ಯುವರತ್ನ ಅಪ್ಪುವಿನ ‘ಜೀವನ ಚರಿತ್ರೆ’ ಪಠ್ಯದಲ್ಲಿ!|ಪುನೀತ್ ರಾಜ್‍ಕುಮಾರ್ ಬದುಕನ್ನು ಪಠ್ಯವನ್ನಾಗಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ -ಬಿ. ಸಿ ನಾಗೇಶ್

ಬೆಂಗಳೂರು:ನಗುವಲ್ಲೇ ಎಲ್ಲರನ್ನೂ ಮೋಡಿ ಮಾಡೋ ಸರದಾರ ದೊಡ್ಮನೆ ಹುಡುಗನೇ ಪುನೀತ್ ರಾಜ್ ಕುಮಾರ್. ಸರಳತೆಯ ಜೀವನ, ಕೈಲಾದಷ್ಟು ಸಹಾಯ ಹಸ್ತ, ಪ್ರೀತಿಯ ಮಾತು, ಸಮಾನತೆಯ ಗುಣ ಇವೇ ಇವರನ್ನು ಜಗತ್ತಿಗೆ ಪರಿಚಯಿಸುವಂತೆ ಮಾಡಿದ ಸರಳ ಸೂತ್ರಗಳು.ಈ ಹಸನ್ಮುಖಿಯ ದೇಹ ನಮ್ಮನ್ನೆಲ್ಲ ಅಗಲಿದರು ಅವರ ನೆನಪು ಮಾತ್ರ ಮನದಾಳದಿ ಅಚ್ಚಳಿಯಾಗಿಯೇ ಉಳಿದಿದೆ.

ಇಂತಹ ಯಶೋಗಾಥೆಯ ಜೀವನ ಚರಿತ್ರೆ ಪಠ್ಯದಲ್ಲಿ ಅಳವಡಿಸಬೇಕೆಂಬುದು ಅಭಿಮಾನಿ ಬಳಗದ ಕನಸು. ಇದೀಗ ಈ ಕನಸು ನನಸಾಗೋ ಸಮಯ ಹತ್ತಿರದಲ್ಲಿದೆ. ಹೌದು. ಯುವರತ್ನ ಅಪ್ಪುವಿನ ಜೀವನ ಚರಿತ್ರೆ ಪಠ್ಯದಲ್ಲಿ ಅಳವಡಿಸುವ ಸಾಧ್ಯತೆಯಿದೆ.

ಚಿಕ್ಕ ವಯಸ್ಸಿನಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದು ಕನ್ನಡಿಗರ ಕಣ್ಮಣಿಯಾಗಿ ರಾರಾಜಿಸಿ ಇತ್ತೀಚೆಗಷ್ಟೆ ನಿಧನ ಹೊಂದಿರುವ ಪುನೀತ್ ರಾಜ್‍ಕುಮಾರ್ ಅವರ ಜೀವನ ಗಾಥೆಯನ್ನು ಪ್ರಾಥಮಿಕ ಶಾಲಾ ಮಕ್ಕಳಿಗೆ ಪಠ್ಯವನ್ನಾಗಿ ಮಾಡುವಂತೆ ಹಲವಾರು ಸಂಘ-ಸಂಸ್ಥೆಗಳಿಂದ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಈ ಸಂಬಂಧ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಭರವಸೆ ನೀಡಿದ್ದಾರೆ.

ಪುನೀತ್ ಅವರ ಸಜ್ಜನತೆಯ ಜೀವನ ಗಾಥೆ ಮುಂದಿನ ಜನಾಂಗಕ್ಕೆ ಮಾದರಿಯಾಗಬೇಕು ಎಂಬ ಉದ್ದೇಶದಿಂದ ಅವರ ಚರಿತ್ರೆಯನ್ನು ಪ್ರಾಥಮಿಕ ಶಾಲೆಯ 4 ಅಥವಾ 5ನೆ ತರಗತಿಯ ಪಠ್ಯದಲ್ಲಿ ಅಳವಡಿಕೆ ಮಾಡಬೇಕು ಎಂದು ಹಲವಾರು ಸಂಘ-ಸಂಸ್ಥೆಗಳು ಬಿಬಿಎಂಪಿಯ ಶಿಕ್ಷಣ ವಿಭಾಗಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಚಲನಚಿತ್ರ ನಟರಾಗಿದ್ದರೂ 26 ಅನಾಥಾಶ್ರಮ, 19 ಗೋಶಾಲೆ, 16 ವೃದ್ಧಾಶ್ರಮ ಹಾಗೂ 4800ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳ ಓದಿಗೆ ಸೂರ್ತಿಯಾಗಿದ್ದ ಪುನೀತ್ ರಾಜ್‍ಕುಮಾರ್ ಅವರ ಪಠ್ಯವನ್ನು ಪ್ರಾಥಮಿಕ ಶಾಲಾ ಪುಸ್ತಕದಲ್ಲಿ ಅಳವಡಿಸುವಂತೆ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಅವರು ಶಿಕ್ಷಣ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದರು.

ಬಿಬಿಎಂಪಿ ಶಿಕ್ಷಣ ಇಲಾಖೆಗೆ ಬಂದಿದ್ದ ಸಂಘ-ಸಂಸ್ಥೆಗಳ ಮನವಿಯನ್ನು ಪಾಲಿಕೆ ಅಧಿಕಾರಿಗಳು ಶಿಕ್ಷಣ ಸಚಿವರ ಗಮನಕ್ಕೆ ತಂದಿದ್ದರು. ಎನ್.ಆರ್.ರಮೇಶ್ ಹಾಗೂ ಬಿಬಿಎಂಪಿಯ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಪ್ರಾಥಮಿಕ ಶಾಲೆಯ 4 ಅಥವಾ 5ನೆ ತರಗತಿಯ ಪಠ್ಯದಲ್ಲಿ ಪುನೀತ್ ರಾಜ್‍ಕುಮಾರ್ ಅವರ ಬದುಕನ್ನು ಪಠ್ಯವನ್ನಾಗಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ನಾಗೇಶ್ ಅವರು ಭರವಸೆ ನೀಡಿದ್ದಾರೆ. ಪುನೀತ್ ಮರಣದ ನಂತರವೇ ಬೆಳಕಿಗೆ ಬಂದ ನಟನ ಸಾಮಾಜಿಕ ಕೆಲಸಗಳಿಗೆ ಇಡೀ ಚಲನಚಿತ್ರ ರಂಗ ಮತ್ತು ದೇಶಾದ್ಯಂತ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.

Leave A Reply

Your email address will not be published.