ರಾತ್ರಿ ಪಾಳಯದ ಕೆಲಸ ಮುಗಿಸಿ 10 ಕಿ.ಮೀ.ಓಡುತ್ತಲೇ ಮನೆ ಸೇರೋ 19 ರ ಯುವಕ| ಈತ ಈ ರೀತಿ ಮಾಡಲು ಕಾರಣವೇನು?

ಆ ಹುಡುಗನ ಕಣ್ಣಲ್ಲಿ ಛಲ ಇದೆ. ಸಾಧಿಸಿ ತೋರಿಸಬೇಕೆಂದು ಹಠ ಇದೆ. ಇದಕ್ಕಾಗಿ ಅವಿರತ ಪ್ರಯತ್ನ ಮಾಡುತ್ತಲೇ ಇದ್ದಾನೆ. ಕೆಲಸ ಮುಗಿಸಿ ಮಧ್ಯರಾತ್ರಿ 10 ಕಿ.ಮೀ ಓಟ, ಬಳಿಕ ಅಡುಗೆ ಮಾಡಿ ಸಹೋದರನ ಜೊತೆ ಊಟ..ಮನೆಯಲ್ಲಿ ತಾಯಿ ಅನಾರೋಗ್ಯ, ಬದುಕ ಸಾಗಿಸಬೇಕು, ಜೊತೆಗೆ ಬಹುದೊಡ್ಡ ಕನಸು ಈಡೇರಿಸಬೇಕು. ಇದಕ್ಕಾಗಿ ಈ ಓಟ. ಇದೇನು ಕಥೆ ಅಂತಾ ಕೇಳ್ತಾ ಇದ್ದೀರಾ? ಇಲ್ಲಿದೆ ಈ ಹುಡುಗನ ಸ್ಪೂರ್ತಿಯ ಚಿಲುಮೆ ತುಂಬಿದ ವೀಡಿಯೋ.

ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಪ್ರದೀಪ್ ಮೆಹ್ರಾ ಎಂಬ ಯುವಕ ಓಟದ ನಿಜಜೀವನದ ಕಥೆ.

ಸಾಮಾಜಿಕ ಜಾಲತಾಣದಲ್ಲಿ ಪ್ರದೀಪ್ ಮೆಹ್ರಾ ಯುವಕನ ವಿಡಿಯೋ ಭಾರಿ ವೈರಲ್ ಆಗಿದೆ. ಇದ್ದಕ್ಕಿದ್ದಂತೆ 19ರ ಹರೆಯದ ಈ ಪ್ರದೀಪ್ ಮೆಹ್ರಾ ದೇಶದ ಸ್ಫೂರ್ತಿ ಚಿಲುಮೆಯಾಗಿ ಹೊರಹೊಮ್ಮಿದ್ದಾರೆ. ಈ ವೀಡಿಯೋವನ್ನು ಎಲ್ಲರೂ ಹಂಚಿಕೊಳ್ಳುತ್ತಿದ್ದಾರೆ.

ನೋಯ್ಡಾದಲ್ಲಿ ಮೆಕ್‌ಡೋನಾಲ್ಡ್‌ನಲ್ಲಿ ಅಡುಗೆ ಕೆಲಸ ಮಾಡುವ ಪ್ರದೀಪ್ ಮೆಹ್ರಾ ಕೆಲಸ ಮುಗಿಸಿ ಮಧ್ಯರಾತ್ರಿ ಬರೋಬ್ಬರಿ 10 ಕಿಲೋಮೀಟರ್ ಓಡುತ್ತಲೇ ಮನೆ ಸೇರುತ್ತಾನೆ. ಇದಕ್ಕೆ ಕಾರಣ, ಭಾರತೀಯ ಸೇನೆ ಸೇರಿಕೊಳ್ಳಲು ಈತ ಮಾಡುವ ಕಠಿಣ ಅಭ್ಯಾಸ.

ಬರೋಲಾದಲ್ಲಿ ಸಹೋದರನ ಜೊತೆ ವಾಸವಿರುವ ಪ್ರದೀಪ್ ಮೆಹ್ರಾ, ಕೆಲಸ ಮುಗಿಸಿ ಅದಷ್ಟು ಬೇಗ ಮನೆ ಸೇರಿಕೊಂಡು ಅಡುಗೆ ಮಾಡಿ ಸಹೋದರನಿಗೆ ನೀಡುತ್ತಾನೆ. ಅತ್ತ ಸಹೋದರನಿಗೆ ರಾತ್ರಿ ಪಾಳಿಯಲ್ಲಿ ಕೆಲಸ. ಈತನ ತಾಯಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದಾರೆ. ಹೀಗಾಗಿ ಇಡೀ ಕಟುಂಬದ ಜವಾಬ್ದಾರಿ ಈ ಪ್ರದೀಪ್ ಮೆಹ್ರಾ ಹಾಗೂ ಸಹೋದರನ ಮೇಲಿದೆ.

ಭಾರತೀಯ ಸೇನೆ ಸೇರಲು ಫಿಟ್ನೆಸ್ ಇರಬೇಕು. ಆದರೆ ಈ ಹುಡುಗನಿಗೆ ಅದಕ್ಕಾಗಿ ಜಿಮ್, ಬೆಳಗ್ಗೆ ವ್ಯಾಯಾಮ, ಜಾಗಿಂಗ್ ಹೋಗಲು ಸಮಯವಿಲ್ಲ. ಕಾರಣ ಮಧ್ಯರಾತ್ರಿ ವರೆಗೂ ಕೆಲಸ, ಬೆಳಗ್ಗೆ ಬೇಗನೆ ಮತ್ತೆ ಹೆಚ್ಚುವರಿ ಸಮಯದ ಕೆಲಸ. ಈ ಮೂಲಕ ಸಿಗುವ ವೇತನದಲ್ಲಿ ತಾಯಿ ಆರೋಗ್ಯ ನೋಡಿಕೊಳ್ಳುಬೇಕು, ಮನೆ ಖರ್ಚು ಎಲ್ಲವೂ ಸಾಗಬೇಕು. ಇದಕ್ಕಾಗಿ ಕೆಲಸ ಮುಗಿಸಿ ಮನೆಗೆ ಓಡುತ್ತಲೇ ಹಿಂತಿರುಗುತ್ತಾನೆ. ನಗರದ ರಸ್ತೆಗಳಲ್ಲಿ 10 ಕಿ.ಮೀ ಓಡುತ್ತಲೇ ಭಾರತೀಯ ಸೇನೆ ಸೇರಿಕೊಳ್ಳಲು ತಯಾರಿ ನಡೆಸುತ್ತಿದ್ದಾನೆ. ಇದು ಈತನ ದಿನಚರಿ, ಕಾರ್ಯವೈಖರಿ, ಸಾಧನೆಯ ಗುರಿ ತಲುಪಲು ಒಂದು ಮೆಟ್ಟಿಲು.

ಮೂಲತಃ ಉತ್ತರಖಂಡದ ಅಲೋರಾದ ಪ್ರದೀಪ್ ಮೆಹ್ರಾ ಅತೀ ದೊಡ್ಡ ಕನಸು ಇಟ್ಟುಕೊಂಡಿದ್ದಾನೆ. ಇದಕ್ಕೆ ಪ್ರದೀಪ್ ಮೆಹ್ರಾ ಸಹೋದರನ ಮನೆಯಲ್ಲಿದ್ದಾನೆ. ಆತ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಾನೆ. ಹೀಗಾಗಿ ನಾನು ಮನೆಗೆ ತೆರಳಬೇಕಿದೆ ಎಂದಿದ್ದಾನೆ. ಇಷ್ಟೇ ಅಲ್ಲ ಈ ವಿಡಿಯೋ ವೈರಲ್ ಆಗಲಿದೆ ಎಂದಾಗ, ಆಗಲಿ ನಾನೇನು ತಪ್ಪು ಕೆಲಸ ಮಾಡುತ್ತಿಲ್ಲ ಎಂದು ನಗುತ್ತಲೇ ಉತ್ತರ ಕೂಡಾ ನೀಡಿದ್ದಾನೆ.

ನಾನು ಮನೆಗೆ ಡ್ರಾಪ್ ಮಾಡುವುದಾಗಿ ಹೇಳಿದ ತಕ್ಷಣವೇ, ಸಾಧ್ಯವಿಲ್ಲ ಇದು ನನ್ನ ಪ್ರತಿ ದಿನದ ಅಭ್ಯಾಸ. ಇಂದು ಕಾರಿನಲ್ಲಿ ತೆರಳಿದರೆ ಅಭ್ಯಾಸಕ್ಕೆ ತಡೆಯಾಗುತ್ತದೆ ಎಂದು ಹೇಳಿದ್ದಾನೆ.

ವಿಡಿಯೋವನ್ನು ಇದೀಗ ಬಹುತೇಕರು ಹಂಚಿಕೊಳ್ಳುತ್ತಿದ್ದಾರೆ. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಕೂಡ ಈ ವಿಡಿಯೋ ಹಂಚಿಕೊಂಡಿದ್ದು, ದೇಶಕ್ಕೆ ಸ್ಫೂರ್ತಿ ಎಂದಿದ್ದಾರೆ. ಈ ವಿಡಿಯೋ ಕೇವಲ 4 ಗಂಟೆಯಲ್ಲಿ 13 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದ್ದು ಎಲ್ಲರಿಂದ ಮೆಚ್ಚುಗೆ ಪಡೆದುಕೊಂಡಿದೆ.

ಪ್ರದೀಪ್ ಮೆಹ್ರಾ ಈ ರೀತಿ ಓಡುತ್ತಿರುವುದನ್ನು ಗಮನಿಸಿದ ಕಾರಿನಲ್ಲಿ ಬಂದ ದಾರಿಹೋಕರು, ಈತನನ್ನು ಪ್ರಶ್ನೆ ಮಾಡಿದ್ದಾರೆ. ಈ ರೀತಿ ಓಡುತ್ತಿರುವುದು ಯಾಕೆ? ಕಾರಿನಲ್ಲಿ ಮನೆಗೆ ಬಿಡುವುದಾಗಿ ಹಲವು ಬಾರಿ ಹೇಳಿದರೂ, ಆದರೆ ಇದು ನನ್ನ ಅಭ್ಯಾಸ, ಸೇನೆ ಸೇರಿಕೊಳ್ಳಲು ನಾನು ಮಾಡುತ್ತಿರುವ ಅಭ್ಯಾಸವಾಗಿದೆ. ಇದಕ್ಕಾಗಿ ಬೇರೆ ಸಮಯ ನನ್ನ ಬಳಿ ಇಲ್ಲ ಎಂದು ಉತ್ತರಿಸಿದ್ದಾನೆ. ಓಡುತ್ತಲೇ ಉತ್ತರ ನೀಡಿದ್ದಾನೆ. ಈ ಹುಡುಗನ ಛಲಕ್ಕೆ ನಮ್ಮದೊಂದು ಸಲಾಂ.

ನೀವು ನೋಡಲೇಬೇಕಾದ ವೀಡಿಯೋ ಲಿಂಕ್ ಈ ಕೆಳಗೆ ನೀಡಲಾಗಿದೆ.

Leave A Reply

Your email address will not be published.