ಮುಕ್ಕೂರು : ವೈಯಕ್ತಿಕ ಅಪಘಾತ ವಿಮೆಯ ಉಚಿತ ನೋಂದಣಿ ಕಾರ್ಯಕ್ರಮ | ಪ್ರಥಮ ಕಂತು ಸಂಘದಿಂದಲೇ ಪಾವತಿ: ಜಗನ್ನಾಥ ಪೂಜಾರಿ ಮುಕ್ಕೂರು

ಮುಕ್ಕೂರು -ಕುಂಡಡ್ಕ ನೇಸರ ಯುವಕ ಮಂಡಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಸಾಮಾಜಿಕ ಕಾರ್ಯ ಚಟುವಟಿಕೆಯ ಅಂಗವಾಗಿ ವೈಯಕ್ತಿಕ ಅಪಘಾತ ವಿಮಾ ಸೌಲಭ್ಯ ನೀಡುವ ವಿನೂತನ ಕಾರ್ಯಕ್ರಮ ಮಾ.20 ರಂದು ಮುಕ್ಕೂರಿನಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಖ್ಯಾತ ವೈದ್ಯ, ಕಾನಾವು ಕ್ಲಿನಿಕ್‍ನ ಡಾ|ನರಸಿಂಹ ಶರ್ಮಾ ಮಾತನಾಡಿ, ಸಮಾಜಮುಖಿ ಚಿಂತನೆಗೆ ತನ್ನನ್ನು ಸಮರ್ಪಿಸಿಕೊಳ್ಳುತ್ತಿರುವ ನೇಸರ ಯುವಕ ಮಂಡಲದ ಉಚಿತ ವಿಮಾ ನೋಂದಣಿ ಇಡೀ ಸಮಾಜಕ್ಕೆ ಮಾದರಿ ಕಾರ್ಯಕ್ರಮ. ನೊಂದವರಿಗೆ ಆಸರೆ ಆಗಬೇಕು ಎನ್ನುವ ನಿಟ್ಟಿನಲ್ಲಿ ಇಡೀ ಕುಟುಂಬಕ್ಕೆ ಭದ್ರತೆ ನೀಡುವ ಈ ಯೋಜನೆ ಶ್ಲಾಘನೀಯವಾದದು ಎಂದರು.

ಪೆರುವಾಜೆ ಗ್ರಾ.ಪಂ.ಅಧ್ಯಕ್ಷ ಹಾಗೂ ನೇಸರ ಯುವಕ ಮಂಡಲದ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ, 60 ವರ್ಷದ ಒಳಗಿನ ವ್ಯಕ್ತಿಗೆ 2.5 ಲಕ್ಷ ರೂ. ವಾರ್ಷಿಕ ವಿಮಾ ಸೌಲಭ್ಯ ನೀಡುವ ಕಾರ್ಯಕ್ರಮವಾಗಿದ್ದು ಒಟ್ಟು 3.15 ಕೋ.ರೂ.ಗಾತ್ರದ ವಿಮಾ ಯೋಜನೆ ಇದಾಗಿದೆ. ಇದರ ಪ್ರಥಮ ವರ್ಷದ ಕಂತನ್ನು ಯುವಕ ಮಂಡಲವೇ ಭರಿಸಲಿದೆ. ಇದಕ್ಕೆ ಅಭೂತಪೂರ್ವ ಬೆಂಬಲ ನೀಡುವ ಮೂಲಕ ಊರಿನ ಜನರು ಇದರ ಯಶಸ್ಸಿಗೆ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.

ಬೆಳ್ಳಾರೆ ಅಸ್ಮಿ ವಾಯುಮಾಲಿನ್ಯ ತಪಾಸಣಾ ಕೇಂದ್ರ ಮತ್ತು ವಾಹನ ವಿಮಾ ಸಲಹೆಗಾರ ಸುಜಿತ್ ರೈ ಪಟ್ಟೆ ಮಾತನಾಡಿ, ವಿಮೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡುವ ಅಗತ್ಯ ಇದೆ. ಇದರ ತಾತ್ಸಾರ ಭಾವನೆ ಬೇಡ. ಆಪತ್‍ಕಾಲದಲ್ಲಿ ಇಡೀ ಕುಟುಂಬಕ್ಕೆ ನೆರವಾಗಲು ಆಗಲು ವಿಮೆಯಿಂದ ಸಾಧ್ಯವಿದೆ. ಹೀಗಾಗಿ ಜೀವ, ವಾಹನ ಹೀಗೆ ಬೇರೆ-ಬೇರೆ ರೂಪದಲ್ಲಿ ಇರುವ ವಿಮೆಗಳನ್ನು ಮಾಡುವ ಮೂಲಕ ಕುಟುಂಬಕ್ಕೆ ಭದ್ರತೆ ಒದಗಿಸಲು ಎಲ್ಲರೂ ಮುಂದಡಿ ಇಡಬೇಕು. ಈ ನಿಟ್ಟಿನಲ್ಲಿ ಉಚಿತ ಅಪಘಾತ ವಿಮೆ ಒದಗಿಸುವ ಯುವಕ ಮಂಡಲದ ಕಾರ್ಯಚಟುವಟಿಕೆ ಶ್ಲಾಘನೀಯ ಸಂಗತಿ ಎಂದರು.

ಪ್ರಗತಿಪರ ಕೃಷಿಕ ಸಂಪತ್ ಕುಮಾರ್ ರೈ ಪಾತಾಜೆ ಮಾತನಾಡಿ, ಪರೋಪಕಾರಿ ಚಿಂತನೆಗಳೊಂದಿಗೆ ಜನರ ನೋವು-ನಲಿವುಗಳಿಗೆ ಸ್ಪಂದಿಸುವುದು ಸಂಘಟನೆಯ ಗುರಿಯಾಗಿರಬೇಕು. ಆ ಕೆಲಸ ಮುಕ್ಕೂರಿನಲ್ಲಿ ನಡೆದಿದೆ. ಈ ಕಾರ್ಯಚಟುವಟಿಕೆ ಇನ್ನಷ್ಟು ಯಶಸ್ಸಿಯಾಗಿ ಮುನ್ನಡೆಯಲಿ ಎಂದರು.

ಪ್ರಗತಿಪರ ಕೃಷಿಕ ಸುಬ್ರಾಯ ಭಟ್ ನೀರ್ಕಜೆ ಮಾತನಾಡಿ, ನೇಸರ ಯುವಕ ಮಂಡಲ ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿ ಸದಾ ಕಾಲ ಜನಪರ ಕಾರ್ಯಚಟುವಟಿಕೆಗಳ ಮೂಲಕ ತನ್ನ ಸಮಾಜಪರ ಚಿಂತನೆಯನ್ನು ಅನುಷ್ಠಾನಿಸುತ್ತಿದೆ. ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.

ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಮಾತನಾಡಿ, ಸಾಮಾಜಿಕ ಕಳಕಳಿಯುಳ್ಳ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಸಂಘಟನೆ ಜನರ ವಿಶ್ವಾಸಕ್ಕೆ ತಕ್ಕಂತೆ ಮುನ್ನಡೆಯುತ್ತಿದೆ. ಇದರಿಂದ ಸಮಾಜಕ್ಕೆ ಅನುಕೂಲವಾಗುತ್ತದೆ ಎಂದರು.

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ ಮಾತನಾಡಿ, ಸಂಘಟನೆಯ ಸದಸ್ಯರುಗಳು ಒಂದೇ ಮನಸ್ಸಿನಂತೆ ಕಾರ್ಯನಿರ್ವಹಿಸಿದಾಗ ಅದರಿಂದ ಯಶಸ್ಸು ಸಾಧ್ಯವಾಗುತ್ತದೆ. ಕೇವಲ ಹೆಸರಿಗೆ ಮಾತ್ರ ಸಂಘಟನೆ ಇದ್ದರೆ ಸಾಲದು. ಅದು ಕ್ರಿಯಾಶೀಲವಾಗಿದ್ದಾಗ ಮಾತ್ರ ಅದಕ್ಕೆ ಸಮಾಜದಲ್ಲಿ ಮನ್ನಣೆ ದೊರೆಯುತ್ತದೆ. ಆ ಕ್ರಿಯಾಶೀಲತೆಯಿಂದಲೇ ನೇಸರ ಯುವಕ ಮಂಡಲಕ್ಕೆ ಇಂತಹ ಚಟುವಟಿಕೆ ಹಮ್ಮಿಕೊಳ್ಳಲು ಸಾಧ್ಯವಾಗಿದೆ. ಈ ಸಂಘಟನೆಗೆ ಊರವರು ಪ್ರೋತ್ಸಾಹ, ಸಹಕಾರ ನೀಡಬೇಕು ಎಂದರು.

ಬೆಳ್ಳಾರೆ ಜೇಸಿಐ ನಿಕಟಪೂರ್ವ ಅಧ್ಯಕ್ಷ ಪದ್ಮನಾಭ ನೆಟ್ಟಾರು ಮಾತನಾಡಿ, ನಿಶ್ಚಿತ ಉದ್ದೇಶದೊಂದಿಗೆ ಸಂಘಟನೆಗಳು ಮುಂದಡಿ ಇಟ್ಟಾಗ ಸಮಾಜ ಒಪ್ಪಿಕೊಳ್ಳುತ್ತದೆ. ಇದರಿಂದ ಸಂಘಟನೆಯು ಸಮಾಜದ ಭಾಗವಾಗಿ ಬೆಳೆಯುಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನೇಸರ ಯುವಕ ಮಂಡಲದ ಉಚಿತ ವಿಮಾ ನೋಂದಣಿ ಕಾರ್ಯಕ್ರಮ ಅತ್ಯುತ್ತಮವಾದದು ಎಂದರು.

ಅರ್ಜಿ ಹಸ್ತಾಂತರಿಸಿ ಚಾಲನೆ

ನ್ಯಾಯವಾದಿ ಗಣಪತಿ ಭಟ್ ನೀರ್ಕಜೆ ಅವರು ನೇಸರ ಯುವಕ ಮಂಡಲದ ಮಾರ್ಗದರ್ಶಕರಾದ ಯತೀಶ್ ಕಾನಾವು ಜಾಲು ಅವರಿಗೆ ವಿಮಾ ನೋಂದಣಿಯ ಅರ್ಜಿ ಹಸ್ತಾಂತರಿಸುವ ಮೂಲಕ ನೋಂದಣಿ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.

ವೇದಿಕೆಯಲ್ಲಿ ಪೆರುವಾಜೆ ಗ್ರಾ.ಪಂ.ಉಪಾಧ್ಯಕ್ಷೆ ಚಂದ್ರಾವತಿ ಇಟ್ರಾಡಿ, ಗ್ರಾ.ಪಂ. ಸದಸ್ಯರಾದ ಗುಲಾಬಿ ಬೊಮ್ಮೆಮಾರು ಉಪಸ್ಥಿತರಿದ್ದರು. ಮುಕ್ಕೂರು ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಜಯಂತ ಗೌಡ ಕುಂಡಡ್ಕ ಸ್ವಾಗತಿಸಿ, ನೇಸರ ಯುವಕ ಮಂಡಲದ ಅಧ್ಯಕ್ಷ ರಮೇಶ್ ಕಾನಾವು ವಂದಿಸಿದರು. ಏನೆಕಲ್ ಶಾಖಾ ಅಂಚೆ ಪಾಲಕಿ ದೀಕ್ಷಾ ನೀರ್ಕಜೆ ನಿರೂಪಿಸಿದರು. ಬೃಂದಾ ಮುಕ್ಕೂರು, ಬೃಂದಾ ಮಂಜುನಾಥನಗರ ನೋಂದಣಿ ವಿಭಾಗದಲ್ಲಿ ಸಹಕರಿಸಿದರು.

ಒಟ್ಟು 3.15 ಕೋ.ರೂ.ಗಾತ್ರ

ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪೆನಿ ಲಿಮಿಟೆಡ್‍ನ ಸಹಭಾಗಿತ್ವದಲ್ಲಿ 60 ವರ್ಷದ ಒಳಗಿನ ವ್ಯಕ್ತಿಗೆ ತಲಾ 2.5 ಲಕ್ಷ ರೂ. ವಾರ್ಷಿಕ ವಿಮಾ ಸೌಲಭ್ಯವನ್ನು ಒಟ್ಟು 125 ಮಂದಿಗೆ ಒದಗಿಸಲಾಯಿತು. ಒಟ್ಟು 3.15 ಕೋ.ರೂ.ಗಾತ್ರದ ವಿಮಾ ಯೋಜನೆ ಇದಾಗಿದ್ದು ಪ್ರಥಮ ಸುತ್ತಿನಲ್ಲಿ ಆಯ್ದ 125 ಮಂದಿಯ ವಿಮೆಯ ಪ್ರಥಮ ವರ್ಷದ ಮೊತ್ತವನ್ನು ನೇಸರ ಯುವಕ ಮಂಡಲ ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿ ತನ್ನ ಉಳಿತಾಯ ನಿಧಿಯಿಂದ ಭರಿಸಲಿದೆ.

ಸಂಘದ ಸದಸ್ಯರಿಗೆ ತಲಾ 10 ಲಕ್ಷ ರೂ.ವಿಮೆ

ನೇಸರ ಯುವಕ ಮಂಡಲ ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಒಟ್ಟು 15 ಮಂದಿ ಸದಸ್ಯರಿಗೆ ತಲಾ 10 ಲಕ್ಷ ರೂ.ವಾರ್ಷಿಕ ವಿಮಾ ಸೌಲಭ್ಯವನ್ನು ನೀಡಲಾಯಿತು. ಒಟ್ಟು 1.5 ಕೋ.ರೂ.ಗಾತ್ರದ ವಿಮಾ ಯೋಜನೆ ಇದಾಗಿದ್ದು ಸಂಘದ ಸದಸ್ಯರುಗಳೇ ಕಂತಿನ ಮೊತ್ತ ಭರಿಸಿದರು.

Leave A Reply

Your email address will not be published.