ಬೆಳ್ತಂಗಡಿ: ರಾತ್ರೋ ರಾತ್ರಿ ವೇಣೂರು ಅರಣ್ಯ ಪ್ರದೇಶದಲ್ಲಿ ಪೊಲೀಸರ ಮೇಲೆಯೇ ನಡೆದಿತ್ತಾ ಫೈರಿಂಗ್!! ಗಾಂಜಾ ಸಾಗಾಟದ ಆರೋಪಿಗಳನ್ನು ಕರೆತಂದ ಪೊಲೀಸರು ಕದ್ದುಮುಚ್ಚಿ ಮಾರಿಬಿಟ್ರು ರಕ್ತಚಂದನ!

ಬೆಳ್ತಂಗಡಿ: ತಾಲೂಕಿನ ವೇಣೂರು ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆಯ ಸಂದರ್ಭ ಪೊಲೀಸರ ಮೇಲೆಯೇ ಫೈರಿಂಗ್ ನಡೆಸಲಾಗಿದೆ ಹಾಗೂ ಆರೋಪಿಗಳಿಂದ ವಶಪಡಿಸಿಕೊಂಡ ಮಾಲುಗಳನ್ನು ಪೊಲೀಸರೇ ಕದ್ದು ಮಾರಾಟ ನಡೆಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.

ಕಳೆದ ಅಕ್ಟೋಬರ್ ತಿಂಗಳಲ್ಲಿ ಈ ಘಟನೆ ನಡೆದಿದ್ದು, ಬೆಂಗಳೂರಿನ ರಾಮಮೂರ್ತಿ ಠಾಣೆಯ ಪೊಲೀಸರು ಗಾಂಜಾ ಮಾರಾಟ ಪ್ರಕರಣದ ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ವೇಣೂರಿನ ಅರಣ್ಯ ಪ್ರದೇಶದಲ್ಲಿ ಬಂಧಿಸಲು ತೆರಳಿದ್ದಾಗ ಓರ್ವ ಆರೋಪಿ ಪೊಲೀಸರ ಮೇಲೆಯೇ ಗುಂಡು ಹಾರಿಸಿ ತಪ್ಪಿಸಿಕೊಂಡಿದ್ದ ಎನ್ನುವ ಮಾತು ಕೇಳಿ ಬಂದಿತ್ತು. ಅದಲ್ಲದೇ ಗಾಂಜಾ ಜೊತೆಗೆ ರಕ್ತಚಂದನದ ತುಂಡುಗಳು ಪತ್ತೆಯಾಗಿದ್ದು, ಇವುಗಳನ್ನು ಪೊಲೀಸರೇ ಕದ್ದು ಮಾರಿದ್ದಾರೆ ಎನ್ನುವ ಆರೋಪ ಪೊಲೀಸರಾ ಮೇಲೆ ಬಂದಿದ್ದು ತನಿಖೆ ಮುಂದುವರಿದಿದೆ.

ಘಟನೆ ವಿವರ: ಕಳೆದ ವರ್ಷ ಅಂದರೆ 2021ರ ಅಕ್ಟೋಬರ್ 10 ರ ರಾತ್ರಿ ಖಾಸಗಿ ಕಾರೊಂದರಲ್ಲ ಬೆಂಗಳೂರು ಪೊಲೀಸರು ಗಾಂಜಾ ಸಾಗಾಟ ಪ್ರಕರಣದ ಆರೋಪಿಗಳನ್ನು ಬಂಧಿಸಲು ಬೆಳ್ತಂಗಡಿ ತಾಲೂಕಿನ ವೇಣೂರಿಗೆ ಆಗಮಿಸಿದ್ದು, ಈ ವೇಳೆ ಆರೋಪಿಗಳ ಬಳಿ ಬ್ಯಾಗ್ ಹಾಗೂ 16 ತುಂಡು ರಕ್ತ ಚಂದನ ಪತ್ತೆಯಾಗಿತ್ತು. ಕಾರ್ಯಾಚರಣೆಯ ಸಂದರ್ಭ ಆರೋಪಿಗಳಲ್ಲಿ ಓರ್ವ ಪೊಲೀಸರ ಮೇಲೆ ಫೈರಿಂಗ್ ನಡೆಸಿದ್ದು, ಆರೋಪಿಗಳು ಕಾಡಿನಲ್ಲಿ ಮರೆಯಾಗುವುದರೊಂದಿಗೆ ಪೊಲೀಸರು ಕೂಡಾ ಆ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಮಾರನೇ ದಿನ ಠಾಣೆಗೆ ಬಂದು 16 ತುಂಡು ರಕ್ತಚಂದನ ಹಾಗೂ 750 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ದಾಖಲೆ ಸೃಷ್ಟಿಸಿದ್ದು, ಎಫ್.ಐ.ಆರ್ ನಲ್ಲಿ 160 ಕೆಜಿ ರಕ್ತ ಚಂದನ ಎಂದು ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ವ್ಯಕ್ತಿಯೊಬ್ಬರು ಪೊಲೀಸರ ತನಿಖೆಯಲ್ಲಿ ಲೋಪವಿದೆ ಎಂದು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಸದ್ಯ ಸಮಗ್ರ ತನಿಖೆಗೆ ಆದೇಶ ಹೊರಡಿಸಲಾಗಿದೆ.

Leave A Reply

Your email address will not be published.