ಯುದ್ಧಪೀಡಿತ ಉಕ್ರೇನ್ ನಿಂದ ಮರಳಿದ 700ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ರಾಜ್ಯದ ಮೆಡಿಕಲ್ ಕಾಲೇಜಿನಲ್ಲಿ ಉಚಿತ ಕಲಿಕಾ ಅವಕಾಶ- ಸಚಿವ ಡಾ.ಕೆ.ಸುಧಾಕರ್

0 9

ಬೆಂಗಳೂರು: ಉಕ್ರೇನ್‌ನಿಂದ ರಾಜ್ಯಕ್ಕೆ ವಾಪಸ್ ಆಗಿರುವ ವೈದ್ಯಕೀಯ ವಿದ್ಯಾರ್ಥಿಗಳ ಶಿಕ್ಷಣವನ್ನು ಮುಂದುವರಿಯುವ ನಿಟ್ಟಿನಲ್ಲಿ ವೈದ್ಯಕೀಯ ಕಾಲೇಜುಗಳಲ್ಲಿ ಅವಕಾಶ ಮಾಡಿಕೊಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಆರೋಗ್ಯ ಸಚಿವ ಉಕ್ರೇನ್‌ನಿಂದ ವಾಪಸ್ ಆದ ವಿದ್ಯಾರ್ಥಿಗಳ ಜೊತೆ ಸಮಾಲೋಚನೆ ನಡೆಸಿ ನಂತರ ವಿದ್ಯಾರ್ಥಿಗಳಿಂದ ಸಲಹೆ, ಅಭಿಪ್ರಾಯಗಳನ್ನು ಪಡೆದುಕೊಂಡರು. ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಶೈಕ್ಷಣಿಕ ವಿಚಾರವಾಗಿ ಚರ್ಚೆ ನಡೆದಿದೆ. ಸಿಎಂ ಸೂಚನೆ ಮೇರೆಗೆ ಸಭೆ ನಡೆಸಲಾಯಿತು. ವಿದ್ಯಾರ್ಥಿಗಳ ಕಲಿಕೆ ಮುಂದುವರೆಯಬೇಕು ಎಂಬುದು ನಮ್ಮ ಮೊದಲ ಆದ್ಯತೆಯಾಗಿದೆ. ಯುದ್ಧಪೀಡಿತ ಉಕ್ರೇನ್‌ನಿಂದ ವಾಪಸಾದ 700 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಶಿಕ್ಷಣ ಮೊಟಕುಗೊಳ್ಳಬಾರದು. ಈ ಹಿನ್ನೆಲೆ ರಾಜ್ಯದಲ್ಲಿನ ವೈದ್ಯಕೀಯ ಶಿಕ್ಷಣ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕಲಿಕೆ ಮುಂದುವರಿಸಲು ಅವಕಾಶ ನೀಡಲಾಗುತ್ತದೆ. ಉಚಿತವಾಗಿ ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿಗಳ ಕಲಿಕೆ ಮುಂದುವರಿಕೆಗೆ ಅವಕಾಶ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ರಾಜ್ಯಕ್ಕೆ ಆಗಮಿಸಿರುವ ವಿದ್ಯಾರ್ಥಿಗಳ ಪೈಕಿ ಫಸ್ಟ್ ಇಯರ್ ನಿಂದ ಫೈನಲ್ ಇಯರ್ ಎಂಬಿಬಿಎಸ್ ವಿದ್ಯಾರ್ಥಿಗಳಿರುವುದರಿಂದ ಹಾಗೂ ರಾಜ್ಯದಲ್ಲಿ ಸುಮಾರು 60 ವೈದ್ಯಕೀಯ ಕಾಲೇಜುಗಳಿವೆ. ಇದರಲ್ಲಿ ಎಲ್ಲ ವಿದ್ಯಾರ್ಥಿಗಳನ್ನು ತಕ್ಷಣಕ್ಕೆ ಕಲಿಕೆ ಮುಂದುವರಿಸಲು ಅವಕಾಶ ನೀಡಲಾಗುವುದು. ಕ್ಲಿನಿಕಲ್ ತರಬೇತಿ ಕೂಡ ಮುಂದುವರಿಯಬೇಕು.

ವಿದ್ಯಾರ್ಥಿಗಳನ್ನು ಅಧಿಕೃತವಾಗಿ ನೋಂದಣಿ ಮಾಡಲಾಗುವುದಿಲ್ಲ. ಕಲಿಕೆ ಮುಂದುವರಿಸಲು ಮಾತ್ತ ಅವಕಾಶ ನೀಡಲಾಗುವುದು. ಸರ್ಕಾರವೇ ಅವರಿಗೆ ಕಾಲೇಜು ಯಾವುದು ಅನ್ನುವುದನ್ನು ಆಯ್ಕೆ ಮಾಡಿ ತಿಳಿಸುತ್ತದೆ. ಅವರು ಇರುವ ವಿಳಾಸದ ಆಧಾರದಲ್ಲಿ ಸನಿಹದ ವೈದ್ಯಕೀಯ ಕಾಲೇಜುಗಳನ್ನು ಆಯ್ಕೆ ಮಾಡಿ ಕೊಡಲಾಗುವುದು ಎಂದು ಸಚಿವರು ಹೇಳಿದ್ದಾರೆ.

Leave A Reply