ವಿಶ್ವದ ಅತಿದೊಡ್ಡ ಹಿಂದೂ ದೇವಾಲಯ ನಿರ್ಮಾಣಕ್ಕಾಗಿ ಭೂಮಿ ದಾನ ಮಾಡಿದ ಮುಸ್ಲಿಂ ಕುಟುಂಬ !! | 2.5 ಕೋಟಿ ಮೌಲ್ಯದ ಜಾಗ ನೀಡಿ ಕೋಮು ಸೌಹಾರ್ದತೆ ಮೆರೆದ ಉದ್ಯಮಿ

ದೇಶದಲ್ಲಿ ಕೆಲವೊಮ್ಮೆ ಕೋಮು ಸೌಹಾರ್ದತೆಯ ಘಟನೆಗಳು ನಡೆಯುತ್ತಿರುತ್ತವೆ. ಅಂತೆಯೇ ಇದಕ್ಕೆ ಉದಾಹರಣೆಯಾಗಿ, ಬಿಹಾರದ ಮುಸ್ಲಿಂ ಕುಟುಂಬವೊಂದು ವಿಶ್ವದ ಅತಿದೊಡ್ಡ ಹಿಂದೂ ದೇವಾಲಯ – ವಿರಾಟ್ ರಾಮಾಯಣ ಮಂದಿರ ನಿರ್ಮಾಣಕ್ಕಾಗಿ ರೂ.2.5 ಕೋಟಿ ಮೌಲ್ಯದ ಭೂಮಿಯನ್ನು ದಾನ ಮಾಡಿದೆ.

ರಾಜ್ಯದ ಪೂರ್ವ ಚಂಪಾರಣ್ ಜಿಲ್ಲೆಯ ಕೈತ್ವಾಲಿಯಾ ಪ್ರದೇಶದಲ್ಲಿ ವಿಶ್ವದ ಅತಿದೊಡ್ಡ ಹಿಂದೂ ದೇವಾಲಯ ನಿರ್ಮಾಣವಾಗಲಿದ್ದು, ಅದಕ್ಕೆ ಮುಸ್ಲಿಂ ಕುಟುಂಬ ಭೂಮಿ ನೀಡಿರುವುದು ತುಂಬ ವಿಶೇಷವಾಗಿದೆ.

ಹಿಂದೂ ದೇಗುಲ ನಿರ್ಮಾಣದ ಯೋಜನೆ ಕೈಗೆತ್ತಿಕೊಂಡಿರುವ ಪಾಟ್ನಾ ಮೂಲದ ಮಹಾವೀರ ಟ್ರಸ್ಟ್​ ಮುಖ್ಯಸ್ಥ, ಮಾಜಿ ಐಪಿಎಸ್ ಅಧಿಕಾರಿಯಾಗಿರುವ ಆಚಾರ್ಯ ಕಿಶೋರ್​ ಕುನಾಲ್​​ ಮಾತನಾಡಿ, ದೇವಸ್ಥಾನ ನಿರ್ಮಾಣಕ್ಕೆ ಇಶ್ತಿಯಾಕ್ ಅಹ್ಮದ್ ಖಾನ್ ಎಂಬುವರು ಭೂಮಿಯನ್ನು ದಾನ ಮಾಡಿದ್ದಾರೆ. ಇವರು ಗುವಾಹಟಿ ಮೂಲದವರಾಗಿದ್ದು, ಪೂರ್ವ ಚಂಪಾರಣ್ಯದಲ್ಲಿ ಉದ್ಯಮಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ದೇಗುಲ ನಿರ್ಮಾಣಕ್ಕೆ ಇಶ್ತಿಯಾಕ್ ರೂ.2.5 ಕೋಟಿ ಮೌಲ್ಯದ ಭೂಮಿಯನ್ನು ದಾನವಾಗಿ ಕೊಟ್ಟಿದ್ದು, ನೋಂದಣಿ ಪ್ರಕ್ರಿಯೆ ಪೂರ್ವ ಚಂಪಾರಣ್ಯದ ಕೆಶಾರಿಯಾ ಸಬ್​ ಉಪವಿಭಾಗ ಕಚೇರಿಯಲ್ಲಿ ಪೂರ್ಣಗೊಂಡಿದೆ. ಖಾನ್ ಮತ್ತು ಅವರ ಕುಟುಂಬದವರ ಈ ದೇಣಿಗೆಯು ಎರಡು ಸಮುದಾಯಗಳ ನಡುವಿನ ಸಾಮಾಜಿಕ ಸಾಮರಸ್ಯ ಮತ್ತು ಸಹೋದರತ್ವಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ಆಚಾರ್ಯ ಹೇಳಿದ್ದಾರೆ

ಮುಸ್ಲಿಮರ ಸಹಾಯವಿಲ್ಲದಿದ್ದರೆ ಈ ಕನಸಿನ ಯೋಜನೆ ಸಾಕಾರಗೊಳ್ಳುವುದು ಕಷ್ಟಸಾಧ್ಯ. ಮಹಾವೀರ ಮಂದಿರ ಟ್ರಸ್ಟ್ ಈ ದೇವಸ್ಥಾನ ನಿರ್ಮಾಣಕ್ಕಾಗಿ ಇದುವರೆಗೆ 125 ಎಕರೆ ಭೂಮಿಯನ್ನು ಪಡೆದುಕೊಂಡಿದೆ. ಟ್ರಸ್ಟ್ ಶೀಘ್ರದಲ್ಲೇ ಈ ಪ್ರದೇಶದಲ್ಲಿ ಇನ್ನೂ 25 ಎಕರೆ ಭೂಮಿಯನ್ನು ಪಡೆಯಲಿದೆ ಎಂದು ಮಾಹಿತಿ ನೀಡಿದರು

ಒಟ್ಟು 125 ಎಕರೆ ಪ್ರದೇಶದಲ್ಲಿ ಭವ್ಯವಾದ ರಾಮಾಯಣ ಮಂದಿರ ನಿರ್ಮಾಣ ಮಾಡಲಾಗುತ್ತಿದೆ. ಮಂದಿರದ ಸಂಕೀರ್ಣದಲ್ಲಿ ಒಟ್ಟು 18 ದೇಗುಲಗಳು ಇರಲಿವೆ. ಇಲ್ಲಿ ವಿಶ್ವದ ಅತ್ಯಂತ ದೊಡ್ಡ ಶಿವಲಿಂಗ ಸ್ಥಾಪನೆ ಆಗಲಿದೆ.

Leave A Reply

Your email address will not be published.