಸುಮಯ್ಯಾ ನರಗುಂದದ ಶ್ರೀ ಶಾರದಾಂಬಾ ಶಾಲೆಯಲ್ಲಿ 1 ರಿಂದ 10ನೇ ತರಗತಿ ಪೊರೈಸಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಲಾ ಶಿಕ್ಷಣ, ಶ್ರೀ ಸಿದ್ಧೇಶ್ವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ. ಎರಡೂ ಕುಟುಂಬದವರ ಒಪ್ಪಿಗೆ ಮೇರೆಗೆ ವಿವಾಹ ಕಾರ್ಯಕ್ರಮ ನಿರ್ವಿಘ್ನವಿಲ್ಲದೇ ನೆರವೇರಿದೆ.

Leave A Reply